ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಶಂಕ ಕಲ್ಲೂರ ಅವರ ಕೌಟುಂಬಿಕ ಕಾರಣದಿಂದ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಯ ಕಲ್ಲೂರ ಅವರ ಮಾವನವರು ತೀರಿಕೊಂಡಿದ್ದರಿಂದ ಇತ್ತೀಚೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿರಲಿಲ್ಲ. ಈ ಕುರಿತು ಪಕ್ಷದ ವರಿಷ್ಠರು ಕ್ಷೇತ್ರದ ನಾಲ್ಕು ಜಿಲ್ಲೆಗಳ ಮುಖಂಡರನ್ನು ಸಂಪರ್ಕಿಸಿ ಮಾಹಿತಿ ಪಡೆದು ಈ ನಿರ್ಧಾರಕ್ಕೆ ಬಂದಿದ್ದಾರೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ಅಭ್ಯರ್ಥಿ ಒಪ್ಪಿಗೆ ಸೂಚಿಸಿ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು.
ಯಾವುದೇ ಷರತ್ತುಗಳನ್ನು ಹಾಕದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಲಾಗುತ್ತಿದೆ. ಫಲಿತಾಂಶದಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಕಾರಣಕ್ಕೆ ಪಕ್ಷದ ವರಿಷ್ಠರು ಈ ನಿರ್ಧಾರಕ್ಕೆ ಬಂದಿದ್ದಾರೆ. ರಾಜಕಾರಣದಲ್ಲಿ ಯಾವುದೂ ನಿರೀಕ್ಷಿತವಲ್ಲ. ಕೆಲವೊಮ್ಮೆ ಇಂತಹ ಬೆಳವಣಿಗೆಗಳು ನಡೆಯುತ್ತಿವೆ. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಅಭ್ಯರ್ಥಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಅಭ್ಯರ್ಥಿ ಶಿವಶಂಕರ ಕಲ್ಲೂರ ಮಾತನಾಡಿ, ಪಕ್ಷದ ನಿರ್ಧಾರಕ್ಕೆ ತಲೆ ಬಾಗುತ್ತೇನೆ. ಚುನಾವಣೆ ಹತ್ತಿರದಲ್ಲಿ ಕೌಟುಂಬಿಕ ಕಾರಣದಿಂದ ಹಿಂದೆ ಉಳಿಯ ಬೇಕಾಯಿತು.ಇದಕ್ಕಾಗಿ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎಂದರು.
ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಸೇರಿದಂತೆ ಜೆಡಿಎಸ್ ನಾಯಕರು ಇದ್ದರು.
ಕಣ್ಣೀರು ಹಾಕಿದ ಅಭ್ಯರ್ಥಿ!
ಸುದ್ದಿಗೋಷ್ಠಿಯ ನಂತರ ನಡೆದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅಭ್ಯರ್ಥಿ ಶಿವಶಂಕರ ಕಲ್ಲೂರ ಕಣ್ಣೀರು ಹಾಕಿದ ಘಟನೆ ನಡೆಯಿತು. ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಂದು ವರ್ಷದಿಂದ ಕೆಲಸ ಮಾಡಿದ್ದೇನೆ. ಆದರೆ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷದ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸುವಂತೆ ಕೋರಿದರು.