Advertisement

ವಾರಾಂತ್ಯ ರಜೆ: ಕಡಲತೀರಕ್ಕೆ ಪ್ರವಾಸಿಗರ ಲಗ್ಗೆ, ಮಲ್ಪೆಯಲ್ಲಿ ಟ್ರಾಫಿಕ್‌ ದಟ್ಟಣೆ

12:59 AM May 09, 2022 | Team Udayavani |

ಮಲ್ಪೆ/ಉಡುಪಿ: ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಶನಿವಾರ ಮತ್ತು ರವಿವಾರ ಮಲ್ಪೆಯ ಮುಖ್ಯ ರಸ್ತೆಯಲ್ಲಿ ವಾಹ‌ನ ದಟ್ಟಣೆ ಹೆಚ್ಚಾಗಿದ್ದು ಸವಾರರನ್ನು ಹೈರಾಣಗಿಸಿದೆ.

Advertisement

ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಹೆಚ್ಚಿನ ಪ್ರವಾಸಿಗರು ಧಾರ್ಮಿಕ ಕ್ಷೇತ್ರಕ್ಕೆ ಬಂದಿದ್ದರು. ಪ್ರವಾಸಿ ತಾಣಗಳತ್ತ ಲಗ್ಗೆ ಇಡುತ್ತಿದ್ದಾರೆ. ಮಲ್ಪೆ ಬೀಚ್‌, ಸೈಂಟ್‌ಮೇರಿ ಐಲ್ಯಾಂಡ್‌, ಸೀವಾಕ್‌ಗೆ ಭೇಟಿ ನೀಡಲು ಬಂದಿದ್ದರಿಂದ ಅಲ್ಲಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಒಂದಡೆ ಮಲ್ಪೆ ಬೀಚ್‌ನಲ್ಲಿ ಇಡೀ ದಿನ ತುಳುನಾಡ ಗೊಬ್ಬಲು ಕಾರ್ಯಕ್ರಮ ಇದ್ದುದರಿಂದ ಸ್ಥಳೀಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು .

ಪ್ರವಾಸಿಗರ ಹಾಟ್‌ ಸ್ಪಾಟ್‌ ಅಂತ ಕರೆಸಿಕೊಳ್ಳುವ ಮಲ್ಪೆ ಬೀಚ್‌ ಮತ್ತು ಐಲ್ಯಾಂಡ್‌ಗೆ ಮುಖ ಮಾಡುತ್ತಿದ್ದು ರವಿವಾರ ಬೆಳಗ್ಗಿನಿಂದಲೇ ಪ್ರವಾಸಿಗರ ವಾಹನಗಳೂ ಮಲ್ಪೆ ಕಡೆಗೆ ಅಗಮಿಸಿದ್ದು ವಾಹನಗಳ ಸರತಿ ಸಾಲುಗಳು ಕಂಡು ಬಂದವು. ಸಂಜೆ ಬಳಿಕ ಆದಿವುಡುಪಿ ವರೆಗೂ ಸಾಲುಗಟ್ಟಿ ನಿಂತಿದ್ದವು.

ಕರಾವಳಿ ಬೈಪಾಸ್‌ ಬಳಿ ಮಲ್ಪೆಗೆ ಬೀಚ್‌ಗೆ ಹೋಗವ ವಾಹನ ಹೆಚ್ಚಿಂದರಿಂದ ಟ್ರಾಫಿಕ್‌ ಜಾಮ್‌ ಆಗಿತ್ತು. ಮಲ್ಪೆ ಮುಖ್ಯ ರಸ್ತೆಯಲ್ಲಿಯೂ ಟ್ರಾಫಿಕ್‌ ಜಾಮ್‌ ಆಗಿದ್ದರಿಂದ ಜನ ಸಾಮಾನ್ಯರು ಕಿರಿಕಿರಿ ಅನುಭವಿಸುವಂತಾಗಿತ್ತು. ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಡುತ್ತಿದ್ದ ಸಂಜೆ ನಂತರ ಹೋಗುವ ವಾಹನಗಳನ್ನು ಕೊಡವೂರು ಮಾರ್ಗವಾಗಿ ಬಿಡುತ್ತಿದ್ದರು.ಶ್ರೀ ಕೃಷ್ಣಮಠ, ಕೊಲ್ಲೂರಿನಲ್ಲೂ ಭಕ್ತ ದಂಡು

ರವಿವಾರ ಉಡುಪಿಯ ಶ್ರೀಕೃಷ್ಣಮಠ, ಕೊಲ್ಲೂರಿನ ಶ್ರೀ ಮೂಕಾಂಬಿಕ ದೇವಸ್ಥಾನ, ಮಂದಾರ್ತಿಯ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಗುಡ್ಡೆಯ ಮಹಾಗಣಪತಿ ದೇವಸ್ಥಾನ ಸಹಿತವಾಗಿ ಜಿಲ್ಲೆಯ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ದಂಡೇ ಸೇರಿತ್ತು. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಕೆಲವು ದೇವಸ್ಥಾನದಲ್ಲಿ ಭಕ್ತರು ದರ್ಶನಕ್ಕಾಗಿ ಕೆಲಹೊತ್ತು ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.

