ಹೊಸದಿಲ್ಲಿ : ”ಒಲಿಂಪಿಕ್ಸ್ ನಲ್ಲಿ ಭಾರತವು ಕುಸ್ತಿಯಲ್ಲಿ ಇನ್ನೂ 6 ಪದಕಗಳನ್ನು ಗೆಲ್ಲಬಹುದಿತ್ತು. ಕಳೆದ 15-16 ತಿಂಗಳುಗಳಲ್ಲಿ ಕುಸ್ತಿಯಲ್ಲಿನ ಅಡಚಣೆಯನ್ನು ಗಮನಿಸಿದರೆ ನಾವು ಅನೇಕ ಪದಕಗಳನ್ನು ಕಳೆದುಕೊಂಡಿದ್ದೇವೆ” ಎಂದು ಭಾರತೀಯ ಕುಸ್ತಿ ಫೆಡರೇಶನ್ (WFI)ಅಧ್ಯಕ್ಷ ಸಂಜಯ್ ಸಿಂಗ್ ಬುಧವಾರ (ಆಗಸ್ಟ್14 )ಹೇಳಿಕೆ ನೀಡುವ ಮೂಲಕ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಕುಸ್ತಿ ಪಟುಗಳ ವಿರುದ್ಧ ಪರೋಕ್ಷ ಆಕ್ರೋಶ ಹೊರ ಹಾಕಿದ್ದಾರೆ.
ಕುಸ್ತಿಪಟು ವಿನೇಶ್ ಫೋಗಟ್ ಅವರ ಬೆಳ್ಳಿ ಪದಕದ ಮೇಲ್ಮನವಿ ಕುರಿತು ಸಿಎಎಸ್ ತನ್ನ ತೀರ್ಪನ್ನು ವಿಸ್ತರಿಸಿದ ಕುರಿತು ಎಎನ್ ಐ ಸುದ್ದಿ ಸಂಸ್ಥೆಯೊಂದಿಗೆ ಪ್ರತಿಕ್ರಿಯಿಸಿರುವ ಸಂಜಯ್ ಸಿಂಗ್ ”ಸಿಎಎಸ್ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ಭರವಸೆ ನಮಗಿದೆ. ಏಕೆಂದರೆ ಅದು ದೇಶದ ಪದಕ, ಯಾರೊಬ್ಬರ ವೈಯಕ್ತಿಕ ಪದಕವಲ್ಲ. ಅದು ಭಾರತದ ಪದಕ ಪಟ್ಟಿಗೆ ಸೇರ್ಪಡೆಯಾಗಲಿದೆ’ ಎಂದು ಹೇಳಿದ್ದಾರೆ.
‘ಕುಸ್ತಿ ವಿಭಾಗ ಆಯ್ಕೆ ಆಟಗಾರರ ವೈಯಕ್ತಿಕ ನಿರ್ಧಾರವಾಗಿದೆ. ಆದಾಗ್ಯೂ, ಆ ತೂಕವನ್ನು ಕಾಪಾಡಿಕೊಳ್ಳುವುದು ಆಟಗಾರರ ಮೇಲೆ ಅವಲಂಬಿತವಾಗಿರುತ್ತದೆ. ತೂಕವನ್ನು ತ್ವರಿತವಾಗಿ ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು ಆಟಗಾರನ ದೇಹದ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ವಿನೇಶ್ ಪೋಗಟ್ ಅವರಿಗೆ ಹಂಗೇರಿಯಲ್ಲಿ ವಿದೇಶಿ ತರಬೇತುದಾರರೊಂದಿಗೆ ತರಬೇತಿ ಸೇರಿದಂತೆ ಅವರು ಕೇಳಿದ್ದ ಪ್ರತಿಯೊಂದು ಸೌಲಭ್ಯವನ್ನೂ ನೀಡಲಾಗಿತ್ತು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಫೈನಲ್‌ನಿಂದ ಅನರ್ಹಗೊಳಿಸಿರುವ ಕುರಿತು ವಿನೇಶ್ ಫೋಗಟ್ ಅವರ ಮೇಲ್ಮನವಿಯ ನಿರ್ಧಾರವನ್ನು CAS ಆಗಸ್ಟ್ 16 ಕ್ಕೆ ಮುಂದೂಡಿದೆ.