Advertisement

ಎಷ್ಟು ಅಭಾಗ್ಯನಿವ ಜಫ‌ರ್‌!

10:00 AM Jan 06, 2020 | mahesh |

ಪರದೇಶಕ್ಕೆ ಹೋದಾಗ, ನಮ್ಮ ದೇಶದ ಪ್ರಖ್ಯಾತ ವ್ಯಕ್ತಿಯೊಬ್ಬರನ್ನು ಭೇಟಿಯಾದೆವೆಂದರೆ, ಆತ್ಮೀಯತೆ- ಅಭಿಮಾನಗಳೆರಡೂ ಉಕ್ಕಿ ಹರಿಯುವುದುಂಟು. ಬರ್ಮಾ ಪ್ರವಾಸದಲ್ಲಿ, ನಮ್ಮ ದೇಶದ ಸಾಮ್ರಾಟನಾಗಿದ್ದ, ಮೊಘಲ ವಂಶದ ಕೊನೆಯ ಚಕ್ರವರ್ತಿ ಬಹಾದೂರ್‌ ಶಾ ಜಫ‌ರನ ಗೋರಿಯನ್ನು ನೋಡಲು ಹೊರಟಾಗ, ನಮ್ಮಲ್ಲಿ ಅಂಥದ್ದೆ ಭಾವನೆಗಳು ಹುಟ್ಟಿದವು. ಆದರೆ, ಜಫ‌ರನ ಕಡೆಕಾಲದ ದಾರುಣ ಸ್ಥಿತಿಯು ನೆನೆಪಿಗೆ ಬಂದು, ನಮ್ಮ ಭಾವನೆಗಳಲ್ಲಿ ವಿಷಾದದ ಛಾಯೆಯೂ ಸೇರಿತ್ತು.

Advertisement

1857ರ ಭಾರತದ ಮೊದಲ ಸ್ವಾತಂತ್ರ್ಯ ಸಮರದ (ಸಿಪಾಯಿ ದಂಗೆ) ಲಾಂಛನವಾಗಿದ್ದ, ಮುದಿಪ್ರಾಯದ ಜಫ‌ರನ್ನು ಬ್ರಿಟಿಷರು ಗಡೀಪಾರು ಮಾಡಿ ರಂಗೂನಿನಲ್ಲಿ ಸೆರೆ ಇಟ್ಟಿದ್ದರು. ಜಫ‌ರನನ್ನು ದೇಶದ್ರೋಹಿ ಎಂದು ಸಾಬೀತುಪಡಿಸಿ, ಹೆಂಡತಿ-ಮಕ್ಕಳೊಂದಿಗೆ ದಿಲ್ಲಿಯಿಂದ ಬಂಗಾಳ-ಅಸ್ಸಾಂ ದಾರಿಯಾಗಿ, ಬರ್ಮಾದವರೆಗೆ ಉದ್ದಕ್ಕೂ ಎತ್ತಿನಬಂಡಿಯಲ್ಲಿ ಬ್ರಿಟಿಷ್‌ ಸೈನ್ಯದ ಕಾವಲಿನೊಂದಿಗೆ ಕೊಂಡೊಯ್ದಿದ್ದರು. ಮುಂದೆ ಆತ ಬದುಕಿದ್ದು ನಾಲ್ಕೇ ವರ್ಷ. ಸೆರೆಯಲ್ಲಿರುವಾಗಲೇ ಮರಣಗೊಂಡದ್ದರಿಂದ, ಆತನ ಗೋರಿಯೂ ಅಲ್ಲಿಯೇ ಇರುವಂತಾಯಿತು. ಈ ಗೋರಿಯು, ನಡೆದು ಹೋದ ಸ್ವಾತಂತ್ರ್ಯ ಸಮರದ ನೆನಪುಗಳನ್ನು ಕೆದಕಿ, ಭಾರತದ ಬಿಡುಗಡೆಯ ಕನಸಿನ ಚಿಗುರು ಗಳನ್ನು ಹಸುರಾಗಿಸಿ, ಒಂದಲ್ಲ ಒಂದು ದಿನ ಮತ್ತೂಮ್ಮೆ ಸಿಪಾಯಿದಂಗೆಯಂತಹ ತುಮುಲಗಳಿಗೆ ಕಾರಣವಾಗಬಹುದೆಂದು ಹೆದರಿದ ಬ್ರಿಟಿಷರು, ಆ ಬಗ್ಗೆ ಹೆಚ್ಚು ಪ್ರಚಾರ ಕೊಡದೆ, ಮರಣಹೊಂದಿದ ಕೆಲವೇ ಗಂಟೆಗಳಲ್ಲಿ ಯಾವುದೇ ಗೌಜಿ-ಗಲಾಟೆಯಿಲ್ಲದೆ ದಫ‌ನ ಕಾರ್ಯವನ್ನು ಮುಗಿಸಿ ಗೋರಿಯನ್ನು ಗೋಪ್ಯವಾಗಿಟ್ಟಿದ್ದರು. ಕ್ರಮೇಣ ಅದರ ನೆನಪೇ ಆಳಿಸಿಹೋಗುವಂತಾಗಿತ್ತು.

