ಚಿಕ್ಕಬಳ್ಳಾಪುರ: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೋಲಾರ ಜಿಲ್ಲೆಯ ಮುಳಬಾಗಿಲುನಿಂದ ಆರಂಭವಾಗಿರುವ ಪಂಚರತ್ನ ಯಾತ್ರೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಪವಿತ್ರ ಯಾತ್ರಾಸ್ಥಳ ಶ್ರೀ ಯೋಗಿ ನಾರಾಯಣ ಅವರ ಪುಣ್ಯ ಭೂಮಿಗೆ ಪಂಚರತ್ನ ಯಾತ್ರೆ ಪ್ರವೇಶ ಮಾಡಿದ್ದು, ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯು ಕೋಲಾರ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ ಪಂಚರತ್ನ ಯಾತ್ರೆ ನಡೆಯಲಿದೆ. ಕೈವಾರದಲ್ಲಿ ಮೊದಲು ಹಝರತ್ ಇಬ್ರಾಹಿಂ ಷಾವಲೀ ಮತ್ತು ಮಖ್ದೂಂ ಷಾ ವಲೀ ದರ್ಗಾದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಕೆ. ಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಸಹಸ್ರಾರು ಜೆಡಿಎಸ್ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯನ್ನು ಭವ್ಯವಾಗಿ ಬರಮಾಡಿಕೊಂಡರು.
Related Articles
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುಣ್ಯಕ್ಷೇತ್ರ ಕೈವಾರದ ಶ್ರೀ ಯೋಗಿನಾರಾಯಣ ಮತ್ತು ಅವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸುವ ಮೂಲಕ ಪಂಚರತ್ನ ಯಾತ್ರೆಯನ್ನು ಆರಂಭಿಸಿದರು. ಇದೇ ಸಮಯದಲ್ಲಿ ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಹರ್ಷೋದ್ಗಾರದ ನಡುವೆ ಯಾತ್ರೆ ಮುಂದುವರೆಯಿತು.
ಮಳೆಯನ್ನೂ ಲೆಕ್ಕಿಸದೆ ಭಾಷಣ ಅಲಿಸಿದ ಜನ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಭಾಷಣ ಮಾಡುವ ವೇಳೆ ಮಳೆ ಸುರಿದರೂ ಕೂಡಾ ಅದನ್ನು ಲೆಕ್ಕಿಸದೆ ಜೆಡಿಎಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಷಣ ಆಲಿಸಿದರು. ಇದಕ್ಕೆ ಮನಸೋತ ಮಾಜಿ ಸಿಎಂ ಕುಮಾರಸ್ವಾಮಿ ನಿಮ್ಮ ಪ್ರೀತಿಯನ್ನು ಜೀವನ ಪರ್ಯಂತ ಮರೆಯುವುದಿಲ್ಲ ಎಂದರು.
ಬೈಕ್ ರ‍್ಯಾಲಿ: ಕೈವಾರ ಗ್ರಾಮದಿಂದ ಚಿನ್ನಸಂದ್ರವರಿಗೆ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪಕ್ಷದ ಬಾವುಟದೊಂದಿಗೆ ಬೈಕ್ ರ‍್ಯಾಲಿ ನಡೆಸಿ ಗಮನ ಸೆಳೆದರು. ಜನ ಮಹಡಿ ಮೇಲೆ ನಿಂತು ಮಾಜಿ ಸಿಎಂಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಇಂಚರ ಗೋವಿಂದರಾಜ, ಮಾಜಿ ಸದಸ್ಯ ಚೌಡರೆಡ್ಡಿ, ಜಿಪಂ ಮಾಜಿ ಸದಸ್ಯ ಶೇಖ್ ಮೌಲಾ, ಜೆಡಿಎಸ್ ಮುಖಂಡರಾಸ ಅಮರ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬೈರರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.