Advertisement

ವಾರಾಂತ್ಯ ಕರ್ಫ್ಯೂ: ಕರಾವಳಿಯಲ್ಲಿ ಜನರಿಂದ ಉತ್ತಮ ಸ್ಪಂದನೆ

01:58 AM Jan 09, 2022 | Team Udayavani |

ಮಂಗಳೂರು/ಉಡುಪಿ: ವಾರಾಂತ್ಯ ಕರ್ಫ್ಯೂ ಜಾರಿಯಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಶನಿವಾರ ಜನಜೀವನ ಬಹುತೇಕ ಸ್ತಬ್ಧಗೊಂಡಿತ್ತು.

Advertisement

ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 10ರಿಂದ ಆರಂಭ ಗೊಂಡಿದ್ದು, ಸೋಮವಾರ ಬೆಳಗ್ಗೆ 5ರ ವರೆಗೆ ಇರಲಿದೆ. ಉಭಯ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಬಸ್‌ ಸಹಿತ ಎಲ್ಲ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದರೂ ಸಂಚಾರ ವಿರಳವಾಗಿತ್ತು. ಸಾರ್ವಜನಿಕರ ಓಡಾಟ ಕೂಡ ಕಡಿಮೆ ಇತ್ತು.
ಕೌಟುಂಬಿಕ ಹಾಗೂ ಮದುವೆ ಸೇರಿದಂತೆ ಪೂರ್ವನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕೆಂಬ ನಿಯಮ ಇಲ್ಲದ ಕಾರಣ ಎಲ್ಲೆಲ್ಲಿ ಎಷ್ಟೆಷ್ಟು ಕಾರ್ಯಕ್ರಮಗಳು ನಡೆದವು ಎಂಬ ಮಾಹಿತಿ ಲಭ್ಯವಾಗಿಲ್ಲ.

ಮಂಗಳೂರು ನಗರದಲ್ಲಿ ಬೆಳಗ್ಗೆ 9ರ ತನಕ ಜನರ ಓಡಾಟಕ್ಕೆ ಅವಕಾಶ ನೀಡಲಾಗಿತ್ತು. 10ರ ಬಳಿಕ ಪೊಲೀಸರು ಬ್ಯಾರಿಕೇಡ್‌ ಹಾಕಿ ಅನಾವಶ್ಯಕ ಸಂಚಾರವನ್ನು ತಡೆದು, ಕೆಲವು ವಾಹನ ಮಾಲಕರ ಮೇಲೆ ಕೇಸು ದಾಖಲಿಸಿ ವಾಹನಗಳನ್ನು ವಶಪಡಿಸಿಕೊಂಡರು.

61 ಚೆಕ್‌ಪೋಸ್ಟ್‌ ನಿರ್ಮಾಣ
ಜಿಲ್ಲೆಯಲ್ಲಿ ಒಟ್ಟು 61 ಚೆಕ್‌ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 30, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಕೇರಳ ಗಡಿಯಲ್ಲಿ 9 ಮತ್ತು ದ.ಕ. ಜಿಲ್ಲೆಯಲ್ಲಿ 22 ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿತ್ತು.

ಉಭಯ ಜಿಲ್ಲೆಗಳಲ್ಲಿ ಹೊಟೇಲ್‌, ರೆಸ್ಟೋರೆಂಟ್‌ಗಳು ತೆರೆದಿದ್ದು, ಪಾರ್ಸೆಲ್‌ಗ‌ಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕ ಉದ್ಯಾನವನಗಳು ಮುಚ್ಚಿದ್ದವು. ಎರಡನೇ ಶನಿವಾರ ಆದ ಕಾರಣ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ತೆರೆದಿರಲಿಲ್ಲ.

Advertisement

ಸೀಮಿತ ಬಸ್‌ ಸಂಚಾರ; ಪ್ರಯಾಣಿಕರು ವಿರಳ ಉಭಯ ಜಿಲ್ಲೆಗಳಲ್ಲಿ ಖಾಸಗಿ ಸಿಟಿ ಮತ್ತು ಸರ್ವೀಸ್‌ ಹಾಗೂ ಕೆಎಸ್ಸಾರ್ಟಿಸಿ ಬಸ್‌ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದು, ಸೀಮಿತ ಸಂಖ್ಯೆಯ ಬಸ್‌ಗಳು ಸಂಚರಿಸಿದವು.

