Advertisement

ಹಿಂದೆ ಕುಳಿತಾಗಲೂ ಸೀಟ್‌ ಬೆಲ್ಟ್  ಧರಿಸಿ! ಸೈರಸ್‌ ಮಿಸ್ತ್ರಿ ಸಾವು ನಿರೂಪಿಸಿದ ಅನಿವಾರ್ಯ

11:32 PM Sep 05, 2022 | Team Udayavani |

ಮಣಿಪಾಲ: ಉದ್ಯಮ ದೈತ್ಯ, ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿಯ ದಾರುಣ ಅಂತ್ಯ ದೇಶದ ಔದ್ಯಮಿಕ ವಲಯದಲ್ಲಿ ತಲ್ಲಣ ಮೂಡಿಸಿದೆ.

Advertisement

ಸುರಕ್ಷಿತ ವಾಹನಗಳಲ್ಲಿ ಒಂದೆನಿಸಿದ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ, ಅದೂ ಹಿಂದಿನ ಆಸನದಲ್ಲಿ ಕುಳಿತಿದ್ದ ಸೈರಸ್‌ ಮಿಸ್ತ್ರಿ ಮತ್ತು ಅವರ ಗೆಳೆಯ ಜಹಾಂಗೀರ್‌ ಪಂಡೋಲೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮುಂದಿನ ಆಸನಗಳಲ್ಲಿದ್ದ ಅನಾಹಿತಾ ಪಂಡೋಲೆ ಮತ್ತು ಡೇರಿಯಸ್‌ ಪಂಡೋಲೆ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಿಸ್ತ್ರಿ ಮತ್ತು ಜಹಾಂಗೀರ್‌ ಸಾವಿಗೆ ಅವರು ಸೀಟ್‌ ಬೆಲ್ಟ್ ಧರಿಸದೆ ಇದ್ದುದೇ ಕಾರಣ ಎಂಬುದು ಪೊಲೀಸ್‌ ತನಿಖೆಯಿಂದ ಬಹಿರಂಗವಾಗಿರುವ ಅಂಶ.

ವಾಹನಗಳಲ್ಲಿ ಚಾಲಕ ಮತ್ತು ಅದರ ಬದಿಯ ಅಂದರೆ ಮುಂದಿನ ಆಸನಗಳಲ್ಲಿ ಕುಳಿತಿರುವವರು ಮಾತ್ರ ಸೀಟ್‌ ಬೆಲ್ಟ್ ಹಾಕಿದ್ದರೆ ಸಾಕು ಎಂಬ ತಪ್ಪು ಅಭಿಪ್ರಾಯ ಎಲ್ಲೆಡೆ ಚಾಲ್ತಿಯಲ್ಲಿದೆ. ಸೈರಸ್‌ ಮಿಸ್ತ್ರಿ ಸಾವು ಎಲ್ಲರೂ ಸೀಟ್‌ ಬೆಲ್ಟ್ ಧರಿಸಿಕೊಳ್ಳುವುದು ಅನಿವಾರ್ಯ ಎಂಬುದನ್ನು ಒತ್ತಿ ಹೇಳುತ್ತಿದೆ.

ಹಿಂದೆ ಕುಳಿತರೂ ಸೀಟ್‌ ಬೆಲ್ಟ್ ಯಾಕೆ ಮುಖ್ಯ?
-ಅಪಘಾತ ನಡೆದ ಸಂದರ್ಭದಲ್ಲಿ ಸೀಟ್‌ ಬೆಲ್ಟ್ ದೇಹವನ್ನು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುತ್ತದೆ.

-ಅವಘಡ ಸಂಭವಿಸಿದಾಗ ತಲೆ, ಕುತ್ತಿಗೆ, ಎದೆ ಕ್ಷಣಾರ್ಧದಲ್ಲಿ ಮುಂದಕ್ಕೆ
ರಭಸವಾಗಿ ಅಪ್ಪಳಿಸುವ ಪರಿಣಾಮದಿಂದ ತಲೆ, ಎದೆಗೆ ಏರ್‌ಬ್ಯಾಗ್‌ಗಳು ರಕ್ಷಣೆ ಒದಗಿಸುತ್ತವೆ.

Advertisement

-ಏರ್‌ಬ್ಯಾಗ್‌ಗಳು ತೆರೆದುಕೊಳ್ಳುವುದು ಸಣ್ಣ ಸ್ಫೋಟಕ ಸಿಡಿದಾಗ ಉತ್ಪತ್ತಿಯಾಗುವ ಶಕ್ತಿಗೆ ಸಮನಾದ ಅತ್ಯುಚ್ಚ ವೇಗದಲ್ಲಿ. ಕೆಲವೇ ಕ್ಷಣಗಳಲ್ಲಿ ವಾಹನ ಅಪ್ಪಳಿಸಿದಂತಹ ಸನ್ನಿವೇಶದಲ್ಲಿ ವ್ಯಕ್ತಿಯನ್ನು ವಿಂಡ್‌ಸ್ಕ್ರೀನ್‌, ಸ್ಟಿಯರಿಂಗ್‌ ವೀಲ್‌ಗ‌ಳಿಂದ ರಕ್ಷಿಸುವಂತೆ ಏರ್‌ಬ್ಯಾಗ್‌ಗಳು ವಿನ್ಯಾಸಗೊಂಡಿರುತ್ತವೆ.

