ವಾಷಿಂಗ್ಟನ್ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಯಾವುದೇ ಇರಾನ್ ವ್ಯಕ್ತಿಗಳು ಅಮೆರಿಕಾಕ್ಕೆ ಅಥವಾ ಟೆಹ್ರಾನ್ ನಲ್ಲಿರುವ ಅಮೆರಿಕಾದ ನಾಗರಿಕರಿಗೆ ಬೆದರಿಕೆ ಅಥವಾ ಅಪಾಯವನ್ನುಂಟು ಮಾಡಿದರೆ ‘ಹೊಚ್ಚ ಹೊಸ’ ಮತ್ತು ‘ಅತೀ ಸುಂದರವಾದ’ ಮಿಲಿಟರಿ ಉಪಕರಣಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಬಳಸಲಾಗುವುದು ಎಂದಿದ್ದಾರೆ.
ಪ್ರಭಾವಿ ಸೇನಾ ಕಮಾಂಡರ್ ಸೋಲೆಮನಿ ಹತ್ಯೆ ಮಾಡಿದ ಬಳಿಕ, ಇರಾಕ್ ನಿಂದ ತನ್ನ ನಾಗರಿಕರಿಗೆ ಮರಳುವಂತೆ ಅಮೆರಿಕಾ ಸೂಚನೆ ನೀಡಿತ್ತು. ಮಾತ್ರವಲ್ಲದೆ ಸರಣಿ ಟ್ವೀಟ್ ಮಾಡಿದ ಟ್ರಂಪ್, ಇರಾನ್ ಅಮೇರಿಕಾದ ಮೇಲೆ ದಾಳಿ ಮಾಡಲು ಮುಂದಾದರೇ ಈಗಾಗಲೇ ಗುರುತಿಸಿರುವ ಇರಾನ್ ನ ಪ್ರಮುಖ 52 ಸ್ಥಳಗಳನ್ನು ಧ್ವಂಸ ಮಾಡಲಾಗುವುದು ಎಂದಿದ್ದರು.
ಮತ್ತೊಂದೆಡೆ ಸೋಲೆಮನಿ ಹತ್ಯೆ ಖಂಡಿಸಿ ಟೆಹರಾನ್ ನಲ್ಲಿ ಬಾರೀ ಪ್ರತಿಭಟನೆ ನಡೆಯುತ್ತಿದ್ದು ಸಾವಿರಾರು ಇರಾನ್ ನಾಗರಿಕರು ಅಮೆರಿಕಾಗೆ ಸಾವು( ಡೆತ್ ಟು ಅಮೆರಿಕಾ) ಎಂದು ಘೋಷಣೆ ಕೂಗುತ್ತಿದ್ದಾರೆ.
ಅಮೆರಿಕಾದ ಮೇಲೆ ಕಠೋರ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದ್ದರಿಂದ, ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕಾವು 3 ಸಾವಿರ ಹೆಚ್ಚುವರಿ ಸೇನಾಪಡೆಗಳನ್ನು ನಿಯೋಜನೆ ಮಾಡಿದೆ.