ಜನತೆಗೆ ಉತ್ಕೃಷ್ಟ ರೈಲು ಸಂಚಾರ ಸೇವಾ ಸೌಲಭ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಸರಕಾರ ಅನೇಕ ಕ್ರಮ ಕೈಗೊಂಡಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನಂತಹ ಉನ್ನತ ದರ್ಜೆಯ ರೈಲುಗಳ ಸಂಚಾರವನ್ನು ಹೆಚ್ಚಿಸಿದೆ. ರೈಲುಗಳನ್ನು ಶುಚಿ-ಸುರಕ್ಷಿತವಾಗಿ ಇಟ್ಟುಕೊಳ್ಳುವಲ್ಲಿ ನಾಗರಿಕರ ಸಹಕಾರ ಅಗತ್ಯ. ಕೆಲವು ಪ್ರಯಾಣಿಕರು ಎಲ್ಲೆಂದರಲ್ಲಿ ಕಸ ಎಸೆಯುವುದು, ಆಸನಗಳನ್ನು ಮಲಿನಗೊಳಿಸುವುದು ಮಾಡುತ್ತಾರೆ. ಇನ್ನು ಕೆಲವು ಕಿಡಿಗೇಡಿಗಳು, ರಾಷ್ಟ್ರವಿರೋಧಿ ಶಕ್ತಿಗಳು ರೈಲುಗಳ ಮೇಲೆ ಕಲ್ಲು ಎಸೆಯುವ ಕೃತ್ಯದಲ್ಲಿ ತೊಡಗುತ್ತಾರೆ. ನಮ್ಮೊಳಗಿನ ಇಂತಹ ಹಿತಶತ್ರುಗಳು ಇಷ್ಟಕ್ಕೆ ತೃಪ್ತರಾದಂತಿಲ್ಲ. ಇದೀಗ ರೈಲು ಹಳಿಗಳ ಮೇಲೆ ಈ ದೇಶದ್ರೋಹಿಗಳ ಕಾಕದೃಷ್ಟಿ ಬಿದ್ದಂತೆ ಕಾಣುತ್ತಿದೆ. ರೈಲು ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್, ಕಲ್ಲುಗಳನ್ನು ಇಡುವ ಕುಕೃತ್ಯಗಳು ದಿನೇದಿನೆ ಹೆಚ್ಚುತ್ತಿವೆ. ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಇಂತಹ ಘಟನೆಗಳು ಈಗ ಕರ್ನಾಟಕ, ಕೇರಳ ಸಹಿತ ದಕ್ಷಿಣದ ರಾಜ್ಯಗಳ ಬಾಗಿಲಿಗೂ ಬಂದು ನಿಂತಿದೆ. ಇದರ ಹಿಂದೆ ದೇಶದ ಏಳಿಗೆ ಸಹಿಸದ ಸಮಾಜ ವಿರೋಧಿ ಶಕ್ತಿಗಳ ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆಯೋ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಿಸುವುದು ಪ್ರತಿಯೋರ್ವ ನಾಗರಿಕನ ಆದ್ಯ ಕರ್ತವ್ಯ ಎಂದು 1976ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಸೇರಿಸಲಾದ ನಾಗರಿಕರ ಮೂಲ ಕರ್ತವ್ಯದಲ್ಲಿ ಹೇಳಲಾಗಿದೆ. ಸಂವಿಧಾನ ಅಪಾಯದಲ್ಲಿದೆ ಎನ್ನುವವರೂ ರಾಷ್ಟ್ರವಿರೋಧಿ ಕೃತ್ಯದ ಕುರಿತು ಸೌಮ್ಯ ನಿಲುವು ತಾಳುವುದು ಆಶ್ಚರ್ಯವೇ ಸರಿ. ಕೇವಲ ಹಕ್ಕುಗಳ ಕುರಿತು ಅರಿವು ನೀಡುವ ನಾವು ಸಂವಿಧಾನದಲ್ಲಿ ವಿವರಿಸಿರುವ 10 ಮೂಲ ಕರ್ತವ್ಯದ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದರಲ್ಲಿ ವಿಫಲರಾಗುತ್ತಿದ್ದೇವೆಯೇ? ದೇಶ ಚೆನ್ನಾಗಿದ್ದರೆ ನಮ್ಮೆಲ್ಲರ ಬದುಕು ಸುಂದರ. “ಒಲೆ ಹೊತ್ತಿ ಉರಿದೊಡೆ ನಿಲಲುಬಹುದು, ಧರೆ ಹೊತ್ತಿ ಉರಿದೊಡೆ ನಿಲಲುಬಾರದು ಎಂದಿದ್ದಾರೆ’ ಸರ್ವಜ್ಞ. ದೇಶದ ಅಸ್ತಿತ್ವವೇ ಗಂಡಾಂತರದಲ್ಲಿದ್ದರೆ ನಮ್ಮೆಲ್ಲರ ಬದುಕು ನೆಮ್ಮದಿಯಿಂದ ಕೂಡಿರಲು ಸಾಧ್ಯವಿಲ್ಲ ಎನ್ನುವುದನ್ನು ಪ್ರಪಂಚದಾದ್ಯಂತ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ನಾವು ಅರಿತುಕೊಳ್ಳಬೇಕು. ದೇಶದ ಆಸ್ತಿ, ಸಂಪತ್ತಿನ ರಕ್ಷಣೆ ಪ್ರತಿಯೋರ್ವ ನಾಗರಿಕನ ಮೂಲ ಕರ್ತವ್ಯ.
