ಗಣೇಶ ಚತುರ್ಥಿ ಇನ್ನೂ ಮೂರ್‍ನಾಲ್ಕು ತಿಂಗಳು ಇರುವಾಗಲೇ ವ್ಯಾಪಾರಿಗಳು ತಮ್ಮ ಕಾಯಕ ಶುರು ಮಾಡಿದ್ದಾರೆ. ಲಕ್ಷಾಂತರ ಬಂಡವಾಳ ಹೂಡಿದ್ದು, ಈ ಸಂದರ್ಭದಲ್ಲಿ ಉತ್ತಮ ಆದಾಯ ಮಾಡಿಕೊಳ್ಳುತ್ತಾರೆ. ಕಳೆದ ಬಾರಿಗಿಂತ ಈ ಬಾರಿ ಗಣೇಶ ವಿಗ್ರಹಗಳ ದರ ಬಾರಿಯಾಗಿದೆ. ಆದರೂ ಜನ ಯಾವುದಕ್ಕೂ ಹಿಂಜರಿಯದೆ ಮುಂಗಡ ಕೊಟ್ಟು ಗಣೇಶ ಮೂರ್ತಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಬೇರೆ ಕಡೆಯಿಂದಲೂ ಬರ್ತಾರೆ: ಕೆಲವೆಡೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇ ಧಿಸಲಾಗಿದೆ. ಹೀಗಾಗಿ ದಾವಣೆಗೆರೆ, ಬಳ್ಳಾರಿ, ಮಂತ್ರಾಲಯ ಸೇರಿ ವಿವಿಧೆಡೆಯಿಂದ ಆಗಮಿಸುವ ಗಜಾನನ ಮಂಡಳಿಗಳ ಸದಸ್ಯರು ದುಬಾರಿ ಬೆಲೆ ನೀಡಿ ಪಿಒಪಿ ಗಣೇಶ ಮೂರ್ತಿಗಳನ್ನು ಖರೀದಿಸಿದ್ದಾರೆ. ಇನ್ನು ಸ್ಥಳೀಯರು ಕೂಡ ಮೆಹಬೂಬ್ ನಗರ, ಕರೋಲ್, ಮಕ್ತಾಲ್, ಹೈದರಾಬಾದ್‌ಗೆ ತೆರಳಿ ಗಣೇಶ ಮೂರ್ತಿ ತರುತ್ತಾರೆ. ಬೆಲೆಯಲ್ಲಿ ರಾಜಿಯಿಲ್ಲ: ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಇಲ್ಲಿನ ವ್ಯಾಪಾರಿಗಳು ಬೆಲೆಯಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಒಂದೂವರೆ ಅಡಿಯಿಂದ 11 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಮೂರು ಸಾವಿರ ರೂ. ನಿಂದ 30 ಸಾವಿರ ರೂ. ವರೆಗೆ ದರ ನಿಗದಿ ಮಾಡಲಾಗಿದೆ. ಗಣೇಶ ಚತುರ್ಥಿ ಇನ್ನೂ ನಾಲ್ಕು ದಿನ ಇರುವಾಗಲೇ ಬಹುತೇಕ ಗಣೇಶ ಮೂರ್ತಿಗಳು ಮಾರಾಟವಾಗಿವೆ. ಇನ್ನೂ ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶದ ಕೆಲಸಗಳು ಬಾಕಿ ಇರುವಾಗಲೇ ಮೂರ್ತಿಗಳನ್ನು ಕಾಯ್ದಿರಿಸಲಾಗಿದೆ. ಹೀಗಾಗಿ ವರ್ತಕರು ಈ ಬಾರಿ ಸ್ವಲ್ಪ ಜಾಸ್ತಿಯೇ ಖುಷಿಯಲ್ಲಿದ್ದಾರೆ. ಅವರೇ ಹೇಳುವಂತೆ ಬೇಡಿಕೆ ಹೆಚ್ಚಾಗಿದ್ದು, ನಾವು ಬೆಲೆಯಲ್ಲಿ ರಾಜಿಯಾಗುತ್ತಿಲ್ಲ ಎನ್ನುತ್ತಾರೆ. ಕಟ್ಟುನಿಟ್ಟಿನ ಆದೇಶವಿಲ್ಲ: ಇನ್ನು ಪಿಒಪಿ ಬಗ್ಗೆ ಎಲ್ಲೆಡೆ ಜಾಗೃತಿ ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳಾಗುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅ ಧಿಕಾರಿಗಳು ಈಚೆಗೆ ತೆರಳಿ ಪಿಒಪಿ ಗಣೇಶ ನಿರ್ಮಿಸದಂತೆ ತಾಕೀತು ಮಾಡಿದ್ದು, ಇದಕ್ಕೆ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ಹೇಳುವುದಾದರೆ ಮೊದಲೇ ತಿಳಿಸಬೇಕು. ಈಗಾಗಲೇ ಲಕ್ಷಾಂತರ ಬಂಡವಾಳ ಹೂಡಿದ್ದು, ನಾವು ನಷ್ಟ ಎದುರಿಸಬೇಕಾಗುತ್ತದೆ. ಬೇಕಿದ್ದರೆ ಜನರಿಗೆ ಖರೀದಿಸದಂತೆ ಜಾಗೃತಿ ಮೂಡಿಸುವಂತೆ ವ್ಯಾಪಾರಿಗಳು ತಿಳಿಸುತ್ತಿದ್ದಾರೆ. ಇನ್ನು ಜನರು ಕೂಡ ಇದಕ್ಕೆ ಸಹಮತ ತೋರುತ್ತಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಪಿಒಪಿ ಗಣೇಶ ಮೂರ್ತಿಗಳ ಬಳಕೆಗೆ ಕಡಿವಾಣ ಹಾಕುವುದು ಸರಿಯಲ್ಲ ಎಂದು ಹಲವರು ವಾದಿಸಿದ್ದರು. ಹೀಗಾಗಿ ಜಿಲ್ಲೆಯ ಮಟ್ಟಿಗೆ ಬಣ್ಣದ ಗಣೇಶನಿಗೆ ಯಾವುದೇ ಅಡೆತಡೆಗಳು ಕಂಡು ಬರುತ್ತಿಲ್ಲ. ನಗರದಲ್ಲಿ ಸಿದ್ಧತೆ ಜೋರು: ಇನ್ನು ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ನಗರದಲ್ಲಿ ಸಿದ್ಧತೆ ಚಟುವಟಿಕೆಗಳು ಗರಿಗೆದರಿವೆ. ಎಂದಿನಂತೆ ಮಂಡಳಿಗಳು, ಸಮಿತಿಗಳು ವೇದಿಕೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿವೆ. ಚಂದ್ರಮೌಳೇಶ್ವರ ವೃತ್ತ, ಸರಾಫ್ ಬಜಾರ್, ಕಲ್ಲಾನೆ, ಜೈನ ಮಂದಿರ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಬೃಹತ್ ವೇದಿಕೆ ಸಿದ್ಧತೆ ಕಾರ್ಯ ಶುರುವಾಗಿದೆ. ಇನ್ನು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶದ ಹಿನ್ನೆಲೆಯಲ್ಲಿ ನಗರಸಭೆ ಕೂಡ ಸ್ವತ್ಛತೆ, ರಸ್ತೆ ದುರಸ್ತಿಯಂಥ ಕಾರ್ಯಗಳಿಗೆ ಮುಂದಾಗಿದೆ.
Advertisement