Advertisement

ಮಲೆನಾಡನ್ನು ಭಯೋತ್ಪಾದಕರ ಅಡ್ಡೆಯಾಗಲು ಬಿಡುವುದಿಲ್ಲ: ಆರಗ ಜ್ಞಾನೇಂದ್ರ

06:43 PM Sep 24, 2022 | Team Udayavani |

ತೀರ್ಥಹಳ್ಳಿ : ”ಶಂಕಿತ ಉಗ್ರರು ತೀರ್ಥಹಳ್ಳಿ ಮೂಲದವರೇ ಆಗಿದ್ದರೂ ಕೂಡ ಸಹವಾಸ ಮಂಗಳೂರು ಕರಾವಳಿಯದ್ದು, ಅಲ್ಲಿನ ಕೆಲವು ಮತಾಂಧ ಶಕ್ತಿಯ ಜೊತೆ ಸಂಪರ್ಕ ಇರುವುದರಿಂದ ವ್ಯತ್ಯಾಸವಾಗಿದೆ” ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Advertisement

ಇದನ್ನೂ ಓದಿ : ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಿಂದ ಆಹ್ವಾನವಿದೆ: ಜೆಡಿಎಸ್ ಶಾಸಕ ಚವ್ಹಾಣ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ”ಶಿವಮೊಗ್ಗ ಪೋಲೀಸರನ್ನು ಅಭಿನಂದಿಸುತ್ತೇನೆ. ಪೊಲೀಸರಿಗೆ ಅವಾರ್ಡ್ ಕೂಡ ಘೋಷಣೆ ಮಾಡಲಿದ್ದೇವೆ. ಈ ಕೇಸ್ ಅಲ್ಲಿ ಆಳವಾಗಿ ಇಳಿದು ಕೆಲಸ ಮಾಡಿದ್ದಕ್ಕೆ ಆಗುವ ಅನಾಹುತ ತಪ್ಪಿದೆ. ಬಾಂಬ್ ಟ್ರಯಲ್ ಕೂಡ ನೋಡಿದ್ದರು ಎಂದರೆ ಏನೆಲ್ಲಾ ಅನಾಹುತ ಆಗುತ್ತಿತ್ತೋ ಗೊತ್ತಿಲ್ಲ. ಅದನ್ನು ನಮ್ಮ ಶಿವಮೊಗ್ಗ ಪೊಲೀಸರು ತಪ್ಪಿಸಿದ್ದಾರೆ. ಈ ಆರೋಪಿಗಳಿಗೆ ಯಾವುದರ ಲಿಂಕ್ ಇದೆ ಎಂಬುದರ ಬಗ್ಗೆ ತಪಾಸಣೆ ಆಗುತ್ತಿದೆ. ಈ ರಾಷ್ಟ್ರದ ಏಕತೆಗೆ, ಸಮಗ್ರತೆಗೆ ಭಂಗ ತರುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ” ಎಂದು ಗುಡುಗಿದರು.

”ಮಲೆನಾಡನ್ನು ಯಾವುದೇ ಕಾರಣಕ್ಕೂ ಭಯೋತ್ಪಾದಕ ಅಡ್ಡೆಯಾಗಲು ಬಿಡುವುದಿಲ್ಲ. ಈ ಹಿಂದೆ ನಮ್ಮ ದೇಶದ ಉದ್ದಗಲಕ್ಕೂ ದೀಪಾವಳಿಯಲ್ಲಿ ಪಟಾಕಿ ಹಾರುವ ಹಾಗೆ ಬಾಂಬ್ ಹಾರುತ್ತಿತ್ತು ಈಗ ಎಲ್ಲೂ ಅಂತಹದ್ದು ಇಲ್ಲ. ರಕ್ಷಣಾ ವ್ಯವಸ್ಥೆ ಅಲರ್ಟ್ ಆಗಿದೆ. ಶಾರಿಕ್ ಮತ್ತು ಮತಿನ್ ಇಬ್ಬರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದರು.