ದೇಶ ರಕ್ಷಣೆ ಕೇವಲ ಸೈನಿಕರು, ಪೊಲೀಸರ ಜವಾಬ್ದಾರಿ ಎಂದು ಸಾಮಾನ್ಯ ನಾಗರಿಕರು ಸುಮ್ಮನೆ ಕುಳಿತುಕೊಳ್ಳುವ ಕಾಲ ಇದಲ್ಲ. ಕೆಲವು ವರ್ಷಗಳ ಹಿಂದೆ ಮುಂಬಯಿ ಮೇಲೆ ಪಾಕಿಸ್ಥಾನದ ಕಡೆಯಿಂದ ಸಮುದ್ರ ಮಾರ್ಗದ ಮೂಲಕ ದಾಳಿ ನಡೆದಾಗ ನಾವು ಕರಾವಳಿ ರಕ್ಷಣೆಯ ಕುರಿತು ಜಾಗೃತರಾದೆವು. ಇದೀಗ ಅಂತಹದೇ ಮತ್ತೂಂದು ಸಂಕಷ್ಟ ನಮಗೆ ಎದುರಾಗಿದೆ. ಭಾರತೀಯ ರೈಲ್ವೇಯು ವಿಶಾಲ ಹಳಿಗಳ ನೆಟ್‌ವರ್ಕ್ ಹೊಂದಿದೆ. ಲಕ್ಷಾಂತರ ಜನ ಪ್ರತಿನಿತ್ಯ ರೈಲು ಯಾತ್ರೆ ಮಾಡುತ್ತಾರೆ. ಅವರ ಸುರಕ್ಷೆ ರೈಲ್ವೇ ಇಲಾಖೆಯ ಜವಾಬ್ದಾರಿ ಹೌದಾದರೂ ಸಾಮಾನ್ಯ ನಾಗರಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕಾದ ಪ್ರಮೇಯ ಈಗ ಬಂದಿದೆ.
ಪ್ರತಿಯೊಂದು ರೈಲ್ವೇ ಸ್ಟೇಶನ್ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರು ಸ್ವಯಂಪ್ರೇರಿತರಾಗಿ ಸಣ್ಣ ಸಣ್ಣ ತಂಡ ರಚಿಸಿಕೊಳ್ಳುವಂತಾಗಬೇಕು. ಮತ್ತು ಆ ಸ್ವಯಂಸೇವಕರು ರೈಲು ಹಳಿಗಳ ನಿಗಾ ಇಡಬೇಕು. ಅನಪೇಕ್ಷಿತ ವಿದ್ಯಮಾನಗಳ ಕುರಿತು ಸಕಾಲದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬಹುದು. ನೂರಾರು ಅಮಾಯಕರ ಸಾವು-ನೋವು ತಪ್ಪಿಸಬಹುದು. ಇಂತಹ ಪ್ರಯತ್ನ ಕರ್ನಾಟಕದಿಂದಲೇ ಪ್ರಾರಂಭವಾಗಲಿ. ದೇಶಸೇವೆ ಮಾಡಲು ಇದು ಒಳ್ಳೆಯ ಅವಕಾಶ. ಯುವಪೀಳಿಗೆ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಲಿ.
