ಮಣಿಪಾಲ : ಕೋವಿಡ್ ವೈರಸ್ ನಿಯಂತ್ರಣಕ್ಕೆ ಜಾರಿ ಮಾಡಲಾಗಿರುವ ಲಾಕ್‌ಡೌನ್ ಜಾಗತಿಕವಾಗಿ ನಾನಾ ಸಮಸ್ಯೆಗಳನ್ನು ಹುಟ್ಟಿ ಹಾಕಿದೆ. ಬಡರಾಷ್ಟ್ರಗಳು ಕೋವಿಡ್ ಜತೆಗೆ ಹಸಿವಿನ ವಿರುದ್ಧವೂ ಹೋರಾಡುವ ಅನಿವಾರ್ಯತೆಗೆ ಸಿಲುಕಿವೆ.
ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳೇ ತುಂಬಿರುವ ಆಫ್ರಿಕಾದ ಖಂಡ ಕೋವಿಡ್‌ನಿಂದ ಅತಿ ಹೆಚ್ಚು ಹಾನಿ ಅನುಭವಿಸುತ್ತಿದೆ. ಕೋವಿಡ್‌ನಿಂದಾದ ಸಾವುನೋವು ಕಡಿಮೆಯಿದ್ದರೂ ಅದರ ಪಶ್ಚಾತ್ ಪರಿಣಾಮವಾಗಿ ಉಂಟಾದ ಆರ್ಥಿಕ ವಿಪ್ಲವ ಈ ದೇಶವನ್ನು ಕಂಗಾಲುಗೊಳಿಸಿದೆ. ಕೂಲಿನಾಲಿ, ಮನೆಗೆಲಸ ಅಂತ ನಿತ್ಯ ದುಡಿದು ತಿನ್ನುವ ಬಡ ಸಮುದಾಯಗಳ ದೊಡ್ಡ ಪೆಟ್ಟು ಬಿದಿದ್ದೆ. ಈಗಾಗಲೇ ಸಂಪೂರ್ಣವಾಗಿ ತತ್ತರಿಸಿ ಹೋಗಿರುವ ಆಫ್ರಿಕಾ ಖಂಡದಲ್ಲಿ ಮುಂಬರುವ ದಿನಗಳಲ್ಲಿ ಈ ಸಮಸ್ಯೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಆಹಾರ ಸಂಸ್ಥೆ ಎಚ್ಚರಿಸಿದೆ.
ಪಶ್ಚಿಮ ಆಫ್ರಿಕದಲ್ಲಿ ಸುಮಾರು 43 ದಶಲಕ್ಷಕ್ಕೂ ಹೆಚ್ಚು ಜನರಿಗೆ ತುರ್ತು ಆಹಾರ ಸರಬರಾಜು ಮಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ವೈರಸ್ ಹರಡುವಿಕೆಯೂ ಹೆಚ್ಚು ತೀವ್ರವಾಗುತ್ತಿರುವುದರಿಂದ ಆಹಾರದ ಜತೆಗೆ ಔಷಧೋಪಚಾರಗಳ ಪೂರೈಕೆಯೂ ಆಗಬೇಕಿದೆ. ಈ ವರ್ಷ ಆಹಾರ ಕೊರತೆ ದ್ವಿಗುಣಗೊಳ್ಳಲಿರುವುದರಿಂದ ಆಫ್ರಿಕ ಖಂಡದಾದ್ಯಂತ 26.5 ಕೋಟಿ ಜನರು ಹಸಿವಿನಿಂದ ಬಳಲಿದ್ದಾರೆ.
ಕೋವಿಡ್ ಹಾವಳಿ ಪ್ರಾರಂಭವಾಗುವ ಮುಂಚೆಯೇ ಆಫ್ರಿಕ ಖಂಡದಲ್ಲಿ ಆಹಾರ ಸಮಸ್ಯೆ ತಲೆದೋರಿತ್ತು.ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್‌ಡೌನ್ ನಿಯಮಗಳು ಪರಿಸ್ಥಿತಿಯನ್ನು ಮತ್ತಷ್ಟು ಹದೆಗಡಿಸಿದೆ. ಸೋಂಕಿನಿಂದ ಎದುರಾಗಿರುವ ಬಿಕ್ಕಟ್ಟು ಈ ವರ್ಷ ಪಶ್ಚಿಮ ಆಫ್ರಿಕದಲ್ಲಿ 2.1ಕೋಟಿ ಜನರನ್ನು ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಈಡು ಮಾಡಬಹುದು ಎಂದು ವಿಶ್ವ ಆಹಾರ ಪರಿಯೋಜನೆ ಅಂದಾಜಿಸಿತ್ತು. ಆದರೆ ಇದೀಗ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಯಾವುದೇ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಆಗಸ್ಟ್ ವೇಳೆಗೆ 4.3 ಕೋಟಿ ಜನರು ಆಹಾರಕ್ಕಾಗಿ ಬಾಹ್ಯ ನೆರವಿನ ನಿರೀಕ್ಷೆಯಲ್ಲಿರುತ್ತಾರೆ ಎಂದು ಹೇಳಲಾಗಿದೆ.
ಶಾಲೆಗಳನ್ನು ಮುಚ್ಚಿರುವುದರಿಂದ ಶಾಲೆಯಲ್ಲಿ ನೀಡಲಾಗುತ್ತಿದ್ದ ಪೌಷಿಕ ಆಹಾರವಿಲ್ಲದೆ 6.5ಕೋಟಿ ಮಕ್ಕಳ ಬೆಳವಣಿಗೆ ಕುಂಠಿತವಾಗಲಿದೆ. ಇಲ್ಲಿಯವರಗೆ ಖಂಡದಾದ್ಯಂತ 75,000 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 2,563 ಮಂದಿ ಸಾವನ್ನಪ್ಪಿದ್ದಾರೆ.