”ಯಾರು ಯಾರಿಗೆ ಯಾವ ಯಾವ ಆಯುಧ ಬಳಸಬೇಕೋ ಯಾರು ಯಾರಿಗೆ ಯಾವ ಭಾಷೆ ಬಳಸಬೇಕೋ ಅದನ್ನ ಬಳಸಬೇಕಾಗುತ್ತದೆ. ಈ ಹಿಂದೆ ಯುಎಪಿಎ ಕೇಸ್ ಹಾಕಿದಾಗ ಅನವಶ್ಯಕವಾಗಿ ಹಾಕ್ತಿದ್ದಾರೆ ಅಂದರು. ಈಗ ಏನಾಯ್ತು, ಇಂತಹ ಪ್ರಕರಣ ಬೆಳಕಿಗೆ ಬಂತು.ಇವರ ಮುಖ ನೋಡಿದರೆ, ಹಿನ್ನೆಲೆ ನೋಡಿದರೆ ಏನು ಅಲ್ಲ ಅನ್ನಿಸುತ್ತದೆ. ಆದರೆ ಮತಾಂಧತೆಗೆ ಒಳಗಾದಾಗ ಇಂತಹ ಕೃತ್ಯ ನಡೆಯುತ್ತದೆ. ಪರಿಶೀಲನೆ ನಡೆಯುತ್ತಿದೆ, ಪೊಲೀಸರಿಗೆ ಎಲ್ಲಾ ರೀತಿಯ ಜಾಡು ಸಿಗುತ್ತಿದೆ” ಎಂದರು.

Advertisement

ನಲಪಾಡ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ”ಉದ್ಯೋಗ ಇದ್ದವರು ಏನೇನು ಮಾಡಿದ್ದಾರೆ ಅಂತ ಗೊತ್ತು.ಯಾವ ಹೋಟೆಲ್ ನಲ್ಲಿ ಏನು ಮಾಡಿದ್ದಾರೆ ಎಂದು ಗೊತ್ತಿದೆ. ನಿರುದ್ಯೋಗಿಗಳು ಎಲ್ಲರೂ  ಬಾಂಬ್ ತಯಾರಿಸಲು ಹೋದರೆ ಈ ದೇಶದಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ” ಎಂದರು.

ಕಾಂಗ್ರೆಸ್ ”ಪೇ ಸಿಎಂ” ಅಭಿಯಾನದ ಬಗ್ಗೆ ಮಾತನಾಡಿ, ಪೇ ಸಿಎಂ ಕಾಂಗ್ರೆಸ್ ನ ವಿಕೃತ ಮನಸ್ಥಿತಿಗೆ ಸಾಕ್ಷಿಯಾಗಿದೆ. ಅವರಿಗೆ ನಾಚಿಕೆ ಆಗಬೇಕು. ನೇರಾನೇರ ರಾಜಕಾರಣ ಮಾಡಿ ಅದರ ಯೋಗ್ಯತೆ ಅವರಿಗೆ ಇಲ್ಲ. ರಮೇಶ್ ಕುಮಾರ್ ಈ ಹಿಂದೆ ಮೂರು ತಲೆ ಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಅಂದರು. ಅವರಿಗೆ ಯಾವ ಪೇಸಿಎಂ. ಕಾಂಗ್ರೆಸ್ ನವರನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನರಿಲ್ಲ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಗಿಮಿಕ್ ಮಾಡುತ್ತಿದ್ದಾರೆ” ಎಂದರು.

ಕಲಬುರಗಿಯಲ್ಲಿ ಸಿಪಿಐ ಮೇಲೆ ಹಲ್ಲೆಯಾದ ಬಗ್ಗೆ ಮಾತನಾಡಿ, ಒಬ್ಬ ಇನ್ಸ್ ಪೆಕ್ಟರ್ ಮೇಲೆ 30 ಜನ ದಾಳಿ ಮಾಡಿದ್ದಾರೆ. ಆತನ ಮೇಲೆ ಏನು ಆಗಬಹುದೋ ಎಲ್ಲಾ ಆಗಿದೆ. ಆತ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಒಳ್ಳೆಯ ಕಡೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದೇವೆ. ಬೆಂಗಳೂರಿಗೆ ಕರೆ ತಂದು ಚಿಕಿತ್ಸೆ ಕೊಡಲು ವಿಳಂಬವಾಗುತ್ತದೆ. ಹೀಗಾಗಿ ಹೈದ್ರಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಲು ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದಾರೆ. ವೈದ್ಯರ ಅನುಮತಿ ದೊರೆತ ತಕ್ಷಣ ರವಾನೆ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಶೆಟ್ಟಿ, ಕುಕ್ಕೆ ಪ್ರಶಾಂತ್ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next