ಆಕಸ್ಮಿಕವಾಗಿ ಸಿಕ್ಕಿದ ಗೋರಿ
ಒಂದು ಶತಮಾನ ದಾಟಿದ ಮೇಲೆ, 1994ರಲ್ಲಿ ಚರಂಡಿ ದುರಸ್ತಿ ಮಾಡುವ ಕೆಲಸಗಾರರಿಗೆ ಆಕಸ್ಮಿಕವಾಗಿ ಸಿಕ್ಕಿದ ಗೋರಿಯಿಂದಾಗಿ ವಿಷಯ ಬೆಳಕಿಗೆ ಬಂದು, ಭಾರತ ಸರಕಾರದ ಸಹಕಾರದಿಂದ ಅಲ್ಲಿ ಜ‚ಫ‌ರನ ಸ್ಮಾರಕವನ್ನು ರಚಿಸಲಾಯಿತು. ಈ ಸ್ಮಾರಕವು ಜ‚ಫ‌ರನ ದರ್ಗಾ, ಮಸೀದಿ ಮತ್ತು ಇತರ ಅನುಕೂಲತೆಗಳನ್ನೊಳಗೊಂಡು, ಅಲ್ಲಿಯ ಮುಸ್ಲಿಮರ (ಬಹುತೇಕ ಹಿಂದೆ ಭಾರತ-ಬರ್ಮಾ ದೇಶಗಳು ಬ್ರಿಟಿಷರ ಕೆಳಗೆ ಒಂದಾಗಿದ್ದಾಗ ಇಲ್ಲಿಂದ ವಲಸೆ ಹೋದವರ) ಪ್ರಾರ್ಥನೆಗೂ, ಇತರ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಿಗೂ ಕೇಂದ್ರವಾಯಿತು.

ರಂಗೂನಿನ ಪ್ರಸಿದ್ಧ ಶ್ವೆಡೆಗೋನ್‌ ಪಗೋಡಾ ನೋಡಿ ಮುಗಿಯುವಾಗ ಮಧ್ಯಾಹ್ನವಾಗಿತ್ತು. ಜ‚ಫ‌ರನ ಗೋರಿಗೆ ಅಲ್ಲಿಂದ ಹೆಚ್ಚು ದೂರವಿರಲಿಲ್ಲ. ಗೇಟಿನ ಕಮಾನಾಕಾರದ ಜಾಲರಿಯಲ್ಲಿದ್ದ ಬಹಾದೂರ್‌ ಶಾನ ಹೆಸರು ದೂರಕ್ಕೆ ಕಾಣಿಸುತ್ತಿತ್ತು. ಆದರೆ, ಜಗತ್ತಿನಲ್ಲೇ ಭವ್ಯತೆಗೆ ಹೆಸರಾದ ತಾಜ್‌ಮಹಲ್‌ನಂಥ ಮೊಘಲ್‌ ಸ್ಮಾರಕಗಳಿಗೆ ಹೋಲಿಸಿದರೆ ಇದೊಂದು ತೀರಾ ಸಾಧಾರಣವಾದ ಸಣ್ಣ ಕಟ್ಟಡ. ನಾವು ತಲಪಿದಾಗ ಮಧ್ಯಾಹ್ನದ ನಮಾಜಿನ ಸಮಯ. ಹಾಗಾಗಿ, ಹೊರಗೆ ಅಂಗಳದಲ್ಲಿ ಸ್ವಲ್ಪ ಹೊತ್ತು ಕಾಲಹರಣ ಮಾಡಬೇಕಾಯ್ತು. ಆಗ ಜ‚ಫ‌ರನು ಕಡೆಗಾಲದಲ್ಲಿ ತನ್ನನ್ನೇ ಹಳಿದುಕೊಂಡು ಬರೆದ ಕವಿತೆಯ ಸಾಲುಗಳು ನೆನಪಿಗೆ ಬಂದು, ಮನಸ್ಸು ವಿಷಣ್ಣವಾಯಿತು.

