ರಾಜಕೀಯದಂತಹ ವಾಸ್ತವಿಕತೆ ತುಂಬಿಕೊಂಡ ಕ್ಷೇತ್ರದಲ್ಲಿಯೂ ಕೆಲವೊಮ್ಮೆ ಸತ್ಯ ಕಾದಂಬರಿಗಿಂತಲೂ ವಿಚಿತ್ರವಾಗಿರುತ್ತದೆ. ಫ್ಯಾಂಟಸಿಯ ಅಂಶವನ್ನು ಹೊಂದಿರುತ್ತದೆ. ಈ ಮಾತಿಗೆ ದೊಡ್ಡ ಉದಾಹರಣೆ ಕಾಂಗ್ರೆಸ್ ಸಾಮ್ರಾಜ್ಯದ ಪತನ. ನೂರಾರು ವರ್ಷಗಳ ಕಾಲ ದೇಶದ ಜೀವಾಳವಾಗಿ ಹೋಗಿದ್ದ ಕಾಂಗ್ರೆಸ್ ದೇಶದಲ್ಲಿ ಇಷ್ಟು ಶಕ್ತಿಹೀನವಾಗಿ ಹೋಗಿರು ವು ದು ಮತ್ತು ಗಾಂಧಿ-ನೆಹರು ಕುಟುಂಬಕ್ಕೆ ಸೇರಿದ ಪಕ್ಷದ ಅಧ್ಯಕ್ಷರು ಸೋಲಿಗೆ ಜವಾಬ್ದಾರಿ ಹೊತ್ತು ತಮ್ಮ ಸ್ಥಾನ ಬಿಟ್ಟುಕೊಡಲು ಮುಂದಾದದ್ದೆಲ್ಲ ಕಲ್ಪನಾ ವಿಲಾಸಕ್ಕೂ ಮೀರಿದ ವಾಸ್ತವ.
ಅದೂ ಎಂತಹ ಸೋಲು! ಕಾಂಗ್ರೆಸ್ ಅಧ್ಯಕ್ಷರನ್ನು ಹಿಡಿದು ಮಲ್ಲಿಕಾರ್ಜುನ ಖರ್ಗೆಯವರಂತಹ ಎಂದೂ ಸೋಲದ ನಾಯಕರು ಸೋತು ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಪಕ್ಷದ ಮತಗಳಿಕೆಯ ಪ್ರಮಾಣವೂ ವಿಷಾದನೀಯವಾಗಿ ಉಳಿದು ಹೋಗಿದೆ. ಉದಾಹರಣೆಗೆ ಕಾಂಗ್ರೆಸ್‌ನ ಹಲವು ಅಭ್ಯ ರ್ಥಿಗಳು ಲಕ್ಷ ಲಕ್ಷ ಮತಗಳ ಅಂತರದಿಂದ ಸೋತಿದ್ದಾರೆ. ಅಂದರೆ ಪಕ್ಷದ ಮಾಸ್-ಬೇಸ್ ಅಥವಾ ಜನರ ಮನಸ್ಸಿನೊಳಗೆ ಅದರ ಬೇರು ಗಳು ನಾಶವಾಗಿ ಹೋದಂತೆಯೇ ಅನಿಸುತ್ತಿದೆ. ರಾಜ್ಯಗಳಲ್ಲಿನ ಅಲ್ಪ ಬಹುಮತದ ಕಾಂಗ್ರೆಸ್ ಸರಕಾರಗಳು ಕೂಡ ಈಗ ಬೇಲಿಯ ಮೇಲೆ ಕುಳಿತಿವೆ. ಇಂತಹ ಸ್ಥಿತಿಯಲ್ಲಿರುವ ಪಕ್ಷಕ್ಕೆ ಪುನರ್‌ಜೀವಕೊಡಲು ಸಾಧ್ಯವೇ ಎನ್ನುವುದು ಈಗಿನ ಮುಖ್ಯ ಪ್ರಶ್ನೆ. ಈ ಕಠಿನ ಪ್ರಶ್ನೆಯನ್ನು ಎದುರಿಸುವ ಮೊದಲು ಎಂಬತ್ತರ ದಶಕದ ಹಿಂದೆ ಪಕ್ಷ ಏಕೆ ದೇಶದ ಜನರ ಕಣ್ಮಣಿಯಾಗಿತ್ತು ಎನ್ನುವುದನ್ನು ಗಮನಿಸಿಕೊಳ್ಳಬೇಕು. ಇಲ್ಲಿ ನೋಡಿಕೊಳ್ಳಬೇಕಾದ ವಿಚಾರವೆಂದರೆ ಅಂದು ಪಕ್ಷ ಕೇವಲ ಜನಜೀವನದ ರಾಜಕೀಯ ಆಯಾಮವಾಗಿರಲಿಲ್ಲ. ಅದು ಜೀವನದ ವಿಧಾನವೇ ಆಗಿ ಹೋಗಿತ್ತು. ಹಾಗೆ ಇದ್ದುದಕ್ಕೆ ಕಾರಣಗಳಿವೆ. ಪ್ರಮುಖವಾದದ್ದೆಂದರೆ ಪಕ್ಷ ಹುಟ್ಟಿಕೊಂಡಿದ್ದು ಗಾಂಧಿ ಚಳುವಳಿಯ ಶ್ರೇಷ್ಠ ಚಿಂತನೆಗಳ, ತ್ಯಾಗದ, ದೇಶ ಪ್ರೇಮದ ಕುಲುಮೆಯಲ್ಲಿ. ದೇಶ ಪ್ರೇಮ, ತ್ಯಾಗ ಇತ್ಯಾದಿ ಮಹಾನ್ ಮೌಲ್ಯಗಳೇ ಅಂದಿನ ಕಾಂಗ್ರೆಸ್ ಮೌಲ್ಯಗಳಾಗಿದ್ದವು. ಗಮನಿಸಿಕೊಳ್ಳಬೇಕು. ಗಾಂಧಿ ಹಾಗೂ ಮತ್ತಿತರ ಸಮಕಾಲೀನ ಮಹಾನುಭಾವರು ಅದಕ್ಕೆ ದೇಶದ ಇತಿಹಾಸ ಮತ್ತು ಸಂಸ್ಕೃತಿಗಳ ಹೂರಣವನ್ನು ಒಂದು ಕಡೆಯಿಂದ ಧಾರೆ ಎರೆದಿದ್ದರೆ ಇನ್ನೊಂದು ಕಡೆಯಿಂದ ನೆಹರು ಅದಕ್ಕೆ ಪ್ರಗತಿಪರತೆ ಮತ್ತು ವೈಜ್ಞಾನಿಕ, ವೈಚಾರಿಕ ಮನೋಭಾವಗಳ ಕೊಡುಗೆ ನೀಡಿದ್ದರು.
ಹೀಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಉನ್ನತ ತತ್ವ, ಆದರ್ಶಗಳ ಸಂಗಮದ ಪುಣ್ಯ ಸ್ಥಳವಾಗಿ ಇದ್ದಿದ್ದು ಕಾಂಗ್ರೆಸ್. ಸಹಜವಾಗಿಯೇ ಪಕ್ಷಕ್ಕೆ ಸನಾತನಿಗಳನ್ನು ಹಾಗೂ ಆಧುನಿಕರನ್ನು ಚುಂಬಕದಂತೆ ಸೆಳೆಯುವ ಸಾಮರ್ಥ್ಯವಿತ್ತು. ಪಕ್ಷ ಹೀಗಾಗಿಯೇ ಪಕ್ಷದ ತತ್ವಗಳಲ್ಲಿ ವಿಶ್ವಾಸವಿಟ್ಟಿದ್ದ, ತಮ್ಮ ಜೀವನವನ್ನೇ ಅದರ ಮಾರ್ಗಕ್ಕೆ ಮುಡಿಪಾಗಿಡಲು ಸಿದ್ಧವಿದ್ದ ಕೋಟ್ಯಂತರ ಅಭಿಮಾನಿಗಳು ದೇಶದ ಹಳ್ಳಿ-ಹಳ್ಳಿಗಳಲ್ಲಿಯೂ ಹುಟ್ಟಿಕೊಂಡಿದ್ದು. ಅದು ದೇಶದ ವೈವಿಧ್ಯತೆಗೊಂದು ಏಕತೆ ನೀಡಿದ ರಾಜಕೀಯ ಕೇಂದ್ರಬಿಂದುವಾಗಿತ್ತು ಕೂಡ. ವಿವಿಧ ತತ್ವಗಳನ್ನು ಪ್ರತಿಪಾದಿಸುವ ನೆಹರು, ಸರ್ದಾರ್ ಪಟೇಲ್, ಅಂಬೇಡ್ಕರ್ ಮುಂತಾದವರೆಲ್ಲರೂ ಕಾಂಗ್ರೆಸ್‌ನ ಒಳಗೆಯೇ ಇದ್ದರು. ಶಾಸ್ತ್ರಿಯಂತಹ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ ಸರಳ ನಾಯಕರು ಇದ್ದರು. ಹಾಗೆಯೇ ಸಮಾಜವಾದಿ ಧೋರಣೆ ಹೊಂದಿ ಬ್ಯಾಂಕ್ ರಾಷ್ಟ್ರೀಕರಣ, ಗರೀಬಿ ಹಠಾವೋ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಂಡ ಇಂದಿರಾ ಗಾಂಧಿ ಪಕ್ಷದ ಬೇರುಗಳು ಅತ್ಯಂತ ಹಿಂದುಳಿದ, ಅನಕ್ಷರಸ್ಥ ದೀನ ದಲಿತರ ಮನಸ್ಸುಗಳೊಳಗೆ ಆಳವಾಗಿ ಇಳಿದುಕೊಳ್ಳಲು ಕಾರಣರಾದ್ದರು.
ಇನ್ನೊಂದು ಅಂಶವನ್ನೂ ಗಮನಿಸಿಕೊಳ್ಳಲೇಬೇಕು. ಏನೆಂದರೆ, ಕಾಂಗ್ರೆ ಸ್ ಗೆ ದಟ್ಟವಾದ ಹಿಂದೂ ಸ್ವರೂಪವಿತ್ತು. ಇಂದಿರಾಗಾಂಧಿ ವಾಜಪೇಯಿ ಯಂಥವರಿಗೇ ದುರ್ಗೆಯಂತೆ ಕಂಡು ಬಂದಿದ್ದರು. ಸಂಜಯ ಗಾಂಧಿಯವರು ಹಮ್ಮಿಕೊಂಡಿದ್ದ ಕುಟುಂಬ ಯೋಜನೆ ಕಾರ್ಯಕ್ರಮ ಗಳಿಗೆ ಕೇಸರಿ ಬಣ್ಣವಿತ್ತು. ಕುತೂಹಲವೆಂದರೆ ಹೀಗೆ ಹಿಂದುತ್ವವನ್ನು ಒಳ ಬುನಾದಿಯಾಗಿಟ್ಟುಕೊಂಡಂತೆ ಅನಿಸುತ್ತಿದ್ದ ಕಾಂಗ್ರೆಸ್‌ಗೆ ಬೇರೆ ಪಕ್ಷಗಳು