ಬೆಳಗಾವಿ: ವಕ್ಫ್ ಆಸ್ತಿ ಹೆಸರಿನಲ್ಲಿ ದೇವಸ್ಥಾನಗಳು ಮತ್ತು ರೈತರ ಜಮೀನು ಇದ್ದರೆ, ಅದನ್ನು ಮುಟ್ಟುವುದಿಲ್ಲ ಎಂದು ವಸತಿ ಮತ್ತು ಅಲ್ಪ ಸಂಖ್ಯಾ ಕರ ಕಲ್ಯಾಣ, ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಗುರುವಾರ ವಕ್ಫ್ ವಿಚಾರವಾಗಿ ನಿಯಮ 68ರ ಅಡಿ ನಡೆದ ಚರ್ಚೆ ಉತ್ತರಿಸಿದ ಅವರು, ರೈತರು ಅನ್ನದಾತರಾಗಿದ್ದು ಅಂತಹ ಆಸ್ತಿಗಳನ್ನು ಮತ್ತು ದೇವಸ್ಥಾನಗಳನ್ನು ಮುಟ್ಟುವುದಿಲ್ಲ ಎಂದರು. ರಾಜ್ಯವ್ಯಾಪಿ ಸುಮಾರು 17 ಸಾವಿರ ಆಸ್ತಿಗಳನ್ನು ಖಾಸಗಿಯವರು ಒತ್ತುವರಿ ಮಾಡಿದ್ದು ಆ ಆಸ್ತಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ವಕ್ಫ್ ಬೋರ್ಡ್ ಹೆಸರಿ ನಲ್ಲಿ 1.28 ಲಕ್ಷ ಆಸ್ತಿ ದಾನವಾಗಿ ಬಂದಿತ್ತು. ಇದು ಸರಕಾರದ ಆಸ್ತಿಯಲ್ಲ, ದಾನಿಗಳು ನೀಡಿದ ಆಸ್ತಿ. 47 ಸಾವಿರ ಎಕರೆ ಭೂ ಸುಧಾರಣೆ ವ್ಯಾಪ್ತಿಗೆ ಹೋಗಿದೆ. ಕೆಲವರು ಖಾಸಗಿ ಆಸ್ತಿಯನ್ನು ಒತ್ತುವರಿ ಮಾಡಿದ್ದು, ಅದನ್ನು ಸಂರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜನರಲ್ಲಿ ಗೊಂದಲಗಳನ್ನು ಮೂಡಿಸುವುದು ಬೇಡ. ತಪ್ಪಾಗಿ ನಮೂದಾಗಿದ್ದರೆ ಆ ಬಗ್ಗೆ ದಾಖಲೆ ನೀಡಿ. ತಪ್ಪಾಗಿದ್ದರೆ ಸರಿಪಡಿಸಿಕೊಳ್ಳುವುದಾಗಿ ತಿಳಿಸಿದರು.
ಈ ವಿಚಾರದಲ್ಲಿ ವಿಪಕ್ಷಗಳು ಜನರಿಗೆ ತಪ್ಪು ಸಂದೇಶ ನೀಡುತ್ತಿವೆ. 21 ಸಾವಿರ ಎಕರೆ ವಕ್ಫ್ ಒತ್ತುವರಿ ಮಾಡಿದೆ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್‌ಗಿಂತಲೂ ಬಿಜೆಪಿ ಆಡಳಿತದ ಅವಧಿಯಲ್ಲಿ ವಕ್ಫ್ ವಿಚಾರದಲ್ಲಿ ಜನರಿಗೆ ನೋಟಿಸ್ ಹೋಗಿದೆ. ಆ ಬಗ್ಗೆ ಬಿಜೆಪಿಯವರು ಸಮಂಜ ಸ ಉತ್ತರ ನೀಡಲಿ ಎಂದರು.
ಬರೀ ವಕ್ಫ್ ಬೋರ್ಡ್ ಆಸ್ತಿ ಅಷ್ಟೇ ಅಲ್ಲ, ಮುಜರಾಯಿ ಇಲಾಖೆ ಆಸ್ತಿಗಳು ಕೂಡ ಒತ್ತುವರಿಯಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.