ಬೆಂಗಳೂರು: “ಏನೇ ಆಗಲಿ ಪಾದಯಾತ್ರೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು, ಪಾದಯಾತ್ರೆಗೆ ಹೈಕೋರ್ಟ್ ಆಕ್ಷೇಪ ಎತ್ತುತ್ತಿದ್ದಂತೆ ತಮ್ಮ ವರಸೆ ಬದಲಿಸಿದ್ದಾರೆ, ಅದಕ್ಕೆ ಪುಷ್ಠಿ ಎಂಬಂತೆ “ಪಾದಯಾತ್ರೆ ಮುಂದುವರೆಸಬೇಕೋ ಅಥವಾ ಬೇಡವೋ ಎಂದು ನ್ಯಾಯಾಲಯ ನೀಡುವ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ಧರಾಯಮ್ಮ ಹೇಳಿದ್ದಾರೆ.
ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಜ.14ರಂದು ನಡೆಯಲಿದೆ. ನಾಳೆ ಪಾದಯಾತ್ರೆ ಮಾಡಲು ತೊಂದರೆ ಇಲ್ಲ ಹಾಗಾಗಿ ನಾಳೆ ಪಾದಯಾತ್ರೆ ಮಾಡುತ್ತೇವೆ. ಒಂದು ವೇಳೆ ನ್ಯಾಯಾಲಯ ಪಾದಯಾತ್ರೆ ನಿಲ್ಲಿಸುವಂತೆ ಆದೇಶಿಸಿದರೆ ಅದನ್ನು ಗೌರವಿಸಿ, ಪಾಲಿಸುತ್ತೇವೆ. ಎಂದಿದ್ದಾರೆ.
ಪಾದಯಾತ್ರೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆಯಾ ಎಂದು ಕೋರ್ಟ್ ಸರ್ಕಾರವನ್ನು ಪ್ರಶ್ನೆ ಮಾಡಿದೆ, ನ್ಯಾಯಾಲಯದ ಪ್ರಶ್ನೆಗೆ ಸರ್ಕಾರ ಉತ್ತರ ನೀಡುತ್ತೆ. ಪಾದಯಾತ್ರೆ, ಪ್ರತಿಭಟನೆ ಮಾಡುವಾಗೆಲ್ಲ ಸರ್ಕಾರದ ಅನುಮತಿ ಪಡೆದು ಮಾಡಲ್ಲ, ಸರ್ಕಾರದ ಗಮನಕ್ಕೆ ತಂದು ಪಾದಯಾತ್ರೆ ಮಾಡುತ್ತಿದ್ದೇವೆ. ನ್ಯಾಯಾಲಯದ ಆದೇಶ ಏನು ಬರುತ್ತೋ ಕಾದು ನೋಡೋಣ. ಏನೇ ಆದೇಶ ಬಂದರು ಅದನ್ನು ಉಲ್ಲಂಘನೆಯಂತೂ ಖಂಡಿತಾ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.