ಹಿಂದುತ್ವದ ಆಧಾರದ ಮೇಲೆ ಹುಟ್ಟಿಕೊಳ್ಳದಂತೆ ನೋಡಿಕೊಳ್ಳುವಷ್ಟು ಶಕ್ತಿ ಇತ್ತು. ಹಾಗೆಂದು ಮೈನಾರಿಟಿಗಳು ತನ್ನಿಂದ ದೂರವಾಗದಂತೆ ಅವರನ್ನು ಬೇರೆಯವರಿಂದ ದೂರವಿಡುವಷ್ಟು ಜಾಣತನ, ಪ್ರಗತಿಪರತೆ ಮತ್ತು ನ್ಯಾಯಪರತೆ ಪಕ್ಷಕ್ಕೆ ಇತ್ತು. ಅಲ್ಪಸಂಖ್ಯಾಕರಲ್ಲಿ ವಿಶ್ವಾಸ ಹುಟ್ಟಿಸುವಂತಹ ನಾಯಕತ್ವ ಕೂಡ ಅದಕ್ಕಿತ್ತು. ನೆಹರೂ, ಇಂದಿರಾ ನಾಯಕತ್ವ ಹೊಂದಿದ್ದ ಪಕ್ಷ ಎಡ-ಬಲ ಎಲ್ಲವೂ ತಾನೇ ಆಗಿ ಭಾರತದ ಸಮಾಜವನ್ನು ಅನಂತರ ಉಳಿದ ಪಕ್ಷಗಳು ಮೂರು ಹೋಳಾಗಿ ಒಡೆದಂತೆ ಅಂದರೆ, ಹಿಂದೂ ಮೇಲ್ವರ್ಗ, ಹಿಂದೂ-ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾಕ ವರ್ಗ ಹೀಗೆ ವಿಭಜಿಸಲು ಬಿಡಲೇ ಇಲ್ಲ.
ಕಾಂಗ್ರೆಸ್‌ನ ಅಧೋಮುಖ ಚಲನೆ ಆರಂಭವಾಗಿದ್ದು ಪಕ್ಷದ ನಾಯಕತ್ವ ಎಂಬತ್ತರ ದಶಕದಲ್ಲಿ ಬಹುಶಃ ತನ್ನ ಮೂಲ ಮೌಲ್ಯಗಳ ಕುರಿತು ಇಬ್ಬಂದಿತನ ತೋರತೊಡಗಿದಾಗ. ಈ ದಶಕದ ಆದಿ ಭಾಗದಲ್ಲಿ ಬಂದ ಶಾ-ಭಾನೋ ಪ್ರಕರಣ ಮತ್ತು ರಾಮ ಮಂದಿರದಂತಹ ಧಾರ್ಮಿಕ ಜೇನುಗೂಡುಗಳಿಗೆ ಪಕ್ಷ ಕಲ್ಲೆಸೆದುಕೊಂಡಾಗ ಎಂದೇ ಅನಿಸಿಕೆ. ಶಾ-ಭಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ತಿರುಚಿ ಅದು ಹಿಂದೂಗಳ ಬೆಂಬಲ ಕಳೆದುಕೊಂಡರೆ ಅನಂತರ ರಾಮ ಮಂದಿರದ ಬಾಗಿಲುಗಳನ್ನು ತೆರೆದು ಮುಸ್ಲಿಂ ಸಮುದಾಯದ ವಿಶ್ವಾಸ ಕಳೆದುಕೊಂಡು ಬಿಟ್ಟಿತೇ ಎನ್ನುವ ಪ್ರಶ್ನೆ ಇದೆ. ಅಷ್ಟೇ ಅಲ್ಲ, ಮಂಡಲ ಆಯೋಗದ ಸಂದರ್ಭದಲ್ಲಿ ಕೂಡ ಸ್ಪಷ್ಟವಾದ ನಿಲುವು ತಾಳಲಾಗದ ಪಕ್ಷ ಹಿಂದೂ-ಹಿಂದುಳಿದ ವರ್ಗದಿಂದ ಕೂಡ ಮಾನಸಿಕವಾಗಿ ದೂರವಾಗಿ ಹೋಯಿತೇ ಎನ್ನುವ ವಿಚಾರವೂ ಇದೆ. ದೇಶದ ಮೂರು ಪ್ರಮುಖ ರಾಜಕೀಯ ಶಕ್ತಿಗಳನ್ನು ಬಹುಶಃ ಕಾಂಗ್ರೆಸ್ ಕಳೆದುಕೊಂಡಿದ್ದು ಹೀಗೆ. ಅದು ತನ್ನ ವಿಶಾಲ ಹಿಂದುತ್ವದ ಮೂಲಗಳನು, ಅಷ್ಟೇ ಅಲ್ಲ, ಪ್ರಗತಿಪರತೆಯ ಆಯಾಮಗಳನ್ನು ಕೂಡ ಕಳೆದುಕೊಂಡು ಕುಳಿತದ್ದೇ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇರಿಲ್ಲದಿರುವ ಕಾರಣ ಇರ ಬ ಹು ದು. ಇಷ್ಟೆಲ್ಲ ಆಗಿ ಹೋದರೂ ಪಕ್ಷ ತೊಂಬತ್ತರ ದಶಕದಲ್ಲಿ ಮರಳಿ ಅಧಿಕಾರಕ್ಕೆ ಬಂದಿದ್ದು ನಕಾರಾತ್ಮಕ ಮತಗಳಿಂದಾಗಿ. ಬೇರೆಯವರು ಬೇಡ ಎಂಬ ಕಾರಣಕ್ಕೆ. ಹಾಗಾಗಿಯೇ ಪಕ್ಷಕ್ಕೆ ಪೂರ್ಣ ಬಹುಮತ ಇರಲಿಲ್ಲ. ಹಾಗೆಂದು ಈ ಸಂದರ್ಭದಲ್ಲಿ ಅಂದಿನ ಕಾಂಗ್ರಸ್ ಪ್ರಧಾನಿ ಪಿ.ವಿ.ನರಸಿಂಹರಾವ್ ಆರಂಭಿಸಿದ ಆರ್ಥಿಕ ಸುಧಾರಣೆಗಳು ದೇಶದ ಮತ್ತು ಕಾಂಗ್ರೆಸ್ ಪಕ್ಷದ ಪುನರುಜ್ಜೀವನಕ್ಕೆ ಮುನ್ನುಡಿ ಬರೆದವು. ಆರ್ಥಿಕ ಸುಧಾರಣೆಗಳು ದೇಶದಲ್ಲಿ ಒಂದು ದೊಡ್ಡ ಮಧ್ಯಮ ವರ್ಗವನ್ನು ಸೃಷ್ಟಿಸಿದ್ದು ಈಗ ಇತಿಹಾಸ. ಜಾಗತೀಕರಣದ ಲಾಭ ಪಡೆದ ನಗರಗಳ ಹಿನ್ನೆಲೆಯುಳ್ಳ ಇಂತಹ ಹೊಸ ಮಧ್ಯಮವರ್ಗ ನರಸಿಂಹರಾವ್/ಮನಮೋಹನ್‌ಸಿಂಗ್ ಜಾರಿಗೆ ತಂದ ಜಾಗತೀಕರಣವನ್ನು ಭಾರಿ ಪ್ರಮಾಣದಲ್ಲಿ ಬೆಂಬಲಿಸಿತು. ಮುಂದೆ ಹತ್ತು ವರ್ಷಗಳ ಕಾಲ ಪಕ್ಷ ದೇಶವನ್ನು ಆಳಿದ್ದು, ಮನಮೋಹನ ಸಿಂಗ್ ನಾಯಕರಾಗಿ ಹೊರಹೊಮ್ಮಿದ್ದು ಈ ಹಿನ್ನೆಲೆಯಲ್ಲಿ.ಆದರೆ ದುರದೃಷ್ಟವಶಾತ್ ಕಾಂಗ್ರೆಸ್ ಇಲ್ಲಿ ಮತ್ತೆ ಎಡವಿತು ಎಂದೇ ಅನಿಸಿಕೆ ಇದೆ. ಅದೇನೆಂದರೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಸಮಾಜವಾದಿ ಧೋರಣೆಯ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಸಾಧಿಸುವ ಉತ್ಸಾಹದಲ್ಲಿ ಆರ್ಥಿಕ ಸುಧಾರಣೆಗಳನ್ನು ಬಲವಾಗಿ ಮುಂದುವರಿಸಲೇ ಇಲ್ಲವೇ ಎನ್ನುವ ಪ್ರಶ್ನೆ ಇದೆ. ಅಷ್ಟೇ ಅಲ್ಲ, ತಾನು ಆರ್ಥಿಕ ಸುಧಾರಣೆಗಳ ಪರವಾಗಿದ್ದೇನೆಯೇ ಅಥವಾ ವಿರೋಧವಾಗಿದ್ದೇನೆಯೇ ಎನ್ನುವ ಇಬ್ಬಂದಿತನದಲ್ಲಿ ಅದು ಈಗ ಸಿಲುಕಿಬಿಟ್ಟಿತು ಎನ್ನುವ ವಾದವೂ ಇದೆ.
