ಕೊಪ್ಪಳ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರಗೌಡ ಮಾಲಿಪಾಟೀಲ್ ಅವರ 63ನೇ ಜನ್ಮದಿನದ ಅಂಗವಾಗಿ ಜೂ. 1 ಮಂಗಳವಾರ ಹಮ್ಮಿಕೊಂಡ ವೆಬಿನಾರ್ ಹಲವು ವಿಶೇಷತೆಗೆ ಸಾಕ್ಷಿಯಾಯಿತು.
ಈ ವೆಬಿನಾರ್‌ನ್ನು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಮಾಜಿ ಅಧ್ಯಕ್ಷ ಪ್ರೊ| ಎಸ್.ಜಿ. ಸಿದ್ಧರಾಮಯ್ಯ ಅವರು ಉದ್ಘಾಟಿಸಿದರು. ಕವಿ ಎಲ್. ಹನುಮಂತಯ್ಯ ಅಧ್ಯಕ್ಷತೆ ವಹಿಸಿ, ಕನ್ನಡ ನಾಡು-ನುಡಿ ಎದುರಿಸಿರುವ ಹಾಗೂ ಎದುರಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ತನ್ನೆಲ್ಲಾ ಸವಾಲುಗಳನ್ನು ಹೇಗೆ ಎದುರಿಸಿ ನಿಂತಿದೆಯೋ, ಅದೇ ರೀತಿ ಕೊರೊನಾ ಸಂಕಷ್ಟವನ್ನೂ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಸಮಾರಂಭದ ಕೇಂದ್ರ ಬಿಂದು ಶೇಖರಗೌಡ ಮಾಲಿಪಾಟೀಲ್ ಮಾತನಾಡಿ, ಎಲ್ಲರೂ ಮನೆಯಲ್ಲಿ ಬಂಧಿಯಾಗಿರುವ ಈ ವೇಳೆ ವೆಬಿನಾರ್ ಮೂಲಕ ಪರಸ್ಪರ ನೋಡುವ, ಮಾತಾಡುವ ಅವಕಾಶ ತಂತ್ರಜ್ಞಾನದ ಕೃಪೆಯಿಂದ ಸಾಧ್ಯವಾಗಿದೆ. ಸೋಂಕನ್ನು ಗೆಲ್ಲಲೂ ಇಂತಹ ಸಾಧ್ಯತೆಗಳು ಸಿಗುವ ವಿಶ್ವಾಸವಿದೆ. ಯಾರೂ ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು. ಕೊಪ್ಪಳ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿದರು.
ಖ್ಯಾತ ಹಾಸ್ಯ ಕಲಾವಿದ ಬಿ. ಪ್ರಾಣೇಶ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಬದುಕು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗದಗ ಶ್ರೀ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಮೃತರಾದವರ ಸ್ಮರಣಾರ್ಥ ಮೌನಾಚರಣೆ ನಡೆಸಲಾಯಿತು. ಸಾಹಿತಿ-ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಸ್ವಾಗತಿಸಿದರು. ಚಾಮರಾಜ ಸವಡಿ ನಿರೂಪಿಸಿದರು. ರಾಜಶೇಖರ ಅಂಗಡಿ ವಂದಿಸಿದರು. ಹಿರಿಯ ತಂತ್ರಜ್ಞ ಉದಯಶಂಕರ ಪುರಾಣಿಕ್, ಬಿ.ಎನ್. ಪರಡ್ಡಿ, ಟಿ. ತಿಮ್ಮೇಶ, ಡಾ| ಹಾ.ಮ. ನಾಗಾರ್ಜುನ, ಭಾರತಿ ಪ್ರಕಾಶ ಅವರು ವಿಶೇಷ ಆಹ್ವಾನಿತರಾಗಿದ್ದರು. ಸಹಕಾರ, ಶಿಕ್ಷಣ, ಆರೋಗ್ಯ, ಸಾಹಿತ್ಯ ಮುಂತಾದ ಕ್ಷೇತ್ರಗಳ ಸಾಧಕರು ಸೇರಿದಂತೆ ಸಾಹಿತ್ಯ ಆಸಕ್ತರು ಆನ್ ಲೈನ್ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.