ಹುಬ್ಬಳ್ಳಿ: ಸೋಲಿನ ಹೊಣೆ ನಾನೇ ಹೊರುತ್ತೇನೆ. ಸೋಲಿಗೆ ಹಲವಾರು ಕಾರಣಗಳಿವೆ. ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತೇವೆ. ಹಿರಿಯ ನಾಯಕರ ಜೊತೆ ಕುಳಿತು ಚರ್ಚಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಕಾರಣಗಳ ಕುರಿತು ಅವಲೋಕನ ಮಾಡಿಕೊಳ್ಳುತ್ತೇವೆ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪುಟಿದೇಳುತ್ತೇವೆ ಎಂದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳನ್ನು ಮಾತ್ರ ಗೆದ್ದು ಹೀನಾಯ ನಿರ್ವಹಣೆ ತೋರಿದೆ. ಕಾಂಗ್ರೆಸ್ 136+ಸರ್ವೋದಯ ಕಾಂಗ್ರೆಸ್ ನ ದರ್ಶನ್ ಪುಟ್ಟಣ್ಣಯ್ಯ ಗೆಲುವು ಸಾಧಿಸಿ ಭರ್ಜರಿ ಬಹುಮತ ಪಡೆದಿದೆ. ಜೆಡಿಎಸ್ 19 ಸ್ಥಾನಗಳಿಗೆ ಇಳಿದಿದೆ. ಕೆಆರ್ ಪಿಪಿ ಯಿಂದ ಜನಾರ್ದನ ರೆಡ್ಡಿ ಗೆದ್ದಿದ್ದು, ಇಬ್ಬರು ಪಕ್ಷೇತರರು ಜಯ ಗಳಿಸಿದ್ದಾರೆ.