ಮೊದಲು ಧಾರ್ಮಿಕ ಸ್ವರೂಪದ ಇಬ್ಬಂದಿತನ ಹೊಂದಿದ ಪಕ್ಷ ಈಗ ಆರ್ಥಿಕ ವಾಗಿಯೂ ತಾನು ಯಾವ ಕಡೆ ಇದ್ದೇನೆ ಎಂದು ಹೇಳಿಕೊಳ್ಳುವು ದರಲ್ಲಿ ವಿಫಲವಾಗಿ ಹೋಯಿತು ಎಂಬುದೇ ತಜ್ಞರ ವಾದ. ಪಕ್ಷದ ಹಿನ್ನಡೆಗೆ ಕಾರಣವಾಗಿದ್ದು ಈ ಇಬ್ಬಂದಿತನಗಳು ಎನ್ನುವುದೇ ಇಲ್ಲಿ ಇರುವ ಅನಿಸಿಕೆ.
ಯಾವ ರೀತಿಯ ಇಬ್ಬಂದಿತನಗಳು?
ಮೊದಲನೆಯದು ರಾಷ್ಟ್ರೀಯತೆಯ ಪ್ರಶ್ನೆ ಕುರಿತಂತೆ ಪಕ್ಷದ ನಿಲುವು. ಯಾರು ಏನೇ ಹೇಳಲಿ, ಸೂಕ್ಷ್ಮವಾಗಿ ದೇಶದಲ್ಲಿ ಹಿಂದುತ್ವ ಹಾಗೂ ರಾಷ್ಟ್ರೀಯತೆ ಐತಿಹಾಸಿಕವಾಗಿಯೇ ಒಂದರ ಜತೆ ಒಂದು ತಳಕು ಹಾಕಿಕೊಂಡೇ ಬಿಟ್ಟಿವೆ. ಬಾಲಗಂಗಾಧರ ತಿಲಕ್ ಗಣೇಶೋತ್ಸವಗಳನ್ನು ರಾಷ್ಟ್ರೀಯತೆಯ ಪ್ರಚೋದನೆಗೆ ಬಳಸಿಕೊಂಡಿದ್ದನ್ನು ನೆನಪಿಸಿಕೊಳ್ಳಬೇಕು. ಇಂದಿನ ದಿನಗಳಲ್ಲಂತೂ ಈ ಭಾವನೆ ಖಂಡಿತಕ್ಕೂ ಜಾಗೃತಗೊಂಡುಬಿಟ್ಟಿದೆ. ಇದು ಸಹಜ ಪ್ರಕ್ರಿಯೆ ಕೂಡ. ಏಕೆಂದರೆ ಆರ್ಥಿಕವಾಗಿ ಸಬಲವಾಗುತ್ತ ಹೋಗುವ ಪ್ರತಿಯೊಂದು ಧರ್ಮ ಜಾತಿಗಳಿಗೂ ಇಂತಹ ಭಾವನೆ ಜಾಗೃತವಾಗುತ್ತದೆ.
