ಮಂಗಳೂರು: ಬೇಸಗೆ ಇನ್ನೂ ದೂರ ಇದೆ. ಚಳಿಗಾಲದ ಮಧ್ಯೆ ಇರುವಾಗಲೇ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲಾರಂಭಿಸಿದೆ.
ಸಾಮಾನ್ಯವಾಗಿ ಜನ ವರಿಯ ಬಳಿಕ ಕಾಣಿಸಿ ಕೊಳ್ಳುವ ಕಾಳ್ಗಿಚ್ಚು ಈ ಬಾರಿ ಡಿಸೆಂಬರ್‌ನಲ್ಲೇ ಚಾರ್ಮಾಡಿ ಭಾಗದಲ್ಲಿ ಕಂಡುಬಂದಿದೆ. ಬಹುತೇಕ ಪ್ರಕರಣಗಳು ಮಾನವ ನಿಂದಲೇ ಆಗುವಂಥವೇ ವಿನಾ ಸಹಜವಾಗಿ ಉಂಟಾಗುವ ಬೆಂಕಿಯಲ್ಲ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ತಾಗಿ ಕೊಂಡಂತೆ ಪಶ್ಚಿಮ ಘಟ್ಟದ ದಟ್ಟಾರಣ್ಯ, ಶೋಲಾ ಹುಲ್ಲುಗಾವಲು ಸಾಕಷ್ಟಿದೆ. ಸುಳ್ಯ, ಬೆಳ್ತಂಗಡಿಯ ಭಾಗಗಳು, ಕಾರ್ಕಳ, ಹೆಬ್ರಿ ಮುಂತಾದೆಡೆ ಇರುವ ಅರಣ್ಯ ಪರಿಸರ ಸೂಕ್ಷ್ಮ ಪ್ರದೇಶಗಳಿವೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಇತರ ಕಾಡುಗಳೂ ಡೀಮ್ಡ್ ಅರಣ್ಯಗಳೂ ಇವೆ. ಇಂತಹ ಕಡೆ ಬೆಂಕಿ ಬೀಳುವುದು ಪರಿಸರದ ಅಸಮತೋಲನಕ್ಕೂ ಕಾರಣವಾಗುತ್ತದೆ.
ಕಾರಣಗಳೇನು?
ಮುಖ್ಯವಾಗಿ ಕಾಡಿನಂಚಿನ ಕೆಲವು ಎಸ್ಟೇಟ್‌ನವರು ತಮ್ಮ ಜಮೀನಿಗೆ ಬೆಂಕಿ ಹರಡಬಾರದು ಎಂಬ ಉದ್ದೇಶದಿಂದ ಸಮೀಪದ ಹುಲ್ಲುಗಾವಲಿಗೆ ಬೆಂಕಿ ಹಾಕುತ್ತಾರೆ. ಅದು ನಿಯಂತ್ರಣ ತಪ್ಪಿ ಕಾಡಿಗೆ ವ್ಯಾಪಿಸಿಕೊಳ್ಳುತ್ತದೆ. ಇನ್ನೊಂದು ಮುಖ್ಯ ಕಾರಣ ಹಳ್ಳಿಯವರು ಜಾನುವಾರುಗಳ ಮೇವಿಗೆ ಈ ಹುಲ್ಲು ಗಾವಲುಗಳನ್ನು ಅವಲಂಬಿಸಿರುವುದು. ಒಣಗಿದ ಹುಲ್ಲಿÉಗೆ ಬೆಂಕಿ ಹಾಕಿದಾಗ ಅಲ್ಲಿ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಚಿಗುರುತ್ತದೆ ಎಂಬುದು ಅವರ ದೂರಾ ಲೋಚನೆ. ಇದರ ಹೊರತಾಗಿ ಅರಣ್ಯ ಇಲಾಖೆಯವರ ಮೇಲೆ ಸೇಡಿನ ಭಾವದಿಂದ ಕಿಡಿಗೇಡಿಗಳು ಬೆಂಕಿ ಕೊಡುವುದೂ ಇದೆ ಎನ್ನುತ್ತಾರೆ ಮಂಗಳೂರು ವಿಭಾಗದ ಅರಣ್ಯ ಅಧಿಕಾರಿಗಳು.
