Advertisement
ಸಕ್ಕರೆ ಕಾಯಿಲೆ ಎಂದಾಕ್ಷಣ ಕಳವಳದಿಂದ ಮುಖ ಸಿಂಡರಿಸಿಕೊಳ್ಳುವವರೇ ಜಾಸ್ತಿ, ಅಂತಹ ರೋಗ ಈ ಸಕ್ಕರೆ ಕಾಯಿಲೆ/ಡಯಾಬಿಟಿಸ್/ಮಧುಮೇಹ. ಮಧುಮೇಹ ರಕ್ತದಲ್ಲಿ ಗ್ಲೂಕೋಸ್ ಅಥವಾ ಸಕ್ಕರೆ ಮಟ್ಟ ಜಾಸ್ತಿಯಾಗುವುದರಿಂದ ಕಾಣಿಸಿಕೊಳ್ಳುವ ಒಂದು ರೋಗ ಲಕ್ಷಣ. ವ್ಯಕ್ತಿಯೊಬ್ಬನ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದ್ದಿರೆ ಅಥವಾ ದೇಹವು ಇನ್ಸುಲಿನ್ಗೆ ಸರಿಯಾಗಿ ಸ್ಪಂದಿಸದೇ ಇದ್ದ ಪಕ್ಷದಲ್ಲಿ ಈ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
1ನೆಯ ವಿಧದ ಮಧುಮೇಹ:
1ನೆ ವಿಧದ ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕೂಡ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಜ್ಯುವೆನಿಲ್ ಮಧುಮೇಹ ಎಂತಲೂ ಕರೆಯುತ್ತಾರೆ ಏಕೆಂದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಕೆಲವೊಮ್ಮೆ 40 ವರ್ಷಗಳವರೆಗಿನ ವಯೋಮಾನದವರಲ್ಲೂ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. 2ನೆ ವಿಧದ ಮಧುಮೇಹ:
ಮಧುಮೇಹದ 2ನೆ ವಿಧ ಸಾಮಾನ್ಯವಾಗಿ ವಯಸ್ಕರಲ್ಲಿ ಮತ್ತು ಮುಖ್ಯವಾಗಿ ಅಧಿಕ ತೂಕದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಶರೀರದ ಜೀವಕೋಶಗಳು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯಿಸದಂತಹ ಸ್ಥಿತಿಯಲ್ಲಿ ಹೆಚ್ಚಿನ ಇನ್ಸುಲಿನ್ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಮೇಧೋಜೀರಕಗ್ರಂಥಿ ವಿಫಲವಾದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
Related Articles
ಮಧುಮೇಹದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಇರದಿರಬಹುದು, ಆದ್ದರಿಂದ ವ್ಯಕ್ತಿಯೊಬ್ಬರಿಗೆ ತನಗೆ ಮಧುಮೇಹ ಇದೆ ಎಂದು ತಿಳಿಯದೆ ಇರಬಹುದು. ನಮಗರಿವಿಲ್ಲದೆ ಯಾವುದೇ ಲಕ್ಷಣವಿಲ್ಲದೇ ಕಣ್ಣು, ಮೂತ್ರಪಿಂಡಗಳು, ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯುಂಟಾಗುತ್ತಿರಬಹುದು.
Advertisement
ಮಧುಮೇಹದ ಕೆಲ ಲಕ್ಷಣಗಳು ಈ ತೆರನಾಗಿದೆ:
ಪದೇ ಪದೇ ಬಾಯಾರಿಕೆ ಅಗುವುದು: ಹೆಚ್ಚಿನ ನೀರು ಕುಡಿಯುವುದು ಒಳ್ಳೆ ಅಭ್ಯಾಸ. ಆದರೆ ನಿಮಗೆ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಯಾಕೆಂದರೆ ಬಾಯಾರಿಕೆಗೆ ನೀರು ಕುಡಿದ ಬಳಿಕವೂ ನೀರು ಕುಡಿಯುತ್ತಲಿದ್ದರೆ ಇದು ಮಧುಮೇಹದ ಲಕ್ಷಣವಾಗಿರಬಹುದು.
