Advertisement

ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯ: ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌  ಜಯಭೇರಿ

11:11 PM Mar 20, 2023 | Team Udayavani |

ವೆಲ್ಲಿಂಗ್ಟನ್‌: ಶ್ರೀಲಂಕಾ ವಿರುದ್ಧದ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 58 ರನ್ನುಗಳಿಂದ ಗೆಲ್ಲುವ ಮೂಲಕ ನ್ಯೂಜಿಲ್ಯಾಂಡ್‌ 2-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಗಿ ಸರಣಿಯನ್ನು ವಶಪಡಿಸಿಕೊಂಡಿದೆ.

Advertisement

416 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಶ್ರೀಲಂಕಾದ ಮೇಲೆ ಕಿವೀಸ್‌ ಫಾಲೋಆನ್‌ ಹೇರಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ಸಂಘಟಿಸಿತಾದರೂ ಇನ್ನಿಂಗ್ಸ್‌ ಸೋಲಿನ ಸಂಕಟದಿಂದ ಪಾರಾಗಲು ಸಾಧ್ಯವಾಗಲಿಲ್ಲ. 358ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

50 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ಕುಸಲ್‌ ಮೆಂಡಿಸ್‌ ಅದೇ ಮೊತ್ತಕ್ಕೆ ಔಟಾಗುವುದರೊಂದಿಗೆ ಲಂಕೆ 4ನೇ ದಿನದ ಆರಂಭದಲ್ಲೇ ಆಘಾತಕ್ಕೆ ಸಿಲುಕಿತು. ದಿನೇಶ್‌ ಚಂಡಿಮಾಲ್‌ 62, ಧನಂಜಯ ಡಿಸಿಲ್ವ 98 ರನ್‌ ಬಾರಿಸಿ ಸೋಲನ್ನು ತುಸು ಮುಂದೂಡಿದರು. ಇವರಿಂದ 5ನೇ ವಿಕೆಟಿಗೆ 126 ರನ್‌ ಹರಿದು ಬಂತು.

ನಾಯಕ ಟಿಮ್‌ ಸೌಥಿ ಮತ್ತು ಬ್ಲೇರ್‌ ಟಿಕ್ನರ್‌ ತಲಾ 3 ವಿಕೆಟ್‌, ಮೈಕಲ್‌ ಬ್ರೇಸ್‌ವೆಲ್‌ 2 ವಿಕೆಟ್‌ ಉರುಳಿಸಿದರು. ಹೆನ್ರಿ ನಿಕೋಲ್ಸ್‌ ಪಂದ್ಯಶ್ರೇಷ್ಠ, ಕೇನ್‌ ವಿಲಿಯಮ್ಸನ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಎರಡೂ ತಂಡಗಳಿನ್ನು 3 ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿವೆ.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-4 ವಿಕೆಟಿಗೆ 580 ಡಿಕ್ಲೇರ್‌. ಶ್ರೀಲಂಕಾ-164 ಮತ್ತು 358 (ಧನಂಜಯ 98, ಚಂಡಿಮಾಲ್‌ 62, ಕರುಣಾರತ್ನೆ 51, ಮೆಂಡಿಸ್‌ 50, ಸೌಥಿ 51ಕ್ಕೆ 3, ಟಿಕ್ನರ್‌ 84ಕ್ಕೆ 3, ಮೈಕಲ್‌ ಬ್ರೇಸ್‌ವೆಲ್‌ 100ಕ್ಕೆ 2).

ಪಂದ್ಯಶ್ರೇಷ್ಠ: ಹೆನ್ರಿ ನಿಕೋಲ್ಸ್‌. ಸರಣಿಶ್ರೇಷ್ಠ: ಕೇನ್‌ ವಿಲಿಯಮ್ಸನ್‌.

“ಟೆಸ್ಟ್‌ ನಾಯಕತ್ವ ಸಾಕು’
ನ್ಯೂಜಿಲ್ಯಾಂಡ್‌ ಎದುರಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ಕಳೆದುಕೊಂಡ ಬಳಿಕ ಶ್ರೀಲಂಕಾ ಟೆಸ್ಟ್‌ ತಂಡದ ನಾಯಕ ದಿಮುತ್‌ ಕರುಣಾರತ್ನೆ ಈ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಐರ್ಲೆಂಡ್‌ ವಿರುದ್ಧ ತವರಲ್ಲಿ ನಡೆಯುವ 2 ಪಂದ್ಯಗಳ ಟೆಸ್ಟ್‌ ಸರಣಿ ಮುಗಿದೊಡನೆ ನಾಯಕತ್ವ ಬಿಡುವುದಾಗಿ ಹೇಳಿದರು.

2019ರಲ್ಲಿ ಕರುಣಾರತ್ನೆ ಶ್ರೀಲಂಕಾ ಟೆಸ್ಟ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದರು. ಒಟ್ಟು 26 ಟೆಸ್ಟ್‌ ಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 10 ಜಯ, 10 ಸೋಲು, 6 ಡ್ರಾ ಇವರ ಸಾಧನೆ. ನಾಯಕನಾಗಿ ಆಯ್ಕೆಯಾದ ಮೊದಲ ಸರಣಿಯಲ್ಲೇ ದಕ್ಷಿಣ ಆಫ್ರಿಕಾವನ್ನು ಅವರದೇ ನೆಲದಲ್ಲಿ 2-0 ಅಂತರದಿಂದ ಮಣಿಸಿದ್ದು ಇವರ ಅಮೋಘ ಸಾಧನೆಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next