Advertisement

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಡಿಕೆ ಶಿವಕುಮಾರ್

02:23 PM Jul 03, 2022 | Team Udayavani |

ಬೆಂಗಳೂರು: ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ರಾಹುಲ್ ಗಾಂಧಿ ಹಾಗೂ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿ ಸ್ಥಾನ ಸಿಗದಿದ್ದಾಗಲೆ ಉಸಿರು ಎತ್ತಲಿಲ್ಲ. ಅಸಮಾಧಾನ ಹೊರಹಾಕಲಿಲ್ಲ. ದೇವೇಗೌಡರ ವಿರುದ್ಧ ಹೆಣ್ಣುಮಗಳನ್ನು ನಿಲ್ಲಿಸಿ ಸೋಲಿಸಿದೆ ಎಂದು ಧರ್ಮ ಸಿಂಗ್ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲ. ಪಕ್ಷಕ್ಕೆ ಒಳ್ಳೆಯದಾಗಲಿ ಎಂದು ಸುಮ್ಮನಿದ್ದೆ. ನಾವು ಸಿದ್ದರಾಮಯ್ಯ ಅವರ ಪರವಾಗಿಯೂ ಹೋರಾಟ ಮಾಡಿದೆವು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಾಗಲೂ ಮಾತನಾಡಲಿಲ್ಲ. ನಂತರ ಸೋನಿಯಾ ಗಾಂಧಿ ಅವರು ಹೇಳಿ ಸಂಪುಟದಲ್ಲಿ ಸ್ಥಾನ ಸಿಕ್ಕಿತು. ನಾನು ಅವರ ನಾಯಕತ್ವದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಬೇಕು ಎಂದು ಬೆಂಬಲಿಸಿದ್ದೆವು. ನಾವು ಅಧಿಕಾರ ಕಳೆದುಕೊಂಡ ನಂತರ ನಾನು ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರೇ ಶಾಸಕಾಂಗ ಪಕ್ಷದ ನಾಯಕರಾಗಬೇಕು ಎಂದು ಹೇಳಿದೆವು. ನಾನು ಯಾವತ್ತೂ ಪಕ್ಷದ ವಿರುದ್ಧ ಒಂದೇ ಒಂದು ಮಾತನ್ನೂ ಆಡಿಲ್ಲ. ನನಗೆ ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ. ಪಕ್ಷ ಇದ್ದರೆ ಮಾತ್ರ ನಾವು. ಇದನ್ನೇ ನಾನು ಮೊದಲಿಂದಲೂ ಪ್ರತಿಪಾದಿಸುತ್ತಿದ್ದೇನೆ. ಎಲ್ಲಾ ಕಾರ್ಯಕರ್ತರಿಗೂ ಇದನ್ನೇ ಹೇಳುತ್ತಿದ್ದೇನೆ ಎಂದರು.

ಸಿದ್ದರಾಮೋತ್ಸವ ಕಾರ್ಯಕ್ರಮದ ನಂತರ ಕಾಂಗ್ರೆಸ್ ಖಾಲಿ ಆಗುತ್ತೆ ಎಂಬ ಬಿಜೆಪಿ ಟ್ವೀಟ್ ಕುರಿತು ಕೇಳಿದ ಪ್ರಶ್ನೆಗೆ, ‘ ಬೇರೆಯವರು ಏನಾದರೂ ಹೇಳಲಿ. ನಮ್ಮ ಪಕ್ಷದ ನಾಯಕರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಬೇಕಿತ್ತು, ನಾನು ಕೇದಾರನಾಥಕ್ಕೆ ಹೋಗಿ ಕುಟುಂಬ ಸಮೇತ ಆಚರಿಸಿಕೊಂಡೆ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಇಲ್ಲಿ ಈ ರೀತಿ ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಇದು ಶಕ್ತಿ ಪ್ರದರ್ಶನ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ.  ಇನ್ನು ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆ. ನಾನು ನನ್ನ ಹುಟ್ಟುಹಬ್ಬಕ್ಕೆ ಯಾವುದೇ ಆಚರಣೆ, ಪ್ರಚಾರ ಬೇಡ ಎಂದಿದ್ದೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಏನೇ ಸಂಘಟನೆ ಆದರೂ ಅದರಿಂದ ಪಕ್ಷಕ್ಕೆ ಒಳ್ಳೆಯದಾದರೆ ಸಾಕು ಎಂದು ತಿಳಿಸಿದರು.