ಕಳೆದ ನಾಲ್ಕು ವರ್ಷಗಳಿಂದ ಇರಲು ಪಕ್ಕಾ ಬ್ಯಾರಕ್ ಇಲ್ಲದ ಚೀನದ ಗಡಿಯಲ್ಲಿ, ಸಹಿಸಲಸಾಧ್ಯವಾದ ಮೈ ನಡುಗುವ ಚಳಿಯಲ್ಲೂ ಭಾರತೀಯ ಯೋಧರು ಚೀನೀಯರಿಗೆ ಸಡ್ಡು ಹೊಡೆದುನಿಂತ ಸೈನಿಕರ ತ್ಯಾಗ ನಮ್ಮೆದುರು ಇದೆ. ಕಾಶ್ಮೀರದಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಎದುರಿನಿಂದ ಪಾಕಿಸ್ಥಾನೀ ಧೂರ್ತರು, ಹಿಂದಿನಿಂದ ಆತಂಕವಾದಿಗಳೊಂದಿಗೆ ಸೆಣಸುತ್ತಾ ಸಾವಿರಾರು ಸೈನಿಕರು ಜೀವದ ಹಂಗು ತೊರೆದು ಹೋರಾಡಿ ತಮ್ಮ ಪ್ರಾಣವನ್ನೇ ರಾಷ್ಟ್ರಕ್ಕಾಗಿ ಸಮರ್ಪಿಸಿದ್ದಾರೆ. ಮೂಲಸೌಕರ್ಯವೂ ಇಲ್ಲದ ಅರಣ್ಯದಲ್ಲಿ, ಗಡಿಯಲ್ಲಿ ಕಠಿನ ಬದುಕು ನಡೆಸುತ್ತಿರುವ ರಾಷ್ಟ್ರ ಪ್ರಹರಿಗಳ, ಆಂತರಿಕ ಸುರಕ್ಷೆಗಾಗಿ ನಿಯೋಜಿಸಲ್ಪಟ್ಟ ಪೊಲೀಸರ ತ್ಯಾಗ, ಬಲಿದಾನದಿಂದ ದೇಶದ ನಾಗರಿಕರು ಸುಖಶಾಂತಿಯಿಂದ ಬದುಕುತ್ತಿದ್ದಾರೆ. ಇವರೆಲ್ಲರ ಶ್ರಮ, ತ್ಯಾಗ ಮತ್ತು ಸಂಕಲ್ಪ ವ್ಯರ್ಥವಾಗಬಾರದು.
ದೇಶದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಇನ್ನೂ ಅಪಾಯಕಾರಿ. ಬಲಿಷ್ಠ ರಕ್ಷಣ ಪಡೆಯ ಜತೆಯಲ್ಲಿ ಜಾಗೃತ ನಾಗರಿಕರಿದ್ದಾಗ ಮಾತ್ರ ದೇಶ ಸುರಕ್ಷಿತ ಎನ್ನುವುದನ್ನು ಮರೆಯದಿರೋಣ. ದೇಶಾದ್ಯಂತದ ರೈಲು ಹಳಿಗಳು ಸುರಕ್ಷಿತವಾಗಿರಲಿ, ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬದುಕು ಸುರಕ್ಷಿತವಾಗಿರಲಿ.
ಭಾರತೀಯ ರೈಲ್ವೇಯು ವಿಶಾಲ ಹಳಿಗಳ ನೆಟ್‌ವರ್ಕ್ ಹೊಂದಿದೆ. ಲಕ್ಷಾಂತರ ಜನ ಪ್ರತಿನಿತ್ಯ ರೈಲು ಯಾತ್ರೆ ಮಾಡುತ್ತಾರೆ. ಅವರ ಸುರಕ್ಷೆ ರೈಲ್ವೇ ಇಲಾಖೆಯ ಜವಾಬ್ದಾರಿ ಹೌದಾದರೂ ಸಾಮಾನ್ಯ ನಾಗರಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕಾದ ಪ್ರಮೇಯ ಈಗ ಬಂದಿದೆ. ಕಿಡಿಗೇಡಿಗಳು, ರಾಷ್ಟ್ರವಿರೋಧಿ ಶಕ್ತಿಗಳು ರೈಲು ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್, ಕಲ್ಲುಗಳನ್ನು ಇಡುವ ಕುಕೃತ್ಯಗಳು ದಿನೇದಿನೆ ಹೆಚ್ಚುತ್ತಿವೆ. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಂದು ರೈಲ್ವೇ ಸ್ಟೇಶನ್ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರು ಸ್ವಯಂಪ್ರೇರಿತರಾಗಿ ಸಣ್ಣ ಸಣ್ಣ ತಂಡ ರಚಿಸಿಕೊಳ್ಳಬೇಕು. ಅನಪೇಕ್ಷಿತ ವಿದ್ಯಮಾನಗಳ ಕುರಿತು ಸಕಾಲದಲ್ಲಿ ಈ ಸ್ವಯಂಸೇವಕರು ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬಹುದು. ನೂರಾರು ಅಮಾಯಕರ ಸಾವು-ನೋವು ತಪ್ಪಿಸಬಹುದು. ಇಂತಹ ಪ್ರಯತ್ನ ಕರ್ನಾಟಕದಿಂದಲೇ ಪ್ರಾರಂಭವಾಗಲಿ. ದೇಶಸೇವೆ ಮಾಡಲು ಇದು ಒಳ್ಳೆಯ ಅವಕಾಶ. ಬಲಿಷ್ಠ ರಕ್ಷಣ ಪಡೆಯ ಜತೆಯಲ್ಲಿ ಜಾಗೃತ ನಾಗರಿಕರಿದ್ದಾಗ ಮಾತ್ರ ದೇಶ ಸುರಕ್ಷಿತ ಎನ್ನುವುದನ್ನು ಮರೆಯದಿರೋಣ.
-ಬೈಂದೂರು ಚಂದ್ರಶೇಖರ ನಾವಡ