ಕುಂದಾಪುರ: ಪ್ರಾಮಾಣಿಕತೆ, ಶುದ್ಧ ಮನಸ್ಸಿನ ಜತೆಗೆ ಪರಿಶ್ರಮದಿಂದ ಸಾಧನೆಯ ಶಿಖರವನ್ನೇರಬಹುದು. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ದೇವರ ಸೇವೆಯ ಜತೆಗೆ ಜನಕಲ್ಯಾಣ ಕಾರ್ಯಗಳನ್ನು ಮಾಡಬಹುದು ಎಂಬುದನ್ನು ಹಟ್ಟಿಯಂಗಡಿ ಕ್ಷೇತ್ರ ತೋರಿಸಿಕೊಟ್ಟಿದೆ ಎಂದು ಸಾಗರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಹೇಳಿದರು. ಅವರು ರವಿವಾರ ಸಂಜೆ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಮಾತನಾಡಿ, ದೇವರ ಮೇಲೆ ಭಯ ಮತ್ತು ಭಕ್ತಿ ಇದ್ದಲ್ಲಿ ಶ್ರದ್ಧೆ ಮೂಡುತ್ತದೆ ಎಂದರು.
ಸಮ್ಮಾನ: ಕುಂದಾಪುರದ ಶ್ರೀ ವೆಂಕಟರಮಣ ದೇವ ಎಜುಕೇಶನಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಕಾರ್ಯದರ್ಶಿ ಭಂಡಾರಿ ರಾಧಾಕೃಷ್ಣ ಶೆಣೈ, ಯಕ್ಷಗಾನ ಕಲಾವಿದ ಹೆಮ್ಮಾಡಿ ರಾಮ, ಹಟ್ಟಿಯಂಗಡಿ ದೇವಸ್ಥಾನದ ಮ್ಯಾನೇಜರ್ ಪ್ರಸಾದ್ ಭಟ್ ದಂಪತಿಯನ್ನು ಸಮ್ಮಾನಿಸ ಲಾಯಿತು. ಅರ್ಹ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ಉದ್ಯಮಿ ಅರುಣ ಕುಮಾರ ಬೆಂಗಳೂರು ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪತ್ರಕರ್ತ ಸಂತೋಷ ಕೋಣಿ ಉಪಸ್ಥಿತರಿದ್ದರು.
ಹಟ್ಟಿಯಂಗಡಿ ದೇವಸ್ಥಾನದ ಧರ್ಮದರ್ಶಿ ಎಚ್. ರಾಮಚಂದ್ರ ಭಟ್ ಪ್ರಸ್ತಾವನೆಗೈದರು. ಪ್ರಧಾನ ಅರ್ಚಕ ಎಚ್. ಬಾಲಚಂದ್ರ ಭಟ್ ಸ್ವಾಗತಿಸಿದರು. ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಶರಣ್ ಕುಮಾರ ಫಲಾನುಭವಿ ಪಟ್ಟಿ ವಾಚಿಸಿದರು. ಉಪಪ್ರಾಂಶುಪಾಲ ರಾಮ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕರಾದ ಗುರುರಾಜ್, ಜಯಂತ್ ಶ್ಯಾನುಭಾಗ್ ಸಮ್ಮಾನಿತರ ಪರಿಚಯ ಮಾಡಿದರು. ಉಪನ್ಯಾಸಕ ಪ್ರಶಾಂತ ಹೆಗ್ಡೆ ವಂದಿಸಿದರು.