ಧಾರವಾಡ: ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಕೆಲಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಮಾತನಾಡಿ, ಮಕ್ಕಳು ಮನೆಯನ್ನು ಬಿಟ್ಟರೆ ಅಧಿಕ ಸಮಯವನ್ನು ಶಾಲೆಯಲ್ಲಿಯೇ ಕಳೆಯುತ್ತಾರೆ. ಪಾಲಕರು ಮತ್ತು ಶಿಕ್ಷಕರು ಹೆಚ್ಚು ಮುತುವರ್ಜಿ ವಹಿಸಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ ಮಾತನಾಡಿ, ದುಡ್ಡು ದೊಡ್ಡಪ್ಪ ವಿದ್ಯೆ ಅದರಪ್ಪ ಎಂಬ ಗಾದೆ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಭವ್ಯ ಭಾರತದ ನಿರ್ಮಾಣಕ್ಕೆ ಗುಣಾತ್ಮಕ ಶಿಕ್ಷಣ ಅಗತ್ಯ ಎಂದು ಹೇಳಿದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅರ್ಹ ಪದವಿ, ತರಬೇತಿ ಹೊಂದಿದ ಪ್ರತಿಭಾವಂತ ಶಿಕ್ಷಕರಿದ್ದಾರೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ತರುವ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಮೂಹ ನೃತ್ಯ, ಶಿಕ್ಷಕರಾದ ಎಫ್.ಬಿ. ಕಣವಿ, ವಿ.ಎನ್. ಕೀರ್ತಿವತಿ ಮತ್ತು ಸಂಗಡಿಗರಿಂದ ಜಾಗೃತಿ ಗೀತೆಗಳು ಮೂಡಿಬಂದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಕ್ಷರ ಬಂಡಿಯ ಮೆರವಣಿಗೆ ಜರುಗಿತು.
ಮುಖಂಡರಾದ ವಿಜಯಲಕ್ಷ್ಮೀ ಲೂತಿಮಠ, ಬಲರಾಮ ಕುಸುಗಲ್, ಬಸನಗೌಡ ಸಿದ್ಧಾಪುರ, ಕಲ್ಲನಗೌಡ ಸಿದ್ಧಾಪುರ, ಡಿಡಿಪಿಐ ಗಜಾನನ ಮನ್ನಿಕೇರಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎ. ಖಾಜಿ, ವಿದ್ಯಾ ನಾಡಿಗೇರ, ಶ್ರೀಶೈಲ ಕಟ್ಟಿ, ಎಸ್.ಎಂ. ಹುಡೇದಮನಿ, ಉಪಯೋಜನಾ ಸಮನ್ವಯಾಧಿಕಾರಿ ಪ್ರಮೋದ್ ಮಹಾಲೆ, ಮುಖ್ಯೋಪಾಧ್ಯಾಯ ಎಸ್.ಬಿ. ಕೇಸರಿ ಇದ್ದರು.