Advertisement

ಕಾವಲು ಪಡೆಯಂತಿರುವ ಪಶ್ಚಿಮ ಘಟ್ಟ ನಾಶ ಆತಂಕ: ನೂರುನ್ನೀಸಾ

07:59 PM Nov 06, 2019 | Team Udayavani |

ಮಡಿಕೇರಿ: ಮಾನವನ ರಕ್ಷಣೆಗೆ ಕಾವಲು ಪಡೆಯಂತಿರುವ ಪಶ್ಚಿಮಘಟ್ಟ ಪ್ರದೇಶಗಳು ನಾಶವಾದ ಪರಿಣಾಮ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ನೂರುನ್ನಿಸಾ, ಬೆಟ್ಟಗುಡ್ಡಗಳ ಮೇಲೆ ಕಟ್ಟಡ ನಿರ್ಮಿಸುವ ಸ್ವಯಂಕೃತ ಅಪರಾಧ ನಿಲ್ಲಬೇಕೆಂದು ಹೇಳಿದ್ದಾರೆ.

Advertisement

ನಗರದ ತ್ಯಾಗರಾಜ ಕಾಲೋನಿಯ ಕಾರುಣ್ಯ ಮೊಹಲ್ಲಾದಲ್ಲಿ ಜಮಾಅತೇ ಇಸ್ಲಾಮಿ ಹಿಂದ್‌ನ ಸಮಾಜ ಸೇವಾ ವಿಭಾಗವಾದ ಹ್ಯುಮಾನಿಟೇರಿಯನ್‌ ರಿಲೀಫ್ ಸೊಸೈಟಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಡೆದ ಎಂಟು ಮಳೆಹಾನಿ ಸಂತ್ರಸ್ತ ಕುಟುಂಬಗಳಿಗೆ ಮನೆಗಳನ್ನು ಹಸ್ತಾಂತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶರು ಮಾತನಾಡಿದರು.

ಜಲನ್ಪೋಟ ಸೇರಿದಂತೆ ಪ್ರಾಕೃತಿಕ ವಿಕೋಪ ನಡೆಯುವುದನ್ನು ತಡೆಯಲು ಪಶ್ಚಿಮಘಟ್ಟ ಪ್ರದೇಶಗಳನ್ನು ಉಳಿಸುವ ಅಗತ್ಯವಿದೆ. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಜೇನುಹುಳುವಿನಂತೆ ಬದುಕಿ
ಮನುಷ್ಯ ಜೇನು ಹುಳುವಿನಂತೆ ಬದುಕಬೇಕು, ಜೇನುಹುಳಗಳು ಯಾವುದೇ ಕೊಳೆತ ವಸ್ತುಗಳ ಮೇಲೆ ಆಕರ್ಷಿತವಾಗದೆ ಕೇವಲ ಒಂದು ಹನಿ ಮಕರಂದಕ್ಕಾಗಿ ಹೂವನ್ನು ಅವಲಂಭಿಸುತ್ತವೆ. ಆದರೆ ಮಕರಂದ‌ವನ್ನು ಹೀರುವ ಸಂದರ್ಭ ಎಲ್ಲೂ ಹೂವನ್ನು ನಾಶ ಮಾಡುವುದಿಲ್ಲ, ಬದಲಿಗೆ ಕೇವಲ ಒಂದು ಹನಿ ಜೇನನ್ನು ಸೂಕ್ಷ್ಮವಾಗಿ ಪಡೆದು ಅದನ್ನು ಶೇಖರಣೆ ಮಾಡಿ ಸಮಾಜಕ್ಕೆ ನೀಡುತ್ತದೆ. ಇದೇ ರೀತಿಯಲ್ಲಿ ಮನುಷ್ಯ ಕೂಡ ಪ್ರಕೃತಿಗೆ ಹಾನಿ ಮಾಡದೆ ತನಗೆ ಬೇಕದಷ್ಟನ್ನು ಮಾತ್ರ ಪಡೆದು ಸಮಾಜಕ್ಕೆ ಮರಳಿ ನೀಡಬೇಕೆಂದು ನೂರುನ್ನಿಸ ಕರೆ ನೀಡಿದರು.

