Advertisement

ಬಳ್ಳಾರಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ

07:48 PM Sep 18, 2020 | Suhan S |

ಬಳ್ಳಾರಿ: ಸ್ವಾತಂತ್ರ್ಯದ ನಂತರ ಭಾರತದ ಒಕ್ಕೂಟದಲ್ಲಿ ಸೇರದ ಹೈದರಾಬಾದ್‌ ನಿಜಾಮ ತನ್ನ ಸ್ವತಂತ್ರ ಮತೀಯ ರಾಜ್ಯದ ಅಸ್ತಿತ್ವ ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳನ್ನು ಸರ್ದಾರ ವಲ್ಲಭಭಾಯಿ ಪಟೇಲರ ದಿಟ್ಟ ನಿರ್ಧಾರದಿಂದಾಗಿ ಹೈದರಾಬಾದ್‌ ಸಂಸ್ಥಾನ ನಿಜಾಮನಿಂದ ಮುಕ್ತಿ ಹೊಂದುವಂತಾಯಿತು ಎಂದು ಕಲ್ಯಾಣ ಜನ ಮೋರ್ಚಾದ ಸಂಚಾಲಕ ಪ್ರಭುದೇವ ಕಪ್ಪಗಲ್ಲು ತಿಳಿಸಿದರು.

Advertisement

ನಗರದ ರಾಘವ ಕಲಾಮಂದಿರ ಬಳಿಯ ವೃತ್ತದಲ್ಲಿ ಕಲ್ಯಾಣ ಜನ ಮೋರ್ಚಾ ಹಾಗೂ ರಂಗತೋರಣ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಮುಕ್ತಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ , ಸರ್ದಾರ ವಲ್ಲಭಭಾಯಿ ಪಟೇಲ ಹಾಗೂ ಕರ್ನಾಟಕ ಏಕೀಕರಣಕ್ಕಾಗಿ ಬಲಿದಾನಗೈದ ಬಳ್ಳಾರಿಯ ಪಿಂಜಾರ ರಂಜಾನ್‌ ಸಾಬ್‌ರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಗರದ ಲೆಕ್ಕಪರಿಶೋಧಕ ಟಿ.ಸಿ.ಗೌಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಂಗಾಯಣ ರಂಗ ಸಮಾಜದ ಸದಸ್ಯ ಶಿವೇಶ್ವರಗೌಡ ಕಲ್ಲುಕಂಬ, ಹಿರಿಯ ರಂಗ ಕಲಾವಿದ ರಮೇಶಗೌಡ ಪಾಟೀಲ್‌, ಗಂಗಾಧರ ದುರ್ಗಾಂ, ರಾಘವ, ಕೆ.ಆರ್‌. ಮಲ್ಲೇಶ್‌ ಕುಮಾರ್‌, ಪ್ರವೀಣ್‌ ನಾಯಕ್‌, ವೆಂಕಟೇಶ ಬಡಿಗೇರ, ವೀರಭದ್ರಪ್ಪ, ಅಬ್ದುಲ್‌ ರಜಾಕ್‌, ರಮಣಪ್ಪ ಭಜಂತ್ರಿ ಇತರರಿದ್ದರು. ಅಡವಿಸ್ವಾಮಿ ಸ್ವಾಗತಿಸಿದರು.

ಹೆಚ್ಚಿನ ಅನುದಾನ ಬಿಡುಗಡೆಯಿಂದ ಅಭಿವೃದ್ಧಿ : ಕುರುಗೋಡು: ಕಲ್ಯಾಣ-ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು ಅಂದಾಗ ಮಾತ್ರ ಈ ಭಾಗದ ಜನರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕುರುಗೋಡು ತಾಪಂ ಅದ್ಯಕ್ಷೆ ತಾಯಮ್ಮ ಅಯ್ಯಪ್ಪ ಹೇಳಿದರು.

ಗುರುವಾರ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಲ್ಯಾಣ-ಕರ್ನಾಟಕದ ದಿನಾಚರಣೆಯಲ್ಲಿ ದ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕುರುಗೋಡು ತಾಪಂ ಉಪಾಧ್ಯಕ್ಷ ಬಸವರಾಜ ಮಾತನಾಡಿ, ಹೈ-ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಬರೀ ಹೆಸರು ಬದಲಿಸಿದರೆ ಸಾಲದು, ಜನರ ಕಲ್ಯಾಣವಾಗಬೇಕು. ಕಲ್ಯಾಣ-ಕರ್ನಾಟಕದ ವ್ಯಾಪ್ತಿಗೆ ಒಳಪಡುವ ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ, ಕಲಬುರಗಿ ಮತ್ತು ಬೀದರ ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಬೇಕೆಂದು ನುಡಿದರು. ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಗಣೇಶ, ಪ್ರಥಮ ದರ್ಜೆ ಸಹಾಯಕ ಬಸವನಗೌಡ ಸೇರಿದಂತೆ ಇತರೆ ಸಿಬ್ಬಂದಿವರ್ಗದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next