ನಮ್ಮ ಪ್ರವಾಸಿ ಗುಂಪಿನಲ್ಲಿ ಬರ್ಮಾ ಪ್ರವಾಸದುದ್ದಕ್ಕೂ ಹಳೆಯ ಹಿಂದಿ ಸಿನೆಮಾ ಗೀತೆಗಳನ್ನು ಹಾಡಿ ನಮ್ಮನ್ನು ರಂಜಿಸುತ್ತಿದ್ದ ಕಿಶೋರ್‌ ಆ ಇಡೀ ಗಜಲ್‌ನ್ನು ನೆನಪಿಗೆ ತಂದುಕೊಂಡು, ಮನತಟ್ಟುವಂತೆ ಹಾಡಿದರು. ಬಹಾದೂರ್‌ ಶಾ ಸಿನೆಮಾದಲ್ಲಿ ಮಹಮ್ಮದ್‌ ರಫಿ ಹಾಡಿದ್ದ ಆ ಹಾಡು ನಮ್ಮನ್ನು ಜಫ‌ರನ ಲೋಕಕ್ಕೆ ಒಯ್ಯಿತು: ಲಗತಾ ನಹೀ ಹೈ ದಿಲ್‌ ಮೆರಾ…

Advertisement

ಮನಕಿಲ್ಲ ನೆಮ್ಮದಿಯು ಈ ಭಗ್ನ ನಾಡಿನಲಿ
ತೃಪ್ತಿ ಸಿಕ್ಕೀತೇ ಈ ನಿಷ್ಪಲ ಜಗದಿ
ಬೇಡಿ ಸಿಕ್ಕಿದ ದೀರ್ಘ‌ ಬಾಳಲ್ಲಿ, ದಕ್ಕಿದ್ದು ನಾಲ್ಕು ದಿನ
ಹಾತೊರೆದು ಕಳೆದವೆರಡು, ಮತ್ತೆರಡು ಕಾಯುತ್ತ
ಹೇಳು ಬೇರೆಡೆ ನೆಲಸಲು ಈ ಹಂಬಲಗಳಿಗೆ
ಈ ಹಾಳು ಹೃದಯದಲಿ ಅವಕೆಲ್ಲಿ ಜಾಗ
ಎಷ್ಟು ಅಭಾಗ್ಯನಿವ ಜಫ‌ರ, ಹುಗಿಯಲವನ
ಎರಡು ಗಜ ನೆಲವೂ ಸಿಗದಾಯಿತೇ, ಪ್ರಿಯಜನರ ನಾಡಲ್ಲಿ
ಕಡೆಯ ದಿನಗಳಲ್ಲಿ ತನ್ನ ದೇಶದಿಂದ, ತನ್ನವರಿಂದ ಎಂದೆಂದಿಗೂ ದೂರವಾಗಿದ್ದ ಜ‚ಫ‌ರನ ಕವನದ ಸಾಲುಗಳು ಅವಸಾನಕ್ಕೆ ಇಳಿಯುತ್ತಿರುವ ಮೆಟ್ಟಲುಗಳ ಸಾಲುಗಳಂತಿವೆ. ಜಫ‌ರನು ಮನತಟ್ಟುವ ನಜಮ, ಶಾಯರಿ, ಗಜಲ್‌ಗ‌ಳನ್ನು ಬರೆದಿದ್ದು ಇವತ್ತಿಗೂ ಅವು ಪ್ರಸಿದ್ಧವಾಗಿವೆ. ತನ್ನ ಕವನಗಳಲ್ಲಿ ಸೂಫಿ ತತ್ವದ ಅಧ್ಯಾತ್ಮಿಕ ಸೂಕ್ಷ್ಮತೆಗಳನ್ನು ಅತ್ಯಂತ ನಾಜೂಕಾಗಿ, ಕಲಾತ್ಮಕವಾಗಿ ಅಳವಡಿಸಿಕೊಂಡಿದ್ದ ಆತನನ್ನು ಜನ ಸೂಫಿ ಸಂತನೆಂದೇ ಪರಿಗಣಿಸುತ್ತಿದ್ದಾರೆ. ಕೊನೆಗಾಲದಲ್ಲಿ ಖನ್ನತೆಗೊಳಗಾಗಿದ್ದ ಆತನಿಗೆ ಕವಿತೆಗಳೇ ಆಸರೆಯಾಗಿದ್ದವು. ಬಂಧನದಲ್ಲಿರು ವಾಗ ಬರೆದ ಕವಿತೆಗಳಲ್ಲಿ ತೀವ್ರ ಹತಾಶೆ, ಅಸಹಾಯಕತೆ ಮತ್ತು ಒಂಟಿತನಗಳ ನೋವಿನ ಮಿಡಿತವಿದೆ. ಎಲ್ಲಿಯವರೆಗೆಂದರೆ ಕಾಗದ, ಲೇಖನಿಗಳೂ ಕೈಗೆ ಸಿಗದಂತೆ ಮಾಡಿದ್ದರಿಂದ, ಗೋಡೆಯ ಮೇಲೆ ಸುಟ್ಟ ಕಡ್ಡಿಯಿಂದ ಕವನ ಬರೆಯುವ ದುಃಸ್ಥಿತಿ ಅವನದಾಗಿತ್ತು.

ಒಳಗೆ ಹೋದರೆ, ಒಂದು ಕಡೆ ಎತ್ತರದ ವೇದಿಕೆ ಮೇಲೆ ಗೋರಿ, ಎದುರು ಕೆಳಭಾಗದಲ್ಲಿ ನಮಾಜು ಮಾಡುವ ಜಾಗ. ಗೋರಿಯ ಭಾಗಕ್ಕೆ ಅಂಗಳದಿಂದ ಪ್ರತ್ಯೇಕವಾದ ಬಾಗಿಲಿದ್ದು ಎಂಟು-ಹತ್ತು ಮೆಟ್ಟಿಲು ಹತ್ತಿಹೋಗಬೇಕಿತ್ತು. ಗೋರಿಯ ಮೇಲೆ ಹಾಸಿದ ಚಾದರದಲ್ಲಿ ಗುಲಾಬಿಯ ಪಕಳೆಗಳನ್ನು ಹರಡಲಾಗಿತ್ತು.

ಇಪ್ಪತ್ತು ವರ್ಷ ರಾಜಗದ್ದುಗೆಯಲ್ಲಿದ್ದರೂ, ಜಫ‌ರನು ಕೇವಲ ನೆಪಮಾತ್ರಕ್ಕೆ ಅರಸನಾಗಿದ್ದ. ಹಾಗೆ ನೋಡಲು ಹೋದರೆ ರಾಜ್ಯಭಾರದಲ್ಲಿ ಅವನಿಗೆ ಆಸಕ್ತಿಯಿದ್ದಿರಲಿಲ್ಲ. ಕವಿತೆ ಬರೆದುಕೊಂಡು ಫ‌ಕೀರನಂತೆ ತಿರುಗಿಕೊಂಡಿದ್ದವನನ್ನು ಒತ್ತಾಯದಿಂದ ಸಿಂಹಾಸನದಲ್ಲಿ ಕುಳ್ಳಿರಿಸಲಾಗಿತ್ತು. ತೆಳ್ಳಗಿನ ದೇಹದ ಆತ ಸಾದಾ ಉಡುಪು ಧರಿಸುತ್ತಿದ್ದು, ಶಾಲಾ ಮಾಸ್ತರನಂತೆಯೋ, ಗುಮಾಸ್ತನಂತೆಯೋ ಕಾಣಿಸುತ್ತಿದ್ದನೆಂದು ಲೇಖಕ ವಿಲಿಯಂ ಡ್ರಿಂಪಲ್‌ ತನ್ನ ಲಾಸ್ಟ್‌ ಮೊಘಲ್‌ ಪುಸ್ತಕದಲ್ಲಿ ಬರೆದಿದ್ದಾನೆ. ಅರಸನಾಗಿದ್ದಾಗ ಕೆಂಪುಕೋಟೆಯಲ್ಲಿ ಆಗಿಂದಾಗ ಏರ್ಪಡಿಸುತ್ತಿದ್ದ ಕವಿಗೋಷ್ಠಿ (ಮುಶೈರಾ)ಗಳಲ್ಲಿ ಮಿರ್ಜಾ ಗಾಲಿಬನಂತಹ ಮಹಾನ್‌ ಕವಿಗಳು ಭಾಗವಹಿಸುತ್ತಿದ್ದರಂತೆ.

