Advertisement

ವೀಕೆಂಡ್‌ ಕರ್ಫ್ಯೂ ವಾಪಸಾತಿ ಉತ್ತಮ ನಿರ್ಧಾರ

11:55 PM Jan 21, 2022 | Team Udayavani |

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೊರೊನಾ ಹೆಚ್ಚಳವಾಗುತ್ತಿರುವ ನಡುವೆಯೇ ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂವನ್ನು ವಾಪಸ್‌ ತೆಗೆದುಕೊಳ್ಳುವುದಾಗಿ ರಾಜ್ಯ ಸರಕಾರ ಘೋಷಿಸಿದೆ. ಹೊಟೇಲ್‌, ರೆಸ್ಟೋರೆಂಟ್‌ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು ಮತ್ತು ಸಾರ್ವಜನಿಕರ ಆಗ್ರಹದ ಮೇರೆಗೆ ಸರಕಾರ ಈ ತೀರ್ಮಾನಕ್ಕೆ ಬಂದಿದೆ.

Advertisement

ಸದ್ಯಕ್ಕೆ ಎದುರಾಗಿರುವ ಬಹುದೊಡ್ಡ ಪ್ರಶ್ನೆ ಎಂದರೆ, ಕೊರೊನಾ ಸಂಖ್ಯೆಗಳು ಕಡಿಮೆ ಇದ್ದಾಗ ವೀಕೆಂಡ್‌ ಕರ್ಫ್ಯೂ ಮಾಡಿ, ಈಗ ಪ್ರಕರಣ ಹೆಚ್ಚುತ್ತಿರುವಾಗ ವಾಪಸ್‌ ತೆಗೆದುಕೊಂಡಿರುವುದು ಏಕೆ ಎಂಬುದು. ಇದಕ್ಕೆ ಸರಕಾರದ ಸಮರ್ಥನೆಯೂ ಇದೆ. ರಾಜ್ಯದಲ್ಲಿ ಒಮಿಕ್ರಾನ್‌ ಕಾಣಿಸಿಕೊಂಡಾಗ ಅಂದರೆ ಎರಡು ವಾರಗಳ ಹಿಂದೆ ಈ ರೂಪಾಂತರಿ ಹೇಗೆ ವರ್ತನೆ ಮಾಡುತ್ತದೆ ಎಂಬುದರ ಅರಿವು ಇರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಬೇಕಾಗಿತ್ತು. ಈಗ ಕೊರೊನಾದ ನಿಜವಾದ ಪ್ರಭಾವ ಗೊತ್ತಾಗುತ್ತಿದೆ. ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳವಾದ‌ರೂ ಆಸ್ಪತ್ರೆಗೆ ಸೇರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ಜನರ ಮತ್ತು ಉದ್ಯಮಿಗಳ ಒತ್ತಾಸೆ ಮೇರೆಗೆ ವೀಕೆಂಡ್‌ ಕರ್ಫ್ಯೂ ವಾಪಸ್‌ ತೆಗೆದುಕೊಳ್ಳಲಾಗಿದೆ ಎಂಬುದು ಸರಕಾರದ ಅಂಬೋಣ.

ಉದ್ಯಮಗಳು ಮತ್ತು ಜನರ ಅಪೇಕ್ಷೆ ಮೇರೆಗೆ ಈ ವೀಕೆಂಡ್‌ ಕರ್ಫ್ಯೂ ವಾಪಸ್‌ ತೆಗೆದುಕೊಂಡಿದ್ದು ಒಳ್ಳೆಯದೇ ಆಗಿದೆ. ಕಳೆದ ಎರಡು ವರ್ಷಗಳಿಂದಲೂ ಕೊರೊನಾದಿಂದಾಗಿ ಜನತೆ ತೀರಾ ಬಸವಳಿದು ಹೋಗಿದೆ. ಜೀವ ಉಳಿಸಿಕೊಳ್ಳುವುದಷ್ಟೇ ಅಲ್ಲ, ಜೀವನವೂ ನಡೆಯಬೇಕಲ್ಲವೇ ಎಂಬುದು ಜನರ ಪ್ರಶ್ನೆಯಾಗಿದೆ. ಅಲ್ಲದೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೊರೊನಾ ಜತೆ ಹೊಂದಿಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ.

ಜನರ ಒತ್ತಾಸೆಯಂತೆ ವೀಕೆಂಡ್‌ ಕರ್ಫ್ಯೂವನ್ನು ವಾಪಸ್‌ ಪಡೆದಿರುವುದೇನೋ ನಿಜ. ಆದರೆ ಜನತೆಯೂ ಎಚ್ಚರಿಕೆಯಿಂದ ಇರಬೇಕಾದ ಅಗತ್ಯ ಇದೆ. ಸರಕಾರವೇ ಹೇಳಿದಂತೆ ಈ ತಿಂಗಳ ಅಂತ್ಯದ ವೇಳೆಗೆ ಕೊರೊನಾ ಪೀಕ್‌ ತಲುಪಲಿದೆ. ಫೆಬ್ರವರಿ ಮೊದಲ ವಾರದಲ್ಲಿ ಕೇಸುಗಳ ಸಂಖ್ಯೆ ಕಡಿಮೆಯಾಗಬಹುದು ಎಂಬ ಮಾತುಗಳಿವೆ. ಹೀಗಾಗಿ ಮುಂದಿನ 15ರಿಂದ 20 ದಿನಗಳು ಜನ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕೊಂಚ ಮೈಮರೆತರೂ ಅಪಾಯ ಮೈಮೇಲೆ ಬಂದಂತೆ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಶುಕ್ರವಾರ ನಡೆದ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಕಂದಾಯ ಸಚಿವ ಆರ್‌.ಅಶೋಕ್‌ ಕೂಡ ಇದೇ ಮಾತನ್ನು ಹೇಳಿದ್ದಾರೆ. ಉದ್ಯಮಗಳಿಗೆ ಮತ್ತು ಜನರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ನಾವು ವೀಕೆಂಡ್‌ ಕರ್ಫ್ಯೂ ವಾಪಸ್‌ ಪಡೆದಿದ್ದೇವೆ. ಹಾಗಂತ ನಾವು ಎಲ್ಲ ನಿರ್ಬಂಧಗಳನ್ನು ವಾಪಸ್‌ ಪಡೆದಿಲ್ಲ. ಜನರು ಕೊರೊನಾ ನಿಯಮಗಳನ್ನು ಪಾಲಿಸಲೇಬೇಕಾಗುತ್ತದೆ.

Advertisement

ಒಂದು ವೇಳೆ ಕೇಸುಗಳು ಹೆಚ್ಚಿ, ಆಸ್ಪತ್ರೆಗೆ ಸೇರುವವರ ಪ್ರಮಾಣ ಏರಿಕೆಯಾದಲ್ಲಿ ಮತ್ತೆ ವೀಕೆಂಡ್‌ ಕರ್ಫ್ಯೂವಿನಂಥ ಕ್ರಮಕ್ಕೆ ಅನಿವಾರ್ಯವಾಗಿ ಹೋಗಬೇಕಾಗುತ್ತದೆ ಎಂದಿದ್ದಾರೆ. ಈ ಎಲ್ಲ ಅಂಶಗಳನ್ನು ತಲೆಯಲ್ಲಿ ಇರಿಸಿಕೊಂಡೇ ಜನರು ಕೊರೊನಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next