ವಿಜಯಪುರ: ಕೋವಿಡ್ ಎರಡನೇ ಅಲೆಯ ವೇಗಕ್ಕೆ ಕರ್ನಾಟಕ ತತ್ತರಿಸಿದ್ದು, ಸೋಂಕು ಹರಡುವಿಕೆ ತಡೆಗೆ ಸರ್ಕಾರ ವಾರಾಂತ್ಯದ ಕರ್ಫ್ಯೂ ರೂಪದಲ್ಲಿ ಲಾಕ್ ಡೌನ್ ವಿಧಿಸಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ವಿಜಯಪುರ ಜಿಲ್ಲೆಯಲ್ಲೂ ಕರ್ಫ್ಯೂ ಕಾರಣ ಸಂಪೂರ್ಣ ಸ್ತಬ್ಧವಾಗಿದೆ.
ವಿಜಯಪುರ ನಗರ ಸೇರಿದಂತೆ ಮುದ್ದೇಬಿಹಾಳ, ತಾಳಿಕೋಟೆ, ದೇವರಹಿಪ್ಪರಗಿ, ಸಿಂದಗಿ, ಆಲಮೇಲ, ಇಂಡಿ, ಚಡಚಣ, ತಿಕೋಟಾ, ಬಬಲೇಶ್ವರ, ಕೊಲ್ಹಾರ, ನಿಡಗುಂದಿ, ಬಸವನಬಾಗೇವಾಡಿ ತಾಲೂಕ ಕೇಂದ್ರಗಳು, ನಾಲತವಾಡ, ಹೂವಿನಹಿಪ್ಪರಗಿ ಹೀಗೆ ಜಿಲ್ಲೆಯ ಬಹುತೇಕ ಎಲ್ಲ ನಗರ-ಪಟ್ಟಣ ಪ್ರದೇಶಗಳಲ್ಲಿ ಲಾಕಡೌನ್ ಬಿಗಿಯಾಗಿದೆ.
ಜಿಲ್ಲೆಯಲ್ಲಿ ಕರ್ಫ್ಯೂ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪೊಲೀಸರು ಶುಕ್ರವಾರ ಬೆಳಿಗ್ಗೆಯಿಂದಲೇ ಬೀದಿಗಿಳಿದಿದ್ದಾರೆ. ವಾರಾಂತ್ಯದ ಕರ್ಫ್ಯೂ ಮಧ್ಯೆ ಅಗತ್ಯ ವಸ್ತು ಖರೀದಿಗೆ ಶನಿವಾರ, ಭಾನುವಾರ ನಿರ್ಧಿಷ್ಟ ಸಮಯ ನಿಗದಿ ಮಾಡಿದ್ದರೂ, ಅದನ್ನು ಮೀರಿ ಅನಗತ್ಯವಾಗಿ ಮನೆಗಳಿಂದ ಹೊರಬಂದು ರಸ್ತೆಗಳಲ್ಲಿ ಓಡಾಡುವವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಸರ್ಕಾರ ಕೋವಿಡ್ ತಡೆಗಾಗಿಯೇ ಕರ್ಫ್ಯೂ ಹೆಸರಿನಲ್ಲಿ ವಾರಾಂತ್ಯದ ಲಾಕಡೌನ್ ಹೇರಲಾಗಿದೆ. ಈಗಾಗಲೇ ಸುದೀರ್ಘ ಲಾಕಡೌನ್ ಕಹಿ ಅನುಭವ ಹಾಗೂ ಪೊಲೀಸರ ದಂಡನೆಯ ಅರಿವಿದ್ದರೂ ಜನರು ಮಾಸ್ಕ್ ಇಲ್ಲದೇ ಓಡಾಡುವುದು, ವ್ಯಕ್ತಿಗತ ಅಂತರವಿಲ್ಲದೇ ಬೇಜವಾಬ್ದಾರಿ ನಡೆ ಕಂಡು ಬರುತ್ತಿದೆ. ಸರ್ಕಾರ ಏನೇ ನಿಯಮ ತಂದರೂ ಕೋವಿಡ್ ನಿಯಮ ಉಲ್ಲಂಘಿಸಿಯೇ ತೀರುತ್ತೇವೆ ಎಂದು ಹಠಕ್ಕೆ ಬಿದ್ದವರಂತೆ ವರ್ತಿಸುವವರಿಗೆ ಪೊಲೀಸರು ದಂಡ ವಿಧಿಸುವ, ಲಾಠಿ ಬೀಸಿ ರುಚಿ ತೋರಿಸುತ್ತಿದ್ದಾರೆ.
ಜನ ಬಸ್ ಇಲ್ಲದೇ ಕಂಗಾಲಾಗಿದ್ದ ಸಂದರ್ಭದಲ್ಲಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು, ಕರ್ಫ್ಯೂ ರೂಪದ ಲಾಕಡೌನ್ ಜಾರಿ ಸಂದರ್ಭದಲ್ಲಿ ಸಂಚಾರ ಸೇವೆ ನೀಡಲು ಮುಂದಾಗಿದ್ದಾರೆ. ಸಂಚಾರ ಸೇವೆಗಾಗಿ ನಿಲ್ದಾಣಕ್ಕೆ ಬಂದಿರುವ ಬಸ್ ಏರಲು ಪ್ರಯಾಣಿಕರೆ ಇದಲ್ಲದೇ ನಿಲ್ದಾಣಗಳು ಬೇಕೋ ಎನ್ನುತ್ತಿವೆ.