Related Articles
ನದಿಗಳ ಮೂಲ ಒಣಗುವ ಭೀತಿ
ಒಂದೆಡೆ ಪ್ರಕೃತಿಯಲ್ಲಿನ ಬದ ಲಾವಣೆಗಳು ಕಾಳ್ಗಿಚ್ಚಿಗೆ ಪೂರಕ ವಾಗಿವೆ. ಕೆಲವು ವರ್ಷಗಳಿಂದ ಮಳೆ ಗಾಲದಲ್ಲಿ ಪಶ್ಚಿಮ ಘಟ್ಟದ ವಿವಿಧೆಡೆ ಆಗಿರುವ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಅರಣ್ಯ ನಾಶ ವಾಗಿರುವುದು ಪರೋಕ್ಷವಾಗಿ ಕಾಡು ಹಾಗೂ ಅದರ ಪರಿಸರ ಬೇಗನೆ ಒಣಗುವುದಕ್ಕೆ ಕಾರಣವಾಗುತ್ತಿದೆ. ಆಗ ಕಿಡಿಗೇಡಿಗಳು ಸೇದಿದ ಸಿಗರೇಟ್ ಎಸೆದರೂ ಬೆಂಕಿ ಹತ್ತಿಕೊಳ್ಳುತ್ತದೆ. ಪದೇ ಪದೆ ಕಾಳ್ಗಿಚ್ಚು ಒಂದೆಡೆ ಬಿದ್ದರೆ ಕ್ರಮೇಣ ಆ ನೆಲ ಬರಡಾಡುತ್ತದೆ. ಇದರಿಂದ ಅನೇಕ ನದಿಗಳ ಮೂಲ ಒಣಗುವ ಭೀತಿಯೂ ಇದೆ ಎನ್ನುತ್ತಾರೆ ಪರಿಸರ ಪ್ರೇಮಿಗಳು.
ಕಾಳ್ಗಿಚ್ಚು ಕಾಣಿಸಿಕೊಂಡಾಗ ಕೆಲವು ಸಲ ಅದು ನಮ್ಮ ವ್ಯಾಪ್ತಿಯಲ್ಲ, ಬೇರೆ ರೇಂಜ್ ಎನ್ನುತ್ತಾರೆ. ಜನರು ಕೂಡ ಸಕಾಲದಲ್ಲಿ ಸಹಕಾರ, ಮಾಹಿತಿ ನೀಡದೆ ಸಮಸ್ಯೆಯಾಗುತ್ತದೆ. ಕಾಡಿನೊಳಗೆ ಕಾಲಿಡುವ ಕಾಡುತ್ಪತ್ತಿ ಸಂಗ್ರಾಹಕರು, ಚಾರಣಿಗರ ಮೇಲೆ ಇಲಾಖೆ ಸೂಕ್ತ ನಿಗಾ ಇರಿಸಬೇಕು, ಹಾಗಿದ್ದರೆ ಕಾಳ್ಗಿಚ್ಚು ತಪ್ಪಿಸಲು ಸಾಧ್ಯ.
– ದಿನೇಶ್ ಹೊಳ್ಳ, ಸಹ್ಯಾದ್ರಿ ಸಂಚಯ
ನಮ್ಮಲ್ಲಿ ಹುಲ್ಲಿಗೆ ಬೆಂಕಿ ಬೀಳುವುದು ಜಾಸ್ತಿ. ಆದರೆ ಅರಣ್ಯ ನಾಶ ಪ್ರಮಾಣ ಕಡಿಮೆ. ಈಗಾಗಲೇ ನಾವು ಸಿಬಂದಿಗೆ ಫೈರ್‌ಲೈನ್ (ಬೆಂಕಿ ರೇಖೆ) ಹಾಕುವಂತೆ, ಕಳೆ ನಾಶ ಮೂಡುವಂತೆ, ಸೂಚಿಸಿದ್ದೇವೆ.
-ಡಾ| ದಿನೇಶ್ ಕುಮಾರ್, ಡಿಸಿಎಫ್, ಮಂಗಳೂರು ವಿಭಾಗ
– ವೇಣುವಿನೋದ್ ಕೆ.ಎಸ್.