Advertisement

130 ಸ್ಥಾನ ಗೆಲ್ಲುತ್ತೇವೆ, 150 ಆದರೂ ಆಗಬಹುದು : ಸಿದ್ದರಾಮಯ್ಯ ಲೆಕ್ಕಾಚಾರ

03:45 PM Jan 21, 2023 | Team Udayavani |

ಮೈಸೂರು : ಮುಂದಿನ ಚುನಾವಣೆಯಲ್ಲಿ ನಾವು 130 ಸ್ಥಾನ ಗೆಲ್ಲುತ್ತೇವೆ, ಅದು 150 ಆದರೂ ಆಗಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ರಾಜ್ಯದ ಜನ ಕಾಂಗ್ರೆಸ್ ಅಧಿಕಾರದಲ್ಲಿ ಆಗಿದ್ದ ಕೆಲಸಗಳ ಬಗ್ಗೆ ತಿಳಿದುಕೊಂಡಿದ್ದಾರೆ. ನಾವು ಹಿಂದೆ ಪ್ರಣಾಳಿಕೆಯಲ್ಲಿ ಹೇಳಿದ್ದ ಶೇಕಡ 99 ರಷ್ಟು ಕೆಲಸ ಮಾಡಿದ್ದೇವೆ. ಈಗಲೂ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬ ಮುಖ್ಯಸ್ಥೆಗೆ ತಿಂಗಳು 2 ಸಾವಿರ ಹಣ ನೀಡುವುದಾಗಿ ಘೋಷಣೆ ಮಾಡಿದ್ದೇವೆ. ಇನ್ನೂ ಹಲವು ಘೋಷಣೆ ಮಾಡಲಿದ್ದೇವೆ. ಇವುಗಳು ಚುನಾವಣೆಯಲ್ಲಿ ನಮ್ಮ ಕೈ ಹಿಡಿಯುತ್ತವೆ. ಯಾರು ಏನೇ ಹೇಳಿದರೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಸತ್ಯ ಎಂದರು.

ಸ್ಯಾಂಟ್ರೋ ರವಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ. ಸ್ಯಾಂಟ್ರೋ ರವಿ ಒಬ್ಬ ಪಿಂಪ್,ವೇಶ್ಯಾವಾಟಿಕೆ, ವರ್ಗಾವಣೆ ದಂಧೆ, ಪೋಕ್ಸೋ ಪ್ರಕರಣದ ಆರೋಪಿ.ಆತ ಹೊರಗೆ ಬಂದರೆ ಹಲವರ ಬಂಡವಾಳ‌ ಹೊರಗೆ ಬರುತ್ತದೆ. ಆ ಕಾರಣದಿಂದ ಮುಚ್ಚಿ‌ಹಾಕುವ ಯತ್ನ ನಡೆದಿದೆ. ಸಿಐಡಿಗೆ ಪ್ರಕರಣವನ್ನು ವಹಿಸಿದ್ದು ಏಕೆ? ಆತನನ್ನು ಆರಂಭದಲ್ಲಿ ವಶಕ್ಕೆ ಪಡೆಯದೆ ಇರುವುದು ಏಕೆ? ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು ಏಕೆ? ಸಿಐಡಿ ಕೂಡ ರಾಜ್ಯ ಪೊಲೀಸ್ ಒಂದು‌ ಘಟಕ. ಇದೆಲ್ಲದರ ಹಿಂದೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಕೋಲಾರದಲ್ಲಿ ಯಾರೇ ಬಂದರೂ ಏನೇ ಮಾಡಿದರೂ ನಾನು ಗೆಲ್ಲುತ್ತೇನೆ. ಬದಾಮಿಯಲ್ಲೂ ನನ್ನನ್ನು ಸೋಲಿಸಲು ಅಮಿತ್ ಶಾ ಬಂದಿದ್ದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀ ರಾಮುಲು ನಿಲ್ಲಿಸಿದರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ನಾನು ಅಲ್ಲಿ ಪ್ರಚಾರಕ್ಕೆ ಹೋಗಿದ್ದು ಎರಡೇ ದಿನ. ನಾನು ಬದಾಮಿ ಕ್ಷೇತ್ರ ಬದಲಾಯಿಸಿದ್ದು ದೂರ ಅನ್ನೋ ಕಾರಣಕ್ಕೆ. ನಾನು ಅಲ್ಲಿ ನಿಂತರೆ ಸೋಲುತ್ತೇನೆ ಅಂತ ಅಲ್ಲ.
ಬಾದಾಮಿ ಜನ ಹೆಲಿಕ್ಯಾಪ್ಟರ್ ಕೊಡಿಸುತ್ತೇವೆ ಅಂದರು,ನಾನೇ ಬೇಡ ಎಂದು ಕೋಲಾರದಿಂದ ಸ್ಪರ್ಧೆ ಮಾಡಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರ ಹತ್ತಿರವಾಗುತ್ತದೆ ಎಂದು ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡಿದರು.

ರಾಜ್ಯ ಸರ್ಕಾರಕ್ಕೆ ಪ್ರಧಾನಿ ಮೋದಿ ಸರ್ಟಿಫಿಕೇಟ್ ಅನಗತ್ಯ. ರಾಜ್ಯದಲ್ಲಿ ಪಿಎಸ್‌ಐ ಹಗರಣ ನಡೆದಿರುವುದು ಸುಳ್ಳಾ? ಎಡಿಜಿಪಿ ಜೈಲು ಸೇರಿರುವುದು ಸುಳ್ಳಾ ? ಏನು ಆಗಿಲ್ಲ ಅಂದರೆ ಆತ ಇನ್ನೂ ಏಕೆ ಜೈಲಿನಲ್ಲಿದ್ದಾನೆ?  ರಾಜ್ಯಕ್ಕೆ ಪದೇ ಪದೇ ಬಿಜೆಪಿ ಕೇಂದ್ರ ನಾಯಕರ ಭೇಟಿ ಯಾರು ಬಂದರೂ ಏನು ಪ್ರಯೋಜನ ಇಲ್ಲ. ನಡ್ಡಾಗೂ ರಾಜ್ಯಕ್ಕೂ ಏನು ಸಂಬಂಧ? ಅವರು ಏಕೆ ರಾಜ್ಯಕ್ಕೆ ಬರುತ್ತಿದ್ದಾರೆ ? ಎಂದು ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆ ಗೈದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next