ಈ ಕಾರ್ಯಕ್ರಮ ಪಕ್ಷದ ವೇದಿಕೆಯಲ್ಲಿ ನಡೆಯುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, ‘ ಈ ಕಾರ್ಯಕ್ರಮಕ್ಕೆ ಒಂದು ಸಮಿತಿ ರಚಿಸಿಕೊಂಡಿದ್ದು, ಸಿದ್ದರಾಮಯ್ಯ ಅವರು 3ನೇ ತಾರೀಕು ಕಾರ್ಯಕ್ರಮ ಮಾಡುತ್ತಿದ್ದಾರೆ, ನೀನು ಇರಬೇಕು ಎಂದು ಕರೆದಿದ್ದಾರೆ. ನಾನು ಆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ರಾಹುಲ್ ಗಾಂಧಿ ಅವರ ಆಗಮನದ ಬಗ್ಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಆಹ್ವಾನ ನೀಡಿರಬಹುದು. ನನಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ’ ಎಂದರು.

Advertisement

ಇದನ್ನೂ ಓದಿ:ರಾಷ್ಟ್ರಪತಿ ರಬ್ಬರ್ ಸ್ಟ್ಯಾಂಪ್ ಆಗಬಾರದು: ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ

ಕೆ ಎನ್ ರಾಜಣ್ಣ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ‘ರಾಜಣ್ಣ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಕ್ಷಮೆ ಕೇಳಬೇಕು ಎಂದು ನಾನು ಹಾಗೂ ಪಕ್ಷದ ವರಿಷ್ಠರು ಸೂಚಿಸಿದರು. ಅವರು ಕೂಡ ಗೌರವಯುತವಾಗಿ ಕ್ಷಮೆ ಕೇಳಿದ್ದಾರೆ. ಈ ವಿಚಾರ ಇಲ್ಲಿಗೆ ಬಿಡೋಣ. ನಮ್ಮನ್ನು ಒಂದಲ್ಲಾ ಒಂದು ದಿನ ಹೊತ್ತುಕೊಂಡು ಹೋಗಬೇಕು. ಇದೇ ಪ್ರಕೃತಿ ನಿಯಮ’ ಎಂದು ಉತ್ತರಿಸಿದರು.

ರಾಹುಲ್ ಗಾಂಧಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಪಕ್ಷದ ವತಿಯಿಂದ ನಾವು ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ವರದಿ ಪಕ್ಷದ ಪರವಾಗಿದೆ. ಸಮೀಕ್ಷೆ ಪಕ್ಕಕ್ಕಿಟ್ಟರೂ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿಯವರು ಎಷ್ಟು ಗೆದ್ದಿದ್ದಾರೋ ನಾವು ಅಷ್ಟೇ ಗೆದ್ದಿದ್ದೇವೆ. ಪರಿಷತ್ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಿದೆ. ನಮ್ಮ ಸರ್ಕಾರ ಇದ್ದಾಗ ಮಂಡ್ಯ, ತುಮಕೂರಿನಲ್ಲಿ ಪಕ್ಷ ಸೋತಿತ್ತು. ಈ ಬಾರಿ ಗೆದ್ದಿದ್ದೇವೆ. ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆದ್ದಿರಲಿಲ್ಲ. ಈಗ ಗೆದ್ದಿದ್ದೇವೆ. ಚುನಾಯಿತ ಪ್ರತಿನಿಧಿಗಳು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದರು. ಈಗ ವಿದ್ಯಾವಂತರು, ಶಿಕ್ಷಕರು ಹಾಗೂ ಪ್ರಜ್ಞಾವಂತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಇದು ಜನರ ಅಭಿಪ್ರಾಯ ಏನು ಎಂಬುದನ್ನು ತಿಳಿಸುತ್ತಿದೆ. ಎಲ್ಲರೂ ಉತ್ತಮ ಆಡಳಿತಕ್ಕೆ ಕಾಂಗ್ರೆಸ್ ಬರಬೇಕು ಎಂದು ಬಯಸುತ್ತಿದ್ದಾರೆ’ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next