ಜತೆಗೆ ಜಿಲ್ಲೆಯ ಮಲ್ಪೆ, ಮರವಂತೆ, ಸೋಮೇಶ್ವರ, ಕಾಪು ಬೀಚ್‌ ಸಹಿತವಾಗಿ ಪ್ರವಾಸಿ ತಾಣಗಳಲ್ಲೂ ಜನಸಂದಣಿ ಹೆಚ್ಚಿತ್ತು. ಮಲ್ಪೆ ಬೀಚ್‌ನಲ್ಲಿ ತುಳು ಗೊಬ್ಬುಲು ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

Advertisement

ಕಡಲಬ್ಬರ; ವಾಟರ್‌ ಸ್ಪೋರ್ಟ್ಸ್ ಬಂದ್‌
ಸಮುದ್ರದ ಅಲೆಗಳ ಒತ್ತಡ ಬೆಳಗ್ಗಿನಿಂದಲೇ ಹೆಚ್ಚು ಕಂಡುಬಂದಿದ್ದು, ಮಧ್ಯಾಹ್ನದ ಬಳಿಕ ಗಾಳಿಯ ವೇಗಕ್ಕೆ ಅಲೆಗಳು ತೀವ್ರತೆ ಪಡೆದುಕೊಂಡಿದ್ದವು. ಹಾಗಾಗಿ ಮಲ್ಪೆ ಬೀಚ್‌ನಲ್ಲಿ ಅಪರಾಹ್ನ 4ರ ಬಳಿಕ ಯಾವುದೇ ವಾಟರ್‌ ಸ್ಪೋರ್ಟ್ಸ್ ನಡೆಸಲು ಆವಕಾಶ ನೀಡಲಿಲ್ಲ. ಈಚೆಗಷ್ಟೇ ಉದ್ಘಾಟನೆಗೊಂಡಿರುವ ನೂತನ ಅಲೆಗಳಲ್ಲಿ ತೇಲುವ ಸೇತುವೆಯನ್ನು ನೋಡಲು ಮತ್ತು ಅನುಭವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರೂ ಅವಕಾಶ ನೀಡಲಿಲ್ಲ. ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸುರಕ್ಷೆಯ ದೃಷ್ಟಿಯಿಂದ ಪ್ರವಾಸಿಗರು ನೀರಿಗೆ ಇಳಿಯದಂತೆ ಸ್ವಯಂಸೇವಕರು ಕಟ್ಟೆಚ್ಚರ ವಹಿಸಿದ್ದಾರೆ. ಇಲ್ಲಿನ ಜೀವ ರಕ್ಷಕ ತಂಡ ಎಲ್ಲರ ಮೇಲೂ ನಿಗಾ ಇರಿಸಿ, ನೀರಿಗಿಳಿಯಲು ನಿಷೇಧ ಹೇರಿದೆ.

ಮಕ್ಕಳ ಜತೆ ಪ್ರವಾಸಕ್ಕೆ ಕೊನೆಯ ವಾರಾಂತ್ಯ
ಮುಂದಿನ ಸೋಮವಾರ, ಮೇ 16ರಿಂದ ಶಾಲಾ ಕಾಲೇಜುಗಳು ಆರಂಭವಾಗುತ್ತವೆ. ಮಕ್ಕಳ ಜತೆ ಸಂಸಾರ ಸಹಿತ ಪ್ರವಾಸದ ಮಜಾ ಅನುಭವಿಸಲು ಸಿಗುವ ಕೊನೆಯ ವಾರಾಂತ್ಯ ಈ ಶನಿವಾರ-ರವಿವಾರ ಆದ ಕಾರಣ ಈ ಬಾರಿ ಹೆಚ್ಚು ಜನಸಂದಣಿ ಕಂಡುಬಂದಿದೆ. ಇದರ ಜತೆಗೆ ಶುಭಸಮಾರಂಭಗಳು ಕೂಡ ಹೆಚ್ಚಿದ್ದು, ಜನರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಮೂವ‌ರ ರಕ್ಷಣೆ
ಬೀಚ್‌ನ ದಕ್ಷಿಣ ದಿಕ್ಕಿನ ಭಜನ ಮಂದಿರ ಎದುರು ಕೃಷ್ಣಕಟ್ಟೆಯ ಬಳಿ ಸಮುದ್ರದಲ್ಲಿ ಈಜಾಡುತ್ತಿದ್ದ ಮೂವರನ್ನು ಇಲ್ಲಿನ ಜೀವರಕ್ಷಕ ತಂಡವು ರಕ್ಷಿಸಿದೆ. ರವಿವಾರ ಸಂಜೆ ವೇಳೆಗೆ ಸಮುದ್ರದಲೆಗೆ ಕೊಚ್ಚಿ ಹೋಗುತ್ತಿದ್ದ ಈ ಮೂವರನ್ನು ಲೈಫ್ಗಾರ್ಡ್‌ ಜೆಸ್ಕಿ ಮೂಲಕ ರಕ್ಷಿಸಿದೆ. ಮಕ್ಕಳಿಗೆ ರಜೆ ಮುಗಿಯುವ ವರೆಗೆ ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರಲಿದ್ದು, ಜಿಲ್ಲಾಡಳಿತವು ಪ್ರವಾಸಿಗರ ಸುರಕ್ಷೆಯ ದೃಷ್ಟಿಯಿಂದ ತತ್‌ಕ್ಷಣ ಜೆಸ್ಕಿಯನ್ನು ನೀಡುವಂತೆ ಬೀಚ್‌ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ಆಗ್ರಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next