Advertisement

ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಪಾದಯಾತ್ರೆ ನಿಲ್ಲಿಸಲು: ಡಿ.ಕೆ.ಶಿವಕುಮಾರ್ ಕಿಡಿ

02:15 PM Jan 22, 2022 | Team Udayavani |

ಬೆಂಗಳೂರು : ವೀಕೆಂಡ್ ಕರ್ಫ್ಯೂ ಹಿಂಪಡೆದ ಬೆನ್ನಲ್ಲೇ ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಿಡಿ ಕಾರಿ ಪ್ರತಿಕ್ರಿಯೆ ನೀಡಿದ್ದು,‘ನಾನು ಈ ಹಿಂದೆಯೇ ಹೇಳಿದ್ದೆ. ಇದು ಬಿಜೆಪಿ ಕರ್ಫ್ಯೂ. ಅವರಿಗೆ ಬೇಕಾದಾಗ ವಿಧಿಸುತ್ತಾರೆ, ಬೇಡವಾದಾಗ ತೆರವುಗೊಳಿಸುತ್ತಾರೆ ಎಂದರು.

Advertisement

ನಾವು ಪಾದಯಾತ್ರೆ ಮಾಡುತ್ತೇವೆ ಎಂಬ ಕಾರಣಕ್ಕೆ ಜನರಿಗೆ ಕೊಡಬಾರದ ಕಷ್ಟ ಕೊಟ್ಟರು. ಇದರಿಂದ ಜನರಿಗೆ ಸಾವಿರಾರು ಕೋಟಿ ರುಪಾಯಿ ನಷ್ಟವಾಗಿದೆ. ಹಣ್ಣು, ತರಕಾರಿ ಬೆಳೆಯುವವರ, ಮಾರುವವರ ಪರಿಸ್ಥಿತಿ ಏನಾಗಿದೆ ಎಂದು ನೀವೇ ನೋಡಿದ್ದೀರಿ. ಕೆಎಸ್ಆರ್ಟಿಸಿ, ಮೆಟ್ರೋದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು, ವಿಮಾನಗಳಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಪ್ರಯಾಣ ಮಾಡಬಹುದು. ಬಡವರು, ಹೊಟೇಲ್ ನವರು, ಚಿತ್ರಮಂದಿರಗಳವರು ಹಾಗೂ ಇತರರು ಶೇ.50 ರಷ್ಟು ಮಾತ್ರ ವ್ಯಾಪಾರ ಮಾಡಬೇಕಂತೆ. ಕುಟುಂಬ ಸದಸ್ಯರು ವಾಹನಗಳಲ್ಲಿ ಸಂಚಾರ ಮಾಡುವಾಗ ಶೇ.50 ರಷ್ಟು ನಿಯಮ ಪಾಲನೆ ಮಾಡಲು ಸಾಧ್ಯವೇ? ಸರ್ಕಾರ ಪ್ರಾಯೋಗಿಕವಾಗಿ ಯೋಚಿಸಬೇಕು. ಈ ಸರ್ಕಾರ ಆ ರೀತಿ ಯೋಚಿಸುತ್ತಿಲ್ಲ ಎಂದು ಕಿಡಿ ಕಾರಿದರು.

ಔಷಧಿ ನೀಡಿ, ಸಹಾಯ ಮಾಡಿ, ಆರೋಗ್ಯ ಕಾಪಾಡಿ ಸರ್ಕಾರ ಜನರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು. ಆದರೆ ಈ ಸರ್ಕಾರ ಅವೈಜ್ಞಾನಿಕವಾಗಿ ನಿಯಮಗಳನ್ನು ಜಾರಿ ಮಾಡುತ್ತಿದೆ. ಸರ್ಕಾರಗಳು ರಾಜ್ಯ ಹಾಗೂ ದೇಶದ ಆರ್ಥಿಕತೆ ನೋಡಬೇಕು. ಆಂಧ್ರ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಇಲ್ಲದ ನಿಯಮ ಇಲ್ಲಿ ಯಾಕೆ?’ ಎಂದು ಪ್ರಶ್ನಿಸಿದರು.