ಇಂದಿನ ಸಮಾಜದಲ್ಲಿ ನಕಾರಾತ್ಮಕ ಚಿಂತನೆಗಳೇ ಹೆಚ್ಚಾಗಿ ಕಂಡುಬರುತ್ತಿದೆ, ಇವುಗಳನ್ನೆಲ್ಲ ಬದಿಗೊತ್ತಿ ಸಕಾರಾತ್ಮಕ ಆಲೋಚನೆಗಳೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಪದವಿಗಳನ್ನು ಪಡೆದ ವಿದ್ಯಾವಂತರು ಪದವಿಯನ್ನಷ್ಟೇ ಪಡೆದಿರುತ್ತಾರೆ. ಆದರೆ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ ಎಂದು ನ್ಯಾಯಾಧೀಶೆ ವಿಷಾದ ವ್ಯಕ್ತಪಡಿಸಿದರು.

Advertisement

ಈ ಸಮಾಜಕ್ಕೆ ಸಂಪತ್ತನ್ನು ನೀಡಲು ನಮ್ಮಿಂದ ಸಾಧ್ಯವಾಗದಿದ್ದರೂ, ಮಾನವೀಯ ಮೌಲ್ಯಕ್ಕೆ ಹತ್ತಿರವಾದ ಸೇವೆಯನ್ನಾದರು ಮಾಡಬೇಕು. ಎಲ್ಲವನ್ನು ಸರ್ಕಾರದಿಂದಲೇ ಬಯಸದೆ ಸ್ವಯಂ ಸೇವಾ ಸಂಸ್ಥೆಗಳು ಸಮಾಜಸೇವೆಯಲ್ಲಿ ತೊಡಗಬೇಕೆಂದರು.

ಸಂತ್ರಸ್ತರಿಗೆ ಕಾನೂನು ನೆರವು.
ಮಳೆಹಾನಿ ಸಂತ್ರಸ್ತರಿಗೆ ಉಚಿತವಾಗಿ ಕಾನೂನಿನ ನೆರವನ್ನು ನ್ಯಾಯಾಲಯ ನೀಡುತ್ತಿದೆ. ಆಡಳಿತ ವ್ಯವಸ್ಥೆಯಿಂದ ಕುಂದುಕೊರತೆ ಉಂಟಾದಲ್ಲಿ ಅನ್ಯಾಯಕ್ಕೆ ಒಳಗಾದ ಸಂತ್ರಸ್ತರು ನ್ಯಾಯಾಲಯದ ಮೂಲಕ ನ್ಯಾಯ ಪಡೆದುಕೊಳ್ಳಬಹುದಾಗಿದೆ ಎಂದು ನ್ಯಾಯಾಧೀಶೆ ನೂರುನ್ನಿಸಾ ತಿಳಿಸಿದರು.

ಪ್ರಕೃತಿಯನ್ನು ಕೊಳ್ಳೆ ಹೊಡೆಯಲಾಗಿದೆ
ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತೇ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಅಕºರಲಿ ಉಡುಪಿ, ಪ್ರಕೃತಿ ವಿಕೋಪ ದೇವರ ಶಿಕ್ಷೆಯಲ್ಲ, ಬದಲಿಗೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಕೊಳ್ಳೆ ಹೊಡೆದ ಪರಿಣಾಮ ಎಂದು ಅಭಿಪ್ರಾಯಪಟ್ಟರು.

