Advertisement

ವೆನ್ಲಾಕ್ ಆಯುಷ್‌ ಆಸ್ಪತ್ರೆ: ಉಪಕರಣ ಹಸ್ತಾಂತರ, ಪ್ರಕೃತಿ ವಿಭಾಗಕ್ಕೆ ಚಾಲನೆ

11:35 PM Mar 25, 2023 | Team Udayavani |

ಮಂಗಳೂರು: ಮಂಗಳೂರು ಕೆಮಿಕಲ್ಸ್‌ ಮತ್ತು ಫರ್ಟಿಲೈಸರ್ ಲಿ. ಒದಗಿಸಿಕೊಟ್ಟ ಸುಮಾರು 20 ಲಕ್ಷ ರೂ. ಮೌಲ್ಯದ ಅತ್ಯಾಧುನಿಕ ನ್ಯಾಚುರೋಪತಿ ಉಪಕರಣಗಳ ಹಸ್ತಾಂತರ ಮತ್ತು ಪ್ರಕೃತಿ ವಿಭಾಗಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ದ.ಕ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಮಾತನಾಡಿ, ನಗರದ ವೆನ್ಲಾಕ್ ಆಯುಷ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪ್ರಕೃತಿ ಚಿಕಿತ್ಸಾ ವಿಭಾಗ ಆರಂಭಿಸಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶ ಗಳಾದ ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಆಸ್ಪತ್ರೆಗಳಲ್ಲೂ ಪ್ರಕೃತಿ ಚಿಕಿತ್ಸೆ ಆರಂಭಿಸಬೇಕು. ಇದಕ್ಕೆ ಬೇಕಾದ ಭೂಮಿ ಮತ್ತು ಮೂಲಸೌಲಭ್ಯಕ್ಕೆ ಜಿಲ್ಲಾಡಳಿತ ಸಹಕಾರ ನೀಡಲಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರಿಗೂ ಈ ಸೌಲಭ್ಯ ದೊರೆಯ ಬೇಕು. ಇದಕ್ಕಾಗಿ ತಾಲೂಕು ಮಟ್ಟದಲ್ಲಿ ಕಟ್ಟಡ, ಮೂಲಸೌಲಭ್ಯ ಒದ ಗಿಸಲಾಗುವುದು. ಆಯುರ್ವೇದ, ನ್ಯಾಚುರೋಪತಿ, ಯುನಾನಿ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಇದೆ ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಮೊಹಮ್ಮದ್‌ ಇಕ್ಬಾಲ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕೇಂದ್ರದಲ್ಲಿ ಎಲ್ಲಾ ವಿಧದ ಜಲಚಿಕಿತ್ಸೆ, ಸೋನಾಬಾತ್‌, ಆಕ್ಯುಪಂಕ್ಚರ್‌, ಆಕ್ಯು ಪ್ರಶರ್‌, ಅಯಾನ್‌ ಡೆಟಾಕ್ಸ್‌ ಥೆರಪಿ, ಮ್ಯಾಗ್ನೆಟಿಕ್‌ ಥೆರಪಿ, ಮ್ಯೂಸಿಕ್‌ ಥೆರಪಿ, ಮಡ್‌ಬಾತ್‌ ಮುಂತಾದ ಅಪರೂಪದ ಚಿಕಿತ್ಸೆಗಳು ಲಭ್ಯ ಇರಲಿವೆ. ಮುಂದಿನ ದಿನಗಳಲ್ಲಿ ಸರಕಾರದ ಮಾರ್ಗಸೂಚಿಯಂತೆ ಎಪಿಎಲ್‌ ಕಾರ್ಡ್‌ದಾರರಿಗೆ ಕನಿಷ್ಠ ದರ ನಿಗದಿಪಡಿಸಲಾಗುವುದು ಎಂದರು.

ಎಂಸಿಎಫ್‌ ಚೀಫ್‌ ಪ್ರೊಡಕ್ಷನ್‌ ಆಫೀಸರ್‌ ಗಿರೀಶ್‌ ಎಸ್‌., ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್‌ ಕುಮಾರ್‌, ವೆನ್ಲಾಕ್ ಆಸ್ಪತ್ರೆ ಜಿಲ್ಲಾ ಸರ್ಜನ್‌ ಡಾ| ಸದಾಶಿವ ಶ್ಯಾನುಭೋಗ್‌ ಅತಿಥಿಗಳಾಗಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next