ಕುಕ್ಕೆ ಭಕ್ತರ ಸಂಖ್ಯೆ ವಿರಳ
ಸುಬ್ರಹ್ಮಣ್ಯ: ಕಿರು ಷಷ್ಠಿ ದಿನವಾದ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆರಳೆಣಿಕೆಯ ಭಕ್ತರು ಆಗಮಿಸಿ ಹೊರಗಿನಿಂದಲೇ ಕೈ ಮುಗಿದು ತೆರಳಿದರು. ಪೊಲೀಸರು ಅಲ್ಲಲ್ಲಿ ವಾಹನಗಳ ತಪಾಸಣೆ ನಡೆಸಿ ಜನರ ಅನಗತ್ಯ ತಿರುಗಾಟಕ್ಕೆ ಕಡಿವಾಣ ಹಾಕಿದ್ದರು.

ಧರ್ಮಸ್ಥಳ: ತಪಾಸಣೆ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರಿಲ್ಲದೆ ರಸ್ತೆಗಳು, ಕ್ಷೇತ್ರದ ವಠಾರ ಖಾಲಿ ಖಾಲಿಯಾಗಿತ್ತು. ಪೊಲೀಸರು ಸ್ವಾಗತ ಗೋಪುರ ಬಳಿ ತಪಾಸಣೆ ನಡೆಸಿ ಹೊರ ಜಿಲ್ಲೆಗಳಿಂದ ಆಗಮಿಸಿದವರನ್ನು ಹಿಂದಕ್ಕೆ ಕಳುಹಿಸಿದರು.

ಶೇ. 50 ಬಸ್‌ ಓಡಾಟ
ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಶೇ. 50ರಷ್ಟು ಸರಕಾರಿ ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸಿವೆ. ರವಿವಾರ ಕೂಡ ಇದೇ ರೀತಿ ಬಸ್‌ ಸಂಚಾರ ಇರುತ್ತದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣ ಅಧಿಕಾರಿ ಅರುಣ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಕೊರಗಜ್ಜ ದೈವದ ವೇಷ ಧರಿಸಿದ್ದ ಮುಸ್ಲಿಂ ವರನಿಂದ ಕ್ಷಮೆ ಯಾಚನೆ

ಪ್ರಯಾಣಿಕರು ಸಂಕಷ್ಟದಲ್ಲಿ
ಕಾಸರಗೋಡು: ಕೋವಿಡ್‌ ಕಾರಣದಿಂದ ಕರ್ನಾಟಕದಲ್ಲಿ ನಿಯಂತ್ರಣ ಹೇರಿದ ಹಿನ್ನೆಲೆಯಲ್ಲಿ ಅಂತಾರಾಜ್ಯ ಬಸ್‌ಗಳ ಪ್ರಯಾಣಿಕರು ಸಂಕಷ್ಟಕೀಡಾದರು.

ಮಂಗಳೂರು-ಕಾಸರಗೋಡು ರಾ. ಹೆದ್ದಾರಿಯಲ್ಲಿ ಈ ಹಿಂದೆ 33 ಬಸ್‌ಗಳು ಪ್ರಯಾಣಿಸುತ್ತಿತ್ತು. ಆದರೆ ಶನಿವಾರ ಕೇವಲ 8 ಬಸ್‌ಗಳು ಮಾತ್ರವೇ ಸಂಚರಿಸಿವೆ. ಇದರಿಂದ ಪ್ರಯಾಣಿಕರು ಸಂಕಷ್ಟಕೀಡಾದರು. ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಉಡುಪಿ: ಮಾರುಕಟ್ಟೆ, ರಸ್ತೆಗಳು ಖಾಲಿ ಖಾಲಿ
ಉಡುಪಿ: ವಾರಾಂತ್ಯ ಕಪ್ಯೂì ಇದ್ದುದರಿಂದ ಜಿಲ್ಲೆಯ ಪ್ರಮುಖ ಮಾರುಕಟ್ಟೆ, ಬಸ್‌ ನಿಲ್ದಾಣಗಳಲ್ಲಿ ಜನ ದಟ್ಟಣೆ ಇರಲಿಲ್ಲ.