ಹಾಗೆಯೇ ಹಿಂದೂಗಳಿಗೆ ನೋವಾಗುವಂತೆ ಬಹುಶಃ ಕಾಂಗ್ರೆಸ್ ತೆಗೆದುಕೊಂಡ ಧರ್ಮ ನಿರಪೇಕ್ಷ ರಾಜಕೀಯ ನಿರ್ಣಯಗಳು ಕೂಡ ಇದಕ್ಕೆ ಕಾರಣ. ಹಾಗೆಂದು ಬಹುಶಃ ಪಕ್ಷ ಇಲ್ಲಿಯೂ ಒಂದು ಕಡೆ ಸ್ಥಿರವಾಗಿ ನಿಲ್ಲಲಿಲ್ಲ. ಒಂದು ಕಡೆ ಹಿಂದುತ್ವ ವಿರೋಧಿ ನಿಲುವು ಘೋಷಿಸಿಕೊಂಡ ಪಕ್ಷ ಇನ್ನೊಂದು ಕಡೆ ಮೃದು ಹಿಂದುತ್ವ ಎನ್ನುವ ಹೆಸರಿನಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಲು ಆರಂಭಿ. ಈ ಗೊಂದಲವೇ ಪಕ್ಷವನ್ನು ಎಲ್ಲರಿಂದಲೂ ದೂರೀಕರಿಸಿದೆಯೇ? ಹಾಗೆಯೇ ತನ್ನ ಆರ್ಥಿಕ ನೀತಿಯ ಕುರಿತಂತೆ ಕೂಡ ಪಕ್ಷ ಗೊಂದಲದಲ್ಲಿದೆ. ಅಂದರೆ ಕಾಂಗ್ರೆಸ್, ಮುಕ್ತ ಮಾರುಕಟ್ಟೆಯ ಪರವಾಗಿದೆಯೇ ಅಥವಾ ಸಮಾಜವಾದಿ ಆರ್ಥಿಕತೆಯ ಪರವಾಗಿದೆಯೇ ಎನ್ನುವ ಕುರಿತು ಜನತೆಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.
ಮರುಹುಟ್ಟು ಪಡೆಯಲು ಪಕ್ಷ ಏನು ಮಾಡಬೇಕು ಎನ್ನುವುದು ಬಹುಶಃ ಸ್ಪಷ್ಟವಿದೆ. ತುರ್ತಾಗಿ ಅದು ಇಂದು ಮಾಡಬೇಕಿರುವುದೆಂದರೆ ತನ್ನ ವ್ಯಕ್ತಿತ್ವವನ್ನು, ಕೇಂದ್ರ ಮೌಲ್ಯಗಳನ್ನು ಗಟ್ಟಿಯಾಗಿ ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಸ್ಪಷ್ಟವಾಗಿ ಗುರುತಿಸಿಕೊಳ್ಳುವುದು. ಇದು ಮಹತ್ವದ್ದು. ಏಕೆಂದರೆ ರಾಜಕೀಯ ತತ್ವಗಳಿಗೆ ವ್ಯಕ್ತಿಗಳಿಗಿಂತಲೂ ಹೆಚ್ಚಿನ ಶಕ್ತಿ ಇರುತ್ತದೆ. ಅವಕ್ಕೆ ನಾಯಕರನ್ನು ಸೃಷ್ಟಿಸುವ ಸಾಮರ್ಥ್ಯವಿರುತ್ತದೆ. ಅವರ ಬಾಯಲ್ಲಿ ಪ್ರಚಂಡ ಮಾತುಗಳನ್ನಿಡುವವು ತತ್ವಗಳೇ. ಲಕ್ಷಾಂತರ ಜನರನ್ನು ಸೆಳೆಯುವ ಅವರ ಮನ ಕರಗಿಸುವ ಸಾಮರ್ಥ್ಯವಿರುವುದೂ ರಾಜಕೀಯ ತತ್ವಗಳಿಗೇ. ಕಾಂಗ್ರೆಸ್ ಮಾಡಬೇಕಿರುವುದು ಇದು. ಅದು ತನ್ನ ನಿಜವಾದ ತನ್ನತನವನ್ನು ಹೇಳಬೇಕಿದೆ.
ಡಾ| ಆರ್.ಜಿ. ಹೆಗಡೆ, ದಾಂಡೇಲಿ