ಬೆಂಗಳೂರು:2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಬಂದಿದೆ. ಜನ ಕಾಂಗ್ರೆಸ್ ಗೆ ಶೇ.40ರಷ್ಟು, ಬಿಜೆಪಿಗೆ ಶೇ.50ರಷ್ಟು ಮತ ಹಾಕಿದ್ದಾರೆ. ನಾವು ಎಲ್ಲಿ ಎಡವಿದ್ದೇವೆ ಅಂತ ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರರೇ ಪ್ರಭುಗಳು. ಮತದಾರರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ದೇಶದಲ್ಲೇ ಹೆಚ್ಚು ಸ್ಥಾನ ಕೊಟ್ಟಿದ್ದಾರೆ. ಜನರ ತೀರ್ಪನ್ನು ತಲೆಬಾಗಿ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಮೋದಿಗೆ ಶುಭಾಶಯ ಕೋರಿದ ಸಿದ್ದು:
2019ರ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಮತ್ತು ಮುಖ್ಯ ಪಾತ್ರ ವಹಿಸಿದ್ದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಮುಂದಿನ 5 ವರ್ಷ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ “ಸರ್ವಜನಾಂಗದ ಶಾಂತಿಯ” ತೋಟವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.