ಚರ್ಮದ ಅಸ್ವಾಭಾವಿಕ ಸ್ಥಿತಿಗಳು:ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಏರುಪೇರಾದರೆ ಮೊದಲು ಇದರ ಪರಿಣಾಮ ಚರ್ಮದ ಮೇಲಾಗುತ್ತದೆ. ಚರ್ಮದಲ್ಲಿ ಕಪ್ಪು ಕಲೆಗಳಾಗುವುದು, ನೆರಿಗೆ ಮೂಡುವುದ, ಬಣ್ಣ ತಿಳಿಯಾಗುವುದು ಅಥವಾ ಗಾಢವಾಗುವುದು ಮೊದಲಾದ ಲಕ್ಷಣಗಳು ಕಂಡುಬರುತ್ತದೆ. ಸತತ ತುರಿಕೆ:
ಮಧುಮೇಹದ ಮೂಲಕ ರಕ್ತ ಸಂಚಾರದಲ್ಲಿ ಕೊಂಚ ತೊಂದರೆ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಹೃದಯ ಭಾಗದಿಂದ ದೂರದಲ್ಲಿರುವ ಪಾದ ಮತ್ತು ಕೈ ಭಾಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗದೇ ಆದ್ರತೆಯ ಕೊರತೆಯಿಂದ ಚರ್ಮ ಒಣಗುತ್ತದೆ. ಇದರಿಂದ ಆ ಭಾಗಗಳಲ್ಲಿ ಸತತ ತುರಿಕೆಯ ಲಕ್ಷಣ ಕಂಡುಬರುತ್ತದೆ. ಸತತ ಸೋಂಕು :
ಮಧುಮೇಹ ಪ್ರಾರಂಭವಾಗುವಾಗ ದೇಹದರೋಗ ನಿರೋಧಕ ಶಕ್ತಿ ಕೊಂಚ ಕಡಿಮೆಗೊಳ್ಳುವುದಿರಿಂದ ರೋಗಿಗಳು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ದಾಳಿಗೆ ಸುಲಭವಾಗಿ ತುತ್ತಾಗುತ್ತಾರೆ. ಉಸಿರಿನಲ್ಲಿ ದುರ್ವಾಸನೆ:
ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಂಡ ಬಳಿಕವೂ ದುರ್ವಾಸನೆ ದೂರವಾಗದಿದ್ದರೆ ಮಧುಮೇಹದ ಪರೀಕ್ಷೆಯಾಗಲೇಬೇಕು ಎಂಬುದನ್ನು ಸೂಚಿಸುತ್ತದೆ. ಏಕೆಂದರೆ ಬಾಯಿಗೆ ಲಭಿಸುವ ಲಾಲಾರಸದಲ್ಲೂ ಸಕ್ಕರೆ ಅಂಶ ಹೆಚ್ಚಿದ್ದು ಇಲ್ಲಿ ಬ್ಯಾಕ್ಕೀರಿಯಾಗಳು ಸಕ್ಕರೆಯನ್ನು ಶೀಘ್ರವಾಗಿ ಕೊಳೆಸುತ್ತದೆ. ದೇಹದ ತೂಕದಲ್ಲಿ ಏರುಪೇರು:
ನಮಗರಿವಿಲ್ಲದೆ ದೇಹದ ತೂಕದಲ್ಲಿ ದಿನೇ ದಿನೇ ಇಳಿಮುಖವಾಗುತ್ತಿರುವುದು ಇನ್ನೊಂದು ಸ್ಪಷ್ಟ ಸೂಚನೆಯಾಗಿರುತ್ತದೆ. ರಕ್ತದಲ್ಲಿ ಸಕ್ಕರೆ ಇಲ್ಲದಿದ್ದರೆ ಅಥವಾ ಇದ್ದಿದ್ದೂ ಬಳಕೆಯಾಗದೇ ಇದ್ದರೆ ಜೀವಕೋಶಗಳು ತಮ್ಮ ಸಾಮರ್ಥ್ಯಕ್ಕೆ ಪೂರಕವಾದ ಕೆಲಸಗಳನ್ನು ನಿರ್ವಹಿಸಲಾಗದೆ ಇರಬಹುದು. ಆಗ ಅನಿವಾರ್ಯವಾಗಿ ದೇಹಕ್ಕೆ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗುತ್ತದೆ. ಇದು ಶೀಘ್ರವಾಗಿ ತೂಕ ಇಳಿಯಲು ಕಾರಣವಾಗುತ್ತದೆ. ನಿಶ್ಯಕ್ತಿಯಿಂದ ಬಳಲುವುದು:
