ಸೇಡಂ : ಮಾತೆಯರಿಗೆ ಅತ್ಯಂತ ಗೌರವದ ಸ್ಥಾನ ನೀಡುವ ದೇಶದಲ್ಲಿ ಹಾಡ ಹಾಗಲಲ್ಲೇ ಹಲ್ಲೆ ನಡೆಸಿರುವುದನ್ನು ಗಮನಿಸುತ್ತಿದ್ದರೆ ಪಶ್ಚಿಮ ಬಂಗಾಳದ ಸರ್ಕಾರ ಮಹಿಳೆಯರ ರಕ್ಷಣೆ ಮರೆತಂತೆ ಕಾಣುತ್ತಿದೆ ಎಂದು ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಾಗೃತ ಹಿಂದೂ ಮಹಿಳಾ ಸಂಘಟನೆ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗಿಯಾದ ಅವರು ಮಾತನಾಡಿದರು.
ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಲೆ ಇವೆ. ಅವರ ರಕ್ಷಣೆ ಮಾಡುವುದು ಸರ್ಕಾರಗಳ ಕರ್ತವ್ಯವಾಗಿದೆ. ಈ ರೀತಿಯ ಘಟನೆಗಳು ನಡೆದಾಗ ಹೋರಾಟ, ಪ್ರತಿಭಟನೆ ನಡೆಯುತ್ತಲೇ ಇರುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಠಿಣ ಕಾನೂನು ರೂಪಿಸಿ ದೇಶದ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದರು.
ಈ ವೇಳೆ ಸಮಾಜ ಸೇವಕಿ ಸಂತೋಷಿರಾಣಿ ರಾಜಕುಮಾರ ಪಾಟೀಲ್ ಮಾತನಾಡಿ, ಪಶ್ಚಿಮ ಬಂಗಾಳದಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯ ಇದು ಇಡೀ ಸಮಾಜ ತಲೆ ತಗ್ಗಿಸುವಂತದ್ದು. ಸ್ವತಃ ಮಹಿಳಾ ಮುಖ್ಯಮಂತ್ರಿ ಹೊಂದಿದ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಈ ರೀತಿಯ ದೌರ್ಜನ್ಯಗಳು ನಡೆದಾಗ ಸಮಾಜ ಅವರ ದ್ವನಿಯಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ. ಮಹಿಳೆಯರು ಗೌರವಯುತವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಸರ್ಕಾರ ರಕ್ಷಣೆ, ಭದ್ರತೆ ನೀಡಬೇಕು. ಇದು ಮನವಿ ಪತ್ರಕ್ಕೆ ಸೀಮಿತವಾಗುವ ಹೋರಾಟವಲ್ಲ ಮಹಿಳೆಯರ ಸ್ವಾಭಿಮಾನದ ಬದುಕಿಗಾಗಿ, ಸೂಕ್ತ ಭದ್ರತೆ ಹಾಗೂ ರಕ್ಷಣೆಗಾಗಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಭಾಗಿಯಾದ ಡಾ. ಪಲ್ಲವಿ ಪಾಟೀಲ್ ಮಾತನಾಡಿ, ಅಧಿಕಾರದ ಲಾಲಸೆಯಿಂದಾಗಿ ಕೆಲ ಅಧರ್ಮಿಯರು ಧರ್ಮ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಸ್ತ್ರೀಯರ ಸ್ವಾಭಿಮಾನವನ್ನು ಕೆಣಕುವ ಕ್ರೂರ ಮನಸ್ಥಿತಿಯ ರಾಕ್ಷಸರು ಈ ರೀತಿಯ ದೌರ್ಜನ್ಯ ಎಸಗುತ್ತಿದ್ದಾರೆ. ಇಂತವರ ಮೇಲೆ ಕಠಿಣ ಕ್ರಮ ಜರುಗಿಸುವ ಕೆಲಸ ಸರ್ಕಾರಗಳು ಮಾಡಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಮಹಿಳೆಯರಿಗೆ ಇನ್ನೂ ನಿಜ ಅರ್ಥದಲ್ಲಿ ಸ್ವಾತಂತ್ರ ಸಿಕ್ಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ನಿರತ ಮಹಿಳೆಯರು ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನಂತರ ಕೇಂದ್ರ ಗೃಹಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶ್ರೇಯಾಂಕಾ ಧನಶ್ರೀಯವರಿಗೆ ಸಲ್ಲಿಸಿದರು.
ಈ ವೇಳೆ ಜಾಗೃತ ಹಿಂದೂ ಮಹಿಳಾ ರಕ್ಷಣಾ ವೇದಿಯ ಮುಖ್ಯಸ್ಥೆ ರತ್ನಮಾಲಾ ಕುಲಕರ್ಣಿ, ಪುರಸಭೆ ಮಾಜಿ ಅಧ್ಯಕ್ಷರಾದ ಚನ್ನಮ್ಮ ಪಾಟೀಲ್, ಶೋಭಾ ಹೂಗಾರ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಯಕ್ಮಾಯಿ, ಸಂಘಟನೆಯ ಪ್ರಮುಖರಾದ ಭಾಗ್ಯಲಕ್ಷ್ಮಿ ನೈಕೋಡಿ, ಜ್ಯೋತಿ ಮಾರ್ಲಾ, ಶೀಲಾ ನಿರ್ಣಿ, ಅಕ್ಕನಾಗಮ್ಮ ಆಡಕಿ, ಶೀಲಾದೇವಿ, ಜಯಶ್ರೀ ಬೋಳದ್, ರಾಜೇಶ್ವರಿ ಬಿಲಗುಂದಿ, ಶೀತಲ್ ಪತಂಗೆ, ಸುಪ್ರಿಯಾ ಕುಲಕರ್ಣಿ, ಗೌರಮ್ಮ ಪಸಾರ, ಸಂಧ್ಯಾ ಕುಲಕರ್ಣಿ, ಈರಮ್ಮ ಪಾಟೀಲ್, ಕಾವೇರಿ, ಉಮಾ ಕುಲಕರ್ಣಿ, ಬಸವರಾಜೇಶ್ವರಿ, ಶಕುಂತಲಾ ಹಡಪದ್, ಸುನೀತಾ ಮಠಪತಿ ಸೇರಿದಂತೆ ಅನೇಕರಿದ್ದರು.
ಇದನ್ನೂ ಓದಿ: Channapatna Bypoll; ಮೈತ್ರಿ ಪಕ್ಷದ ಅಭ್ಯರ್ಥಿ ನಾನೇ…: ಸಿ.ಪಿ ಯೋಗೇಶ್ವರ್ ಹೇಳಿದ್ದೇನು?