ಮಂಗಳೂರು: ವೆನ್ಲಾಕ್ ಆಸ್ಪತ್ರೆ(Wenlock Hospital) ಸುಸಜ್ಜಿತವಾಗಿ ಸೇವೆಗೆ ಸಿದ್ಧಗೊಂಡಿದೆ. ಆಧುನಿಕ ತಂತ್ರಜ್ಞಾನ ಬಳಸಿ ನೂತನ ಆಸ್ಪತ್ರೆಯನ್ನು ಖಾಸಗಿಗೆ ಸಮಾನಾಗಿ ಅಭಿವೃದ್ಧಿ ಮಾಡಲಾಗಿದೆ. ರಾಜ್ಯದ ಉನ್ನತ ಆಸ್ಪತ್ರೆಗಳ ಪೈಕಿ ವೆನ್ಲಾಕ್ ಒಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao )ಹೇಳಿದರು.
ದ.ಕ. ಜಿಲ್ಲಾಡಳಿತ, ಜಿ. ಪಂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ಸ್ಮಾರ್ಟ್‌ಸಿಟಿ ಲಿ.ಹಾಗೂ ವೆನ್ಲಾಕ್ ವತಿಯಿಂದ ನಿರ್ಮಾಣಗೊಂಡ ವೆನ್ಲಾಕ್‌ನ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
250 ಹಾಸಿಗೆಯ ಆಸ್ಪತ್ರೆಯನ್ನು 63 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೆಚ್ಚುವರಿಯಾಗಿ 17 ಕೋ. ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಮಂಜೂರಾಗಿದ್ದು, ಶೀಘ್ರ ಟೆಂಡರ್ ಕರೆದು ಕೆಲಸ ಆರಂಭಿಸಲಾಗುವುದು ಎಂದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ, ಕರ್ನಾಟಕಕ್ಕೆ ಏಮ್ಸ್ ಆಸ್ಪತ್ರೆ ಆಗತ್ಯವಾಗಿದ್ದು, ಮಂಗಳೂರಿನಲ್ಲೇ ಇದು ಸ್ಥಾಪನೆಯಾಗುವ ನಿಟ್ಟಿನಲ್ಲಿ ಜತೆಯಾಗಿ ಶ್ರಮಿಸೋಣ ಎಂದರು.
ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸ್ಪೀಕರ್ ಖಾದರ್ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆಎಂಸಿ ಆಸ್ಪತ್ರೆ ಡೀನ್ ಡಾ| ಬಿ. ಉಣ್ಣಿಕೃಷ್ಣನ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊವೈಸ್ ಚಾನ್ಸಿಲರ್ ಡಾ| ದಿಲೀಪ್ ನಾಯಕ್, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಜಿ.ಪಂ. ಸಿಇಒ ಡಾ| ಆನಂದ್ ಕೆ., ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ದ.ಕ. ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಮುಂತಾದವರಿದ್ದರು. ವೆನ್ಲಾಕ್ ಅಧೀಕ್ಷಕಿ ಡಾ| ಜೆಸಿಂತಾ ಡಿ’ಸೋಜಾ ಸ್ವಾಗತಿಸಿದರು.