ವಿದ್ಯುತ್ ದರ ಏರಿಕೆಗೆ ಆಕ್ರೋಶ

‘ಜನಸಾಮಾನ್ಯರ ಆದಾಯ ಖಾತರಿ ಮತ್ತು ಹೆಚ್ಚಳಕ್ಕೆ ಸರ್ಕಾರ ಮೊದಲು ಕ್ರಮ ಕೈಗೊಳ್ಳಲಿ. ಅವರಿಗೆ ಆದಾಯ ಬಂದ ಮೇಲೆ ವಿದ್ಯುತ್ ದರ ಏರಿಕೆ ಮಾಡಲಿ. ಹಾಲಿನ ದರ, ವಿದ್ಯುತ್ ದರ ಹೆಚ್ಚಿಸುತ್ತಿದ್ದಾರೆ. ರೈತನಿಗೆ ತೊಂದರೆ ಆದಾಗ ಅವನ ರಕ್ಷಣೆಗೆ ಸರ್ಕಾರ ಯಾಕೆ ನಿಲ್ಲಲಿಲ್ಲ? ಬೆಳೆ ದರ ಏಕೆ ಹೆಚ್ಚಿಸಲಿಲ್ಲ? ಬೆಂಬಲ ಬೆಲೆ ಯಾಕೆ ನೀಡಲಿಲ್ಲ. ಏರಿಕೆಯಾಗಿರುವ ಕಬ್ಬಿಣ, ಸೀಮೆಂಟ್ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಿಲ್ಲ. ಈಗ ವಿದ್ಯುತ್ ದರ ಬಾಕಿ ಕೊಡಬೇಕು ಎನ್ನುತ್ತಿದ್ದಾರೆ. ವಿದ್ಯುತ್ ಕಂಪನಿಗಳ ಪರಿಸ್ಥಿತಿ ಹೇಗಿದೆ ಎಂದು ನಮಗೆ ಗೊತ್ತಿದೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಳ್ಳಬೇಕು.ಎಂದರು.

Advertisement

ತಮಿಳುನಾಡಿನ ಹೊಗೆನಕಲ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿ ‘ಈ ವಿಚಾರವಾಗಿ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸರ್ಕಾರ ಏನೆಲ್ಲಾ ಹೇಳಿಕೆ ನೀಡುತ್ತದೆಯೋ ನೀಡಲಿ. ನಂತರ ಮಾತನಾಡುತ್ತೇನೆ.’ಎಂದರು.

ಕಾಂಗ್ರೆಸ್ ಸದಸ್ಯತ್ವ ನೋಂದಣಿ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ನಾವು ಆನ್ಲೈನ್ ಹಾಗೂ ಆಫ್ಲೈನ್ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಆನ್ಲೈನ್ ಸದಸ್ಯತ್ವ ಅವಕಾಶ ನೀಡಲಾಗಿದೆ. ಮಾರ್ಚ್ ವರೆಗೂ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ನಂತರವೂ ಸದಸ್ಯತ್ವ ನೀಡುತ್ತೇವೆ. ಆದರೆ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಮತದಾನದ ಹಕ್ಕು ಪಡೆಯಬೇಕಾದರೆ ಈ ಅಭಿಯಾನದ ಕಾಲವಧಿಯಲ್ಲಿಯೇ ಸದಸ್ಯತ್ವ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ಬೂತ್ ಗೆ ಇಬ್ಬರು ಕಾರ್ಯಕರ್ತರ ನೇಮಕಕ್ಕೆ ಸೂಚನೆ ನೀಡಲಾಗಿದೆ. ಆನ್ಲೈನ್ ಸದಸ್ಯತ್ವ ಹೇಗೆ ಮಾಡಬೇಕು ಎಂಬುದಕ್ಕೆ ಈಗ ತರಬೇತಿ ನೀಡಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next