ಬೆಂಗಳೂರು: ಮೈಸೂರು ಜಿಲ್ಲೆಯ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಆರು ಜನರ 2 ಕುಟುಂಬಗಳು ಎರಡೂವರೆ ತಿಂಗಳಿನಿಂದ ಅರಬರ ನಾಡು ಕತಾರ್‌ನಲ್ಲಿ ಸಿಲುಕಿಕೊಂಡು ಕಂಗಾಲಾಗಿವೆ! ಕೈ ಮುಗಿಯುತ್ತೇವೆ, ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಅಂಗಾಲಾಚುತ್ತಿವೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಪಕ್ಷರೇಶ್ವರ ಎಂಬ ಹಳ್ಳಿಯ ಕಾಡಂಚಿನಲ್ಲಿರುವ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಕುಟುಂಬ ಕಾಡಲ್ಲಿ ಸಿಗುವ ಗಿಡಮೂಲಿಕೆಗಳಿಂದ ವನೌಷಧ, ಮಸಾಜ್ ಮಾಡುವ ತೈಲ ತಯಾರಿಸಿ ವಿವಿಧೆಡೆಯ ಆಯುರ್ವೇದ ಮೇಳಗಳಲ್ಲಿ ಮಾರುತ್ತದೆ. ಇದೇ ರೀತಿಯ ಮೇಳ ಕತಾರ್‌ನಲ್ಲಿಯೂ ಇದ್ದುದರಿಂದ ಹೋಗಿದ್ದವು. ಆದರೆ ಈ ಬಾರಿ ಅಲ್ಲಿ ಲಾಕ್‌ಡೌನ್ ಘೋಷಣೆಯಾಗಿ ಮೇಳ ರದ್ದುಗೊಂಡು ಅಲ್ಲೇ ಸಿಲುಕಿದ್ದವು.
ಕನ್ನಡ ಸಂಘ ನೆರವು
ಕುಟುಂಬಗಳು ತಾವು ಸಂಕಷ್ಟದಲ್ಲಿರುವ ಮಾಹಿತಿಯನ್ನು ರಾಯಭಾರ ಕಚೇರಿಗೆ ತಿಳಿಸಿದ್ದು, ಅನಂತರ ಕನ್ನಡ ಸಂಘಕ್ಕೆ ತಿಳಿದು ಅವರಿಗೆ ಬೇಕಾದ ಆಹಾರ ಸಾಮಗ್ರಿ ಒದಗಿಸಿದೆ.
ಟಿಕೆಟ್‌ಗೆ ಹಣ ಇಲ್ಲ
ಇವರಿಗೀಗ ವಾಪಸ್ ಬರಲು ಹಣವೂ ಇಲ್ಲ. ಊರಿಗೆ ಕಳುಹಿಸಲು ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ. ಕತಾರ್‌ನಲ್ಲಿನ ಕನ್ನಡ ಸಂಘದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದವರಿಗೆ ಊಟ, ವಸತಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ಟಿಕೆಟ್ ನೀಡಿ ಕಳುಹಿಸಲು ಇವರಿಗೆ ಶಕ್ತಿ ಇಲ್ಲ. ಸರಕಾರಗಳೇ ವಾಪಸ್ ಕರೆಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.