ಮೈಸೂರು: ಟಿಪ್ಪು ಸುಲ್ತಾನ್ ಅವರ ಬಗ್ಗೆ ಇತಿಹಾಸ ತಿರುಚಿ ಅಪಪ್ರಚಾರ ನಡೆಯುತ್ತಿದ್ದು ಮುಂದಿನ ಪೀಳಿಗೆಗೆ ಸತ್ಯ ಸಂಗತಿಯನ್ನು ತಿಳಿಸಲು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಅವರ ನೂರಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ಜಾರೆ.
ತನ್ವೀರ್ ಸೇಠ್ ಗುರುವಾರ ಮೈಸೂರಿನಲ್ಲಿ ಟಿಪ್ಪು ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಈ ಮಾತನ್ನು ಹೇಳಿದ್ದಾರೆ. ಮೊಗಲರು ಈ ದೇಶವನ್ನು 800 ವರ್ಷಗಳ ಕಾಲ ಆಳಿದರು. ಅವರ ಪ್ರತಿಮೆಯನ್ನು ಸ್ಥಾಪಿಸಿಲ್ಲ. ಇಸ್ಲಾಮಿನಲ್ಲಿ ಪ್ರತಿಮೆ ಸ್ಥಾಪನೆಗೆ ನಿಷೇಧವಿದೆ. ಆದರೂ, ಟಿಪ್ಪು ಪ್ರತಿಮೆಯನ್ನು ನಾನು ಸ್ಥಾಪಿಸುತ್ತೇನೆ. ಮುಂದಿನ ಪೀಳಿಗೆಗೆ ಟಿಪ್ಪುವಿನ ಬಗ್ಗೆ ಸತ್ಯ ಸಂಗತಿಯನ್ನು ತಿಳಿಸಲು ಪ್ರತಿಮೆ ಸ್ಥಾಪಿಸುತ್ತೇವೆ ಎಂದು ತನ್ವೀರ್ ಸೇಠ್ ಹೇಳಿದರು.
ಬಿಜೆಪಿ ಸರ್ಕಾರ ಇತಿಹಾಸವನ್ನು ತಿರುಚುತ್ತಿದೆ. ಚರಿತ್ರೆಯನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ, ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ಅನಿವಾರ್ಯವಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.