ಸರಿಯಾಗಿ ನಿದ್ರೆ ಬರುತ್ತಿದ್ದರೂ ದೇಹ ಮಾತ್ರ ಬಳಲಿಕೆಯಿಂದ ಇದ್ದರೆ ಆಗ ಮಾತ್ರ ಇದು ಮಧುಮೇಹದ ಲಕ್ಷಣವಾಗಿರಬಹುದು. ಆಗ ನಾವು ತಿನ್ನುತ್ತಿರುವ ಆಹಾರವು ಸರಿಯಾಗಿ ವಿಭಜನೆಗೊಳ್ಳದೆ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ಶಕ್ತಿಯ ರೂಪದಲ್ಲಿ ದೇಹವು ಸದುಪಯೋಗಪಡಿಸಿಕೊಳ್ಳಲು ಆಗದು. ಇದರಿಂದಾಗಿ ಅಂತಹ ವ್ಯಕ್ತಿಗಳಲ್ಲಿ ದಿನವಿಡಿ ಆಯಾಸ ಕಾಡುವುದು ಸಾಮಾನ್ಯವಾಗುತ್ತದೆ. ಹಸಿವು ಆಗುವುದು:
ಇನ್ಸುಲಿನ್ ಪ್ರತಿರೋಧಕದಿಂದಾಗಿ ದೇಹದಲ್ಲಿರುವ ರಕ್ತನಾಳಗಳು ಸಕ್ಕರೆಯನ್ನು ಹೀರಿಕೊಳ್ಳಲು ವಿಫಲವಾದ ವೇಳೆ ಬೇರೆ ಮೂಲಗಳಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಿರುವುದರಿಂದ ಹಸಿವಿನ ಪ್ರಮಾಣ ಹೆಚ್ಚಾಗುತ್ತಾ ಇರುವುದು. ದೃಷ್ಟಿ ಮಂದವಾಗುವುದು:
ಮಧು ಮೇಹದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ದೃಷ್ಟಿ ಮಂದವಾಗುವುದು. ಕಣ್ಣಿನಲ್ಲಿ ದ್ರವವು ಶೇಖರಣೆಯಾಗುವುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೊದಲು ಪರೀಕ್ಷೆ ಮಾಡಿಕೊಂಡು ಅದನ್ನು ನಿಯಂತ್ರಣಕ್ಕೆ ತರುವುದು ಉತ್ತಮ. ಗಾಯ ಒಣಗಲು ತುಂಬಾ ಸಮಯ ಬೇಕಾಗುತ್ತದೆ:
ಯಾವುದೇ ಗಾಯ ಅಥವಾ ತರಚಿದ ಗಾಯವು ಗುಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಾ ಇದ್ದರೆ ಆಗ ದೇಹದಲ್ಲಿ ಏನೂ ಸರಿಯಾಗಿಲ್ಲವೆಂದು ತಿಳಿಯಬೇಕು. ಕೇಳುವ ಸಾಮರ್ಥ್ಯ ಕುಂದುವುದು:
ಇತ್ತೀಚಿನ ಸಂಶೋಧನೆಯ ಪ್ರಕಾರ ಮಧುಮೇಹದ ಪರಿಣಾಮವಾಗಿ ಕಿವಿಯ ಶ್ರವಣ ಶಕ್ತಿಗೆ ರಕ್ತ ಸಂಚಾರ ಒದಗಿಸುವ ಸೂಕ್ಷ್ಮ ನರಗಳ ಮೇಲೂ ಪ್ರಭಾವ ಬೀರುವ ಮೂಲಕ ಕಿವಿಯ ಕೇಳುವಿಕೆ ಕ್ಷಮತೆ ಕಡಿಮೆಯಾಗುತ್ತದೆ.