ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆಂದು ಮೈಸೂರಿಗೆ ಆಗಮಿಸಿದ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಅ.10ರಂದು ಬೆಳಗ್ಗೆ 7.05ಕ್ಕೆ ಚಾಮುಂಡಿಬೆಟ್ಟದಲ್ಲಿ ನಡೆಯುವ ಸಮಾರಂಭದಲ್ಲಿ ಸುಧಾಮೂರ್ತಿ ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ನಗರದ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಪತಿ ನಾರಾಯಣಮೂರ್ತಿ ಅವರೊಂದಿಗೆ ಆಗಮಿಸಿದ ಸುಧಾಮೂರ್ತಿ ಅವರಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಇನ್ನಿತರ ಅಧಿಕಾರಿಗಳು ಪುಷ್ಪಗುತ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಮೂರ್ತಿ, ನಾಡಹಬ್ಬವಾದ ಮೈಸೂರು ದಸರಾ ಉದ್ಘಾಟನೆ ಮಾಡುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಉದ್ಘಾಟನೆ ಮಾಡಲು ನನ್ನ ಹೆಸರು ಪ್ರಕಟಿಸಿದಾಗ ನನಗೆ ಫಸ್ಟ್ ರ್‍ಯಾಂಕ್ ಬಂದಷ್ಟೇ ಸಂತೋಷವಾಯಿತು.
ನಾನು ದಸರಾ ಉದ್ಘಾಟನೆ ಮಾಡುತ್ತೇನೆಂದು ಊಹೆ, ನಿರೀಕ್ಷೆಯನ್ನೂ ಮಾಡಿರಲಿಲ್ಲ. ದಸರಾ ಕೇವಲ ಎಲ್ಲಾ ಹಬ್ಬಗಳಂತೆ ಅಲ್ಲ. ಇದು ವಿಶೇಷ ನಾಡಹಬ್ಬವಾಗಿದ್ದು, ಇದು ರಾಜ್ಯದ ಸಾಂಸ್ಕೃತಿಕ ಪ್ರತೀಕವಾಗಿದೆ. ಹೀಗಾಗಿ ಎಲ್ಲರೂ ಈ ಹಬ್ಬವನ್ನು ಆಚರಿಸಿ, ಗೌರವಿಸಬೇಕು. ನಮಗಿರುವ ಇತಿಮಿತಿಯಲ್ಲಿ ನಾವು ಸರಳವಾಗಿ ದಸರಾ ಆಚರಿಸಬೇಕಿದೆ ಎಂದರು.
ನಾನು 1950ರಲ್ಲಿ ಜಯಚಾಮರಾಜೇಂದ್ರ ಒಡೆಯರ್ ದರ್ಬಾರ್ ನೋಡಿದ್ದೆ. ಆಗ ನಾನು ಎಂಟನೇ ತರಗತಿ ಓದುತ್ತಿದ್ದೆ. ಅಂದಿನ ದಸರಾಕ್ಕೂ ಇಂದಿನ ದಸರಾಕ್ಕೂ ಸಾಕಷ್ಟು ವ್ಯತ್ಯಾಸಗಳಿದೆ. 60 ವರ್ಷಗಳ ಇತಿಹಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಲ್ಲದೆ ಪರಂಪರೆಯಿಂದ ಆಚರಿಸಿಕೊಂಡು ಬಂದಿರುವ ದಸರಾ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಯೋಗೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಸಮನ್ವಯಾಧಿಕಾರಿ ಪ್ರಭಾ ಅರಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಎಸ್.ಸೋಮಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.