ಜಗಳೂರು: ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಪರ್ಸಂಟೇಜ್ ಪಡೆಯುವ ಅಭ್ಯಾಸ ವಿನಾಕಾರಣ ಆರೋಪ ಮಾಡುವವರಿಗೆ ಇರಬಹುದು, ಆದರೆ ನಮಗಲ್ಲ ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭದ್ರಾ ಮೇಲ್ದಂಡೆ ಯೋಜನೆಯಡಿ ಜಗಳೂರು ಶಾಖಾ ಕಾಲುವೆಗೆ ಭೂಮಿಪೂಜೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆ ಶುಕ್ರವಾರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಅನುದಾನ ತಂದು ಜಗಳೂರು ತಾಲೂಕನ್ನು ಅಭಿವೃದ್ಧಿಪಡಿಸಿದ ಕೀರ್ತಿ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ಸಲ್ಲುತ್ತದೆ. ಈ ಹಿಂದೆ ಶಾಸಕರಾಗಿದ್ದವರು ಯಾವುದೇ ಕೆಲಸ ಮಾಡಿಲ್ಲ. ಅಭಿವೃದ್ಧಿ ಸಹಿಸದೆ ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಕಾರ್ಯಕ್ರಮಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಂದ ಹಣ ವಸೂಲು ಮಾಡಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂಬ ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದರು, ಅವರಿಗೆ ಆ ರೀತಿ ಮಾಡಿ ಅಭ್ಯಾಸವಿರಬೇಕು. ಆದರೆ ನಮಗೆ ಇಲ್ಲ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು ಅದರಂತೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ದಶಕಗಳ ಕನಸಿನ ಯೋಜನೆ. ಬಿಜೆಪಿ ಆಡಳಿತಾವ ಧಿಯಲ್ಲಿ ಸಾಕಾರಗೊಂಡಿದ್ದು, ದಕ್ಷಿಣ ಭಾರತದಲ್ಲಿಯೇ ರಾಷ್ಟ್ರೀಯ ನೀರಾವರಿ ಯೋಜನೆಗೆ ಸೇರ್ಪಡೆಯಾಗಲಿರುವ ಮೊದಲ ಯೋಜನೆಯಿದು ಎಂದು ಬಣ್ಣಿಸಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ವಿವಿಧ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಮುಖ್ಯಮಂತ್ರಿಗಳ ಕಾರ್ಯಕ್ರಮವನ್ನು ಸಮರ್ಥವಾಗಿ ನಿಭಾಯಿಸಲು ಸನ್ನದ್ಧರಾಗಬೇಕು. ಕಾರ್ಯಕ್ರಮದಲ್ಲಿ ಯಾವುದೇ ತೊಂದರೆಯಾಗದಂತೆ ನಿರ್ವಹಿಸಿ ಜಿಲ್ಲೆಯ ಘನತೆ ಹೆಚ್ಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್, ತಾಪಂ ಇಒ ಮಲ್ಲಾ ನಾಯ್ಕ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಸರ್ಕಾರಿ ಕಾರ್ಯಕ್ರಮವಾಗಿರುವುದರಿಂದ ವೇದಿಕೆಯ ಸುತ್ತ ಮುತ್ತ ಪಕ್ಷದ ಚಿನ್ಹೆ ಇರುವ ಬಾವುಟ, ಫ್ಲೆಕ್ಸ್ ಮತ್ತು ಬಂಟಿಂಗ್ಸ್‌ಗಳನ್ನು ಹಾಕುವಂತಿಲ್ಲ ಎಂದು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ.
-ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