Advertisement

ವೀಕೆಂಡ್‌ ಕರ್ಫ್ಯೂದಿಂದ ಸಮಸ್ಯೆ : ಆಟೋ- ಟ್ಯಾಕ್ಸಿ ಚಾಲಕರ ಅಳಲು

04:56 PM Jan 17, 2022 | Team Udayavani |

ಚಿಕ್ಕಮಗಳೂರು: “ವೀಕೆಂಡ್‌ನ‌ಲ್ಲಿ ಹೆಚ್ಚಿನ ಬಾಡಿಗೆಯಾಗುತ್ತದೆ. ಆದರೆ ವೀಕೆಂಡ್‌ ಕರ್ಫ್ಯೂದಲ್ಲಿ ಪ್ರವಾಸಿಗರು ಇಲ್ಲದಿರುವುದರಿಂದ ಬಾಡಿಗೆ ಆಗುತ್ತಿಲ್ಲ. ಸಂಜೆವರೆಗೂ ಕಾದು ಕುಳಿತರೂ ಬಾಡಿಗೆ ಸಿಗದೆ ಖಾಲಿ ಕೈಯಲ್ಲಿ ಮನೆಗೆ ಹೋಗಬೇಕು… ಇದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಅಳಲು. ವೀಕೆಂಡ್‌ ಕರ್ಫ್ಯೂದಿಂದ ಅನೇಕ ವರ್ಗದ ಜನರು ನಾನಾ ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ.

Advertisement

ಆಟೋ, ಟ್ಯಾಕ್ಸಿಗಳನ್ನು ನಂಬಿಕೊಂಡು ದೈನಂದಿನ ಜೀವನ ಸಾಗಿಸುವವರು ಬಾಡಿಗೆ ಇಲ್ಲದೇ, ಜೀವನ ನಿರ್ವಹಣೆ ಕಷ್ಟವಾಗುತ್ತಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿದೆ. ಮತ್ತೂಂದೆಡೆ ಸರ್ಕಾರ ವೀಕೆಂಡ್‌ ಕರ್ಫ್ಯೂ ವಿ ಧಿಸಿದ್ದು, ಬಡವರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳ
ದುಡಿಮೆಗೆ ಪೆಟ್ಟು ಬಿದ್ದಿದ್ದು, ಜೀವನ ನಿರ್ವಹಣೆಗೆ ತೀವ್ರ ತೊಂದರೆಯಾಗುತ್ತಿದೆ.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಕರ್ಫ್ಯೂ, ಲಾಕ್‌ಡೌನ್‌ ವಿ ಧಿಸಿತ್ತು. ದೈನಂದಿನ ದುಡಿಮೆ ಇಲ್ಲದೆ ಅನೇಕರು ಬಹಳಷ್ಟು ಕಷ್ಟ ಅನುಭವಿಸಿದ್ದರೂ
ಲಕ್ಷಾಂತರ ರೂ. ಬಂಡವಾಳ ಸುರಿದು ವಹಿವಾಟು ನಡೆಸುವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ರೈತರು ತಾವು ಬೆಳೆದ ಬೆಳೆಯನ್ನು ಸಕಾಲಕ್ಕೆ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದರು. ಹೀಗೆ ಪ್ರತಿಯೊಂದು ಕ್ಷೇತ್ರವೂ ಸಂಕಷ್ಟಕ್ಕೆ ಸಲುಕಿತ್ತು.

ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ಕ್ಷೀಣಿಸಿ ಹಳಿ ತಪ್ಪಿದ ಜನರ ದೈನಂದಿನ ಬದುಕು ಸರಿದಾರಿಗೆ ಬರುತ್ತಿರುವಷ್ಟರಲ್ಲಿ ಮೂರನೇ ಅಲೆ ಆರ್ಭಟಿಸುತ್ತಿದ್ದು, ಜಿಲ್ಲೆಯ ಜನರ ಆಂತಕಕ್ಕೆ
ಕಾರಣವಾಗಿದೆ. ಪ್ರತೀ ನಿತ್ಯ ಸೋಂಕು 200ರ ಗಡಿಗೆ ಸಮೀಪಿಸುತ್ತಿದ್ದು ಮತ್ತೆ ಜನರ ನೆಮ್ಮದಿ ಕೆಡಿಸುತ್ತಿದೆ.

Advertisement

ಸದ್ಯ ಕೋವಿಡ್‌ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿದೆ. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆ ಗೂ ಅಗತ್ಯ
ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ವಿ ಧಿಸಲಾಗಿದೆ. ಹಾಗೇ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ವೀಕೆಂಡ್‌ ಕರ್ಫ್ಯೂದಿಂದ ಆಟೋ, ಟ್ಯಾಕ್ಸಿ
ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಭಾರೀ ನಷ್ಟವಾಗುತ್ತಿದೆ. ವಾರದ ಇತರೆ ದಿನಗಳಿಗಿಂತ ವೀಕೆಂಡ್‌ ಸಂದರ್ಭದಲ್ಲಿ ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಹೆಚ್ಚಿನ ಸಂಪಾದನೆಯಾಗುತ್ತದೆ. ವೀಕೆಂಡ್‌ ಕರ್ಫ್ಯೂದಿಂದ ಇವರ ಸಂಪಾದನೆಗೆ ಬ್ರೇಕ್‌ ಬಿದ್ದಿದ್ದು, ಜೀವನ ನಿರ್ವಹಣೆಯೂ ಕಷ್ಟವಾಗುತ್ತಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ವಾಹನಗಳನ್ನು ಖರೀದಿಸಿ ಬಾಡಿಗೆ ಓಡಿಸಿ ಜೀವನ ಸಾಗಿಸುತ್ತಿದ್ದೇವೆ.

ಬೇರೆ ದಿನಗಳಿಗಿಂತ ವೀಕೆಂಡ್‌ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಉತ್ತಮ ಸಂಪಾದನೆಯಾಗುತ್ತದೆ. ಆದರೆ, ಎರಡು ವಾರಗಳಿಂದ ವೀಕೆಂಡ್‌ ಕರ್ಫ್ಯೂ ಜಾರಿ
ಮಾಡಿರುವುದರಿಂದ ಬೆಳಗ್ಗೆಯಿಂದ ಸಂಜೆವರೆಗೂ ಕಾದು ಕುಳಿತರೂ ಪ್ರಯಾಣಿಕರು ಬರುತ್ತಿಲ್ಲ. ದುಡಿಮೆಯೂ ಆಗುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಆಟೋ ಚಾಲಕ ರಮೇಶ್‌ ತಮ್ಮ ಅಳಲು ತೊಂಡಿಕೊಂಡರು. ವೀಕೆಂಡ್‌ ಕರ್ಫ್ಯೂ, ಕೋವಿಡ್‌ನಿಂತ ದುಡಿಮೆ ಇಲ್ಲದೆ ಸಾಲದ ಕಂತು, ಮನೆ ಬಾಡಿಗೆ, ಕುಟುಂಬ ನಿರ್ವಹಣೆ ಮಾಡಲಾಗದೆ ಪರದಾಡುವಂತಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರ ನೆರವಿಗೆ ಬರಬೇಕು ಎಂದು ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ಬೀದಿಬದಿ ವ್ಯಾಪಾರಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next