ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆವರೆಗೂ ಕಾದು ನೋಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ಎರಡೂ ಪಕ್ಷಗಳು ನೀಡಿರುವ ಭರವಸೆ,
ರೈತರ ಸಾಲ ಮನ್ನಾ ಎಲ್ಲದರ ಬಗ್ಗೆಯೂ ಬಜೆಟ್‌ನಲ್ಲಿ ಘೋಷಣೆ ಮಾಡಲಿ. ಇಲ್ಲದಿದ್ದರೆ ನಮ್ಮ ಹೋರಾಟ
ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ನಾವು ಅಧಿಕಾರದ ಬೆನ್ನೇರಿ ಹೋಗುವುದಿಲ್ಲ, ಕಾಯುತ್ತೇವೆ. ಜನರಿಗೆ ನೀಡಿರುವ ಭರವಸೆ ಈಡೇರಿಸಲು ಸಮ್ಮಿಶ್ರ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿದರು. ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು 15 ದಿನ ಕಾಲಾವಕಾಶ ಕೇಳಿದ್ದರು. ಇದೀಗ ಕಾಲಾವಕಾಶ ಮುಗಿದಿದೆ. ಈ ಬಗ್ಗೆ ಅವರೇ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಮಹಾರಾಷ್ಟ್ರ, ಉತ್ತರಪ್ರದೇಶದಲ್ಲಿ ಸಾಲ ಮನ್ನಾ ಮಾಡಿದ್ದು ಅಲ್ಲಿನ ರಾಜ್ಯ ಸರ್ಕಾರ. ಕೇಂದ್ರ ಸರ್ಕಾರದ ನೆರವು ಕೇಳಿರಲಿಲ್ಲ. ಇದೀಗ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರ ವೆಚ್ಚ ಭರಿಸಲಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ಅವರು ಚುನಾವಣೆಗೆ ಮುಂಚೆ, ಕೇಂದ್ರದ ಕಡೆ ನೋಡದೆ ಸಹಕಾರ ಸಂಘ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರಾಜ್ಯದಲ್ಲಿ ರೈತರು ಮಾಡಿರುವ ಎಲ್ಲ ರೀತಿಯ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು.
ಅದರಂತೆ ಮಾತು ಉಳಿಸಿಕೊಳ್ಳಲಿ ಎಂದರು.