-ಏರ್‌ಬ್ಯಾಗ್‌ಗಳ ಕಾರ್ಯಾಚರಣೆ ವ್ಯವಸ್ಥೆ ಪೂರ್ಣಗೊಳ್ಳುವುದು ಸೀಟ್‌ಬೆಲ್ಟ್‌ಗಳ ಮೂಲಕ. ಅವಘಡ ಉಂಟಾದಾಗ ಏರ್‌ಬ್ಯಾಗ್‌ ತೆರೆದುಕೊಂಡು ವ್ಯಕ್ತಿಗೆ ರಕ್ಷಣೆ ಸಿಗಬೇಕಿದ್ದರೆ ಸೀಟ್‌ಬೆಲ್ಟ್ ಧರಿಸಿರಲೇ ಬೇಕು. ಬಿಗಿದುಕೊಂಡಿರುವ ಸೀಟ್‌ಬೆಲ್ಟ್ ವ್ಯಕ್ತಿ ವಾಹನದಿಂದ ಹೊರಕ್ಕೆ ಎಸೆಯಲ್ಪಡದಂತೆ ರಕ್ಷಿಸುತ್ತದೆ.

-ಕಾರು ಮೆಕ್ಯಾನಿಸಂ ಪ್ರಕಾರ ಸೀಟ್‌ಬೆಲ್ಟ್ ಧರಿಸಿದ್ದರೆ ಮಾತ್ರ ಏರ್‌ಬ್ಯಾಗ್‌ ತೆರೆದುಕೊಳ್ಳುತ್ತದೆ. ಅವಘಡ ಸಂಭವಿಸಿದಾಗ ಏರ್‌ಬ್ಯಾಗ್‌ಗಳು ಉಬ್ಬಿಕೊಳ್ಳುವುದು ಪೈರೊಟೆಕ್ನಿಕಲ್‌ ಚಾರ್ಜ್‌ ಮೂಲಕ. ಸೀಟ್‌ಬೆಲ್ಟ್ ಧರಿಸಿದ್ದರಷ್ಟೇ ಈ ವ್ಯವಸ್ಥೆ ಸಂಪೂರ್ಣವಾಗುತ್ತದೆ.

-ಹೀಗಾಗಿ ಮುಂದಿನ ಆಸನಗಳಲ್ಲಿ ಕುಳಿತಿರುವವರು ಮಾತ್ರ ಸೀಟ್‌ ಬೆಲ್ಟ್ ಧರಿಸಿರಬೇಕು ಎನ್ನುವುದು ತಪ್ಪು ಕಲ್ಪನೆ. ಕಾರಿನಲ್ಲಿ ಕುಳಿತಿರುವ ಎಲ್ಲರೂ ಸೀಟ್‌ ಬೆಲ್ಟ್ ಧರಿಸಲೇ ಬೇಕು.

ಎಲ್ಲ ಆಸನಗಳಿಗೂ ಏರ್‌ಬ್ಯಾಗ್‌
ರವಿವಾರ ಸೈರಸ್‌ ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿ ಹಿಂದಿನ ಆಸನಗಳಿಗೆ ಏರ್‌ಬ್ಯಾಗ್‌ ಇರಲಿಲ್ಲ ಎನ್ನಲಾಗುತ್ತಿದೆ. ಸ್ವಲ್ಪ ಸಮಯದ ಹಿಂದೆ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಎಲ್ಲ ಆಸನಗಳಿಗೂ ಏರ್‌ ಬ್ಯಾಗ್‌ ಕಡ್ಡಾಯಗೊಳಿಸುವ ಮಾತ ನಾಡಿದ್ದರು. ಈಗ ಕೆಲವು ಕಾರುಗಳ ಹಿಂದಿನ ಆಸನಗಳಲ್ಲಿ ಏರ್‌ ಬ್ಯಾಗ್‌ ಇದ್ದರೆ, ಇನ್ನು ಕೆಲವಕ್ಕೆ ಇಲ್ಲ. ಇದಕ್ಕೆ ಏಕರೂಪತೆ ತಂದು ಎಲ್ಲ ಆಸನಗಳಿಗೂ ಏರ್‌ಬ್ಯಾಗ್‌ ಕಡ್ಡಾಯಗೊಳಿಸಬೇಕಿದೆ.

2021 ಭಾರತದಲ್ಲಿ ರಸ್ತೆ ಅವಘಡಗಳು
4.03 ಲಕ್ಷ ರಸ್ತೆ ಅಪಘಾತಗಳು,
1.55 ಲಕ್ಷ ಮಂದಿಯ ಮೃತ್ಯು,
3.71 ಗಾಯಾಳುಗಳು

Advertisement

Udayavani is now on Telegram. Click here to join our channel and stay updated with the latest news.

Next