Advertisement

ವೆನ್ಲಾಕ್: ಕೋವಿಡ್ 19 ಪತ್ತೆ ಪ್ರಯೋಗಾಲಯ ಕಾರ್ಯಾರಂಭ

03:47 AM Apr 08, 2020 | Sriram |

ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆ ಯಲ್ಲಿ ನೂತನ ಕೋವಿಡ್‌ ಪ್ರಯೋಗಾಲಯ ಮಂಗಳವಾರ ಅಧಿಕೃತ ಕಾರ್ಯಾರಂಭ ಮಾಡಿದೆ. ಮೊದಲ ದಿನವೇ 10 ಮಂದಿಯ ಗಂಟಲ ದ್ರವ ಮಾದರಿಯನ್ನು ಹೊಸ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ.

Advertisement

ನೂತನ ಪ್ರಯೋಗಾಲಯದಲ್ಲಿ ರೋಗಿಗಳ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ಒಂದು ಗಂಟೆಯೊಳಗೇ ಲಭ್ಯವಾಗಲಿದೆ. ರೋಗ ಶಾಸ್ತ್ರಜ್ಞ ಡಾ| ಶರತ್‌ಕುಮಾರ್‌ ಅವರು ಪ್ರಯೋಗಾಲಯದ ಮೇಲ್ವಿಚಾರಕರಾಗಿದ್ದಾರೆ. ಇಬ್ಬರು ವೈದ್ಯರು ಸಹಿತ ಒಟ್ಟು ಐದು ಮಂದಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ವೆನ್ಲಾಕ್ ನಲ್ಲಿ ಕೋವಿಡ್‌ 19 ಸಂಬಂಧಪಟ್ಟಂತೆ ಶಂಕಿತ ಪ್ರಕರಣಗಳು ದಾಖಲಾದಾಗ ರೋಗಿಗಳ ಗಂಟಲ ದ್ರವ ಮಾದರಿಯನ್ನು ಹಾಸನ ಮತ್ತು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುತ್ತಿತ್ತು. ಈ ಪರೀಕ್ಷಾ ವರದಿ ಮತ್ತೆ ಜಿಲ್ಲಾ ಆರೋಗ್ಯ ಇಲಾಖೆ ಕೈ ಸೇರಲು ಕನಿಷ್ಠ ಎರಡು ದಿನಗಳ ಕಾಲಾವಕಾಶ ಬೇಕಿತ್ತು. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ವಿದೇಶಗಳಿಂದ ಬಂದ ಹಲವಾರು ರೋಗಿಗಳಲ್ಲಿ ವಿವಿಧ ರೋಗ ಲಕ್ಷಣ ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಗಂಟಲು ದ್ರವ ಪರೀಕ್ಷೆ ಮಾಡಲಾಗುವುದರಿಂದ ಇದಕ್ಕೆ ಪ್ರಯೋಗಾಲಯ ಅವಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಐಸಿಎಂಆರ್‌ ಪ್ರಯೋಗಾಲಯಕ್ಕೆ ಸೋಮವಾರವೇ ಅನುಮತಿ ನೀಡಿದ್ದು, ಮಂಗಳವಾರ ಕಾರ್ಯಾರಂಭ ಮಾಡಿದೆ. ಪ್ರಯೋಗಾಲಯದ ಪ್ರಾಯೋಗಿಕವಾಗಿ ವಾರದ ಹಿಂದೆಯೇ ಕಾರ್ಯಾರಂಭಿಸಿತ್ತು.

ದ.ಕ.: ಕೋವಿಡ್‌ 19 ಪ್ರಕರಣ ಇಲ್ಲ
ದ.ಕ. ಜಿಲ್ಲೆಯಿಂದ ಪರೀಕ್ಷೆಗೆ ಕಳುಹಿಸಲಾಗಿದ್ದ 10 ಮಂದಿಯ ಗಂಟಲ ದ್ರವ ಮಾದರಿಯ ವರದಿ ಮಂಗಳವಾರ ಜಿಲ್ಲಾಡಳಿತದ ಕೈ ಸೇರಿದ್ದು, ಎಲ್ಲವೂ ನೆಗೆಟಿವ್‌ ಆಗಿವೆ. ಇದರಲ್ಲಿ ವೆನ್ಲಾಕ್ ನಲ್ಲಿ ಹೊಸದಾಗಿ ಆರಂಭವಾಗಿರುವ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ವರದಿಗಳೂ ಸೇರಿವೆ. ಏಳು ಮಾದರಿಗಳ ವರದಿ ಸಿಗಲು ಬಾಕಿ ಇದೆ. 3 ಮಂದಿ ಹೊಸದಾಗಿ ದಾಖಲಾಗಿದ್ದಾರೆ. ಹೊಸದಾಗಿ 49 ಮಂದಿಯನ್ನು ಮಂಗಳವಾರ ತಪಾಸಣೆಗೊಳಪಡಿಸಲಾಗಿದೆ. ಇಲ್ಲಿವರೆಗೆ 3,930 ಮಂದಿ ಗೃಹ ನಿಗಾವಣೆಯಲ್ಲಿದ್ದು, 10 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿದ್ದಾರೆ. 1989 ಮಂದಿ 28 ದಿನಗಳ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.

ಪ್ರತಿ ಕುಟುಂಬಕ್ಕೆ ಅರ್ಧ ಲೀ. ಹಾಲು
ಸರಕಾರದ ಆದೇಶದಂತೆ ಪ್ರತಿ ಕುಟುಂಬಕ್ಕೆ ಒಂದು ಲೀಟರ್‌ ಹಾಲಿನ ಬದಲಾಗಿ ಅರ್ಧ ಲೀಟರ್‌ಗೆ ಸೀಮಿತಗೊಳಿಸಲಾಗಿದೆ. ದ.ಕ. ಜಿಲ್ಲೆಗೆ 3 ಸಾವಿರ ಲೀ. ಉಚಿತ ಹಾಲು ಸರಬರಾಜಿಗೆ ಸಂಬಂಧಿಸಿದಂತೆ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next