ಮುಂದೆ ಈ ರೀತಿಯ ಅನಾಹುತಗಳು ಸಂಭವಿಸಬಾರದು ಎಂದಾದರೆ ಸರ್ಕಾರ ಪ್ರಕೃತಿಯ ಮೇಲೆ ತನ್ನ ಹಿಡಿತ ಸಾಧಿಸಬೇಕು. ಒಂದು ಮರ ಕಡಿದರೆ ನೂರು ಮರ ಬೆಳೆಸುವ ನಿಯಮ ಜಾರಿಯಾಗಬೇಕು. ಪ್ರಕೃತಿ ನಾಶವಾದರೆ ಯಾರೂ ಉಳಿಯಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟ ಅವರು, ನಮ್ಮ ಸಂಸ್ಥೆಯು ಜನರೊಂದಿಗೆ ಪ್ರೀತಿಯ ಭಾವನೆಯನ್ನು ಬೆಳೆಸಿಕೊಂಡಿರುವುದರಿಂದ ಸಂತ್ರಸ್ತರಿಗಾಗಿ ಮನೆ ನಿರ್ಮಿಸಿಕೊಡುವ ಕಾರ್ಯವನ್ನು ಸಾಕಾರಗೊಳಿಸುತ್ತಿದೆ ಎಂದರು.ಮಳೆ ಮನುಷ್ಯನ ಮೂಲಭೂತ ಅಗತ್ಯವಾಗಿದೆ, ಮಳೆಯಿಂದ ಅನಾಹುತ ಸಂಭವಿಸಿದೆ ಎನ್ನುವುದು ತಪ್ಪು ಅಭಿಪ್ರಾಯವಾಗಿದ್ದು, ಮನುಷ್ಯನ ಸ್ವಾರ್ಥಕ್ಕೆ ಸಿಲುಕಿದ ಪ್ರಕೃತಿಯ ಅಸಮತೋಲನದಿಂದ ದುರ್ಘ‌ಟನೆಗಳು ನಡೆದಿವೆ ಎಂದು ಅಕºರಲಿ ಉಡುಪಿ ತಿಳಿಸಿದರು.

ಬಂಡವಾಳಶಾಹಿಗಳ ಹಿಡಿತದಲ್ಲಿ ಪ್ರಕೃತಿ
ಮಾತನಾಡಿದ ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್‌ ಕುಂಞಿ, ಪ್ರಕೃತಿ ಮತ್ತು ಸಮಾಜ ಬಂಡವಾಳಶಾಹಿಗಳ ಹಿಡಿತದಲ್ಲಿದ್ದು, ಇದೇ ಕಾರಣಕ್ಕೆ ಇಂದು ಅಶಾಂತಿ, ಅಸಹನೆ, ಅನಾಹುತಗಳು ಎದುರಾಗುತ್ತಿವೆ ಎಂದು ತಿಳಿಸಿದರು. ಬ ಮಾಅತೇ ಇಸ್ಲಾಮಿ ಹಿಂದ್‌ನ ಕೊಡಗು ಮತ್ತು ಮಂಗಳೂರು ವಲಯ ಸಂಚಾಲಕ ಅಬ್ದುಲ್‌ ಅಬ್ದುಸ್ಸಲಾಮ್‌ ಯು. ಮಾತನಾಡಿ,ದರು.

ಮಡಿಕೇರಿಯ ಅಶ್ರಫ್, ಅಫ‌ರ, ತಾಳತ್ತಮನೆಯ ವಿಜಯ, ಮಡಿಕೇರಿ ರಾಣಿಪೇಟೆಯ ರಝಿಯ, ಗದ್ದಿಗೆ ಸಮೀಪದ ಸಮೀನ, ಸುಂಟಿಕೊಪ್ಪದ ಎಂ.ಎಂ.ಚೋಂದಮ್ಮ, ಮಡಿಕೇರಿ ಗಣಪತಿ ಬೀದಿಯ ಮಕೂºಲ್‌, ಜಲಾಶಯ ಬಡಾವಣೆಯ ಜೋಸ್ಟಿನ್‌ ಡಿಸೋಜ ಅವರುಗಳಿಗೆ ಮನೆಗಳ ಕೀ ಯನ್ನು ಹಸ್ತಾಂತರಿಸಲಾಯಿತು. ಕರ್ನಾಟಕ ಹ್ಯುಮ್ಯಾನಿಟೇರಿಯನ್‌ ರಿಲೀಫ್ ಸೊಸೈಟಿ ನಿರ್ದೇಶಕ ಕೆ.ಎಂ.ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೆ.ಬಾಡಗ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೀಟಾ ಮುತ್ತಣ್ಣ, ಕೇರಳದ ಜ.ಇ. ಹಿಂದ್‌ ಕಾರ್ಯದರ್ಶಿ ಕೆ.ಸಾದಿಕ್‌ ಉಳಿಯಿಲ್‌, ಕೆ. ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್‌ ಪಿಂಟೊ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಜಿಲ್ಲಾ ಜ.ಇ. ಹಿಂದ್‌ ಸಂಚಾಲಕಿ ವಹೀದಾ ಶೌಕತ್‌, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next