ಧಾರ್ಮಿಕ ಕೇಂದ್ರಗಳಲ್ಲಿಯೂ ಜನ ದಟ್ಟಣೆಗೆ ಅವಕಾಶ ಇರಲಿಲ್ಲ. ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಮಕ್ಕಳು, ಯುವಕರು ಮನೆಯ ಆವರಣ, ಪಕ್ಕದ ಮೈದಾನಗಳಲ್ಲಿ ಕ್ರಿಕೆಟ್‌, ವಾಲಿಬಾಲ್‌ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಯಲ್ಲಿ ತಲ್ಲಿನರಾಗಿದ್ದರು.

ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸದ ಕಾರಣ ಕೆಲವು ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಕಾರ್ಮಿಕರಿಗೆ ಕೆಲವು ಸಂಸ್ಥೆಯವರೇ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರು.

ಪೊಲೀಸರಿಂದ ತಪಾಸಣೆ
ಜಿಲ್ಲಾ, ತಾಲೂಕು ಕೇಂದ್ರ, ಗಡಿಭಾಗದ ಚೆಕ್‌ಪೋಸ್ಟ್‌, ಪಿಕೆಟಿಂಗ್‌ ಪಾಯಿಂಟ್‌ಗಳಲ್ಲಿ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದರು. ಅನಗತ್ಯ ಸಂಚಾರ, ನಿಯಮ ಉಲ್ಲಂಘನೆ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

120ಕ್ಕೂ ಅಧಿಕ ವಾಹನ ವಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾವಶ್ಯಕವಾಗಿ ಸಂಚರಿಸಿದ ಆರೋಪದ ಮೇಲೆ 120ಕ್ಕೂ ಅಧಿಕ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸರು 110ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿದ್ದು, ದಂಡ ಶುಲ್ಕ ಪಾವತಿಸಿದ ಬಳಿಕ ಬಿಡುಗಡೆ ಮಾಡಿದರು. ಒಟ್ಟು 517 ಪ್ರಕರಣಗಳಲ್ಲಿ 369 ಮಾಸ್ಕ್ ನಿಯಮ ಉಲ್ಲಂಘನೆಯವು. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 10 ವಾಹನ ವಶ ಹಾಗೂ ಮಾಸ್ಕ್ ಧಾರಣೆ ಮಾಡದ ಬಗ್ಗೆ 108 ಕೇಸು ದಾಖಲಿಸಲಾಗಿದೆ.

ಮಂಗಳೂರು ನಗರದಲ್ಲಿ ನಿಯಮ ಉಲ್ಲಂಘಿಸಿದ ಅಂಗಡಿ, ವ್ಯಾಪಾರ ಮಳಿಗೆಗಳ ವಿರುದ್ಧ ಒಟ್ಟು 43 ಕೇಸು ದಾಖಲಿಸಿ 12,000 ರೂ. ದಂಡ ವಸೂಲಿ ಮಾಡಲಾಗಿದೆ. 2 ಅಂಗಡಿಗಳ ಟ್ರೇಡ್‌ ಲೈಸನ್ಸ್‌ ರದ್ದು ಪಡಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾಹಿತಿ ನೀಡಿದ್ದಾರೆ. ಉಡುಪಿಯಲ್ಲಿ ಮಾಸ್ಕ್ ಧರಿಸದ್ದಕ್ಕೆ ಸಂಬಂಧಿಸಿ 38 ಪ್ರಕರಣಗಳು ದಾಖಲಾಗಿದ್ದು, 3,800 ರೂ.ದಂಡ ಸಂಗ್ರಹಿಸಲಾಗಿದೆ.

ಅಧಿಕಾರಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಕರ್ತವ್ಯ ನಿರತರಾಗಿದ್ದು, ವಾಹನ ಸಂಚಾರ ನಿಯಂತ್ರಣ ಮಾಡಿದ್ದಾರೆ. ಅನಗತ್ಯ ಅಂಗಡಿಗಳನ್ನು ಮುಚ್ಚಿಸಲಾಗಿದೆ. ನಗರದ ಜನರ ಪೈಕಿ ಶೇ. 99ರಷ್ಟು ಮಂದಿ ಸಹಕಾರ ನೀಡಿದ್ದಾರೆ.
– ಹರಿರಾಂ ಶಂಕರ್‌, ಡಿಸಿಪಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next