ಜಫ‌ರನ ಗಡೀಪಾರು ಅವನ ವ್ಯಕ್ತಿಗತ ಜೀವನದ ಒಂದು ಘಟ್ಟವಾಗಿದ್ದರೆ, ಸಾಂಕೇತಿಕವಾಗಿ ಅದು ನಮ್ಮ ದೇಶದ ಚರಿತ್ರೆಯ ಘಟ್ಟವೂ ಆಗಿತ್ತೆನ್ನಬಹುದು. 1857ರ ದಂಗೆಯ ನಂತರ, ಅದುವರೆಗೆ ಸಾಮ್ರಾಟನೆಂದು ಕರೆಸಿಕೊಳ್ಳುತ್ತಿದ್ದ ಮೊಘಲ್‌ ದೊರೆಯ ಬದಲಾಗಿ, ಬ್ರಿಟಿಷರು ತಮ್ಮ ದೊರೆಯನ್ನು ಭಾರತದ ಸಾಮ್ರಾಟನೆಂದು ಘೋಷಿಸಿ, ನಮ್ಮ ದೇಶವನ್ನು ತಮ್ಮ ಸಾಮ್ರಾಜ್ಯದ ವಸಾಹತನ್ನಾಗಿ ಮಾಡಿ, “ತಮ್ಮ ಆಸ್ತಿಯ ಕಿರೀಟವಿದು’ ಎಂದರು. ಅಂತೂ ಹೇಳಿಕೆಗಾದರೂ ಸ್ವತಂತ್ರವಾಗಿದ್ದ ದೇಶ ಅಸ್ವತಂತ್ರವಾಯಿತು.

ಪ್ರಾದೇಶಿಕ ಸಾಮ್ರಾಟನನ್ನು ಹೀಗೆ ಚದುರಂಗದಾಟದ ಬೊಂಬೆಯಂತೆ ಸ್ಥಳಾಂತರಿಸಿದುದು ಯುರೋಪಿನ ನಿರಂಕುಶ ವಸಾಹತುಶಾಹಿ ಪ್ರಭುತ್ವದ ಸಂಕೇತವಾಯಿತು. ಇಂಥ ಚದುರಂಗದಾಟದಲ್ಲಿ, ಹಿಂದುಸ್ಥಾನದ ಚಕ್ರವರ್ತಿಯನ್ನು ಬ್ರಿಟಿಷರು ರಂಗೂನಿಗೆ ಸಾಗಹಾಕಿದರೆ, ಈ ಘಟನೆಯ ಉತ್ತರಾರ್ಧವೆನ್ನುವಂತೆ, ಮುಂದೆ 1885ರಲ್ಲಿ ಬರ್ಮಾದ ಕೊನೆಯ ದೊರೆ ತಿಬೋನನ್ನು ಸೋಲಿಸಿ, ಮಹಾರಾಷ್ಟ್ರದ ರತ್ನಗಿರಿಗೆ ರವಾನಿಸಿದ್ದರು.

ಭಾರತದ ಮೊತ್ತಮೊದಲ ಸ್ವಾತಂತ್ರ್ಯ ಸಮರದಲ್ಲಿ, ಜಫ‌ರನ ಸಾಂಕೇತಿಕ ನಾಯಕತ್ವದಲ್ಲಿ ಹಿಂದು-ಮುಸ್ಲಿಮರು ಜೊತೆಯಾಗಿ ತೋರಿಸಿದ ಅಸಾಧಾರಣ ರಾಜಕೀಯ ಒಗ್ಗಟ್ಟು ನಂತರದ ದಿನಗಳಲ್ಲಿ ಬಹುತೇಕ ಕ್ಷೀಣವಾಗತೊಡಗಿತೆನ್ನಬಹುದು. ರಾಷ್ಟ್ರೀಯತೆಯಭಾವ ಜನರಲ್ಲಿ ಜಾಗೃತವಾದುದೂ ಆಗಲೇ ಮತ್ತು ಒಡೆದು ಆಳುವ ಬ್ರಿಟಿಷರ ನೀತಿ ಆರಂಭವಾದುದೂ ಆಗಿನಿಂದಲೇ.
ಜಫ‌ರನ ಗೋರಿಯು ಹೀಗೊಂದು ಮಹತ್ವದ ಕಾಲಘಟ್ಟದ ಪ್ರತೀಕವಾಗಿ ನಿಂತಿದೆ ಎಂದು ನನಗನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next