ತೆಕ್ಕಟ್ಟೆ : ನಮ್ಮ ಶ್ರೇಷ್ಠವಾದ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರದ ನೆಲೆಯ ಮೇಲೆ ರಾಷ್ಟ್ರ ಸದೃಢವಾಗಿ ನಿಂತಿದ್ದು , ಇಡೀ ವಿಶ್ವವನ್ನೇ ತನ್ನೆಡೆಗೆ ಸೆಳೆಯುತ್ತಿದೆ. ಭಾರತೀಯ ಧರ್ಮ ಪರಂಪರೆಯಲ್ಲಿ ಎಲ್ಲಾ ಧರ್ಮ ಹಾಗೂ ಸಂಸ್ಕೃತಿಗಳನ್ನು ಗೌರವಿಸುತ್ತಾ ಬಂದಿದ್ದು , ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ರಾಷ್ಟ್ರ ನಮ್ಮದು. ಅಂತಹ ಅತ್ಯಮೂಲ್ಯವಾದ ಸಂಸ್ಕೃತಿಗಳ ವಿನಿಮಯಕ್ಕೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಅವಕಾಶ ಕಲ್ಪಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ನಮ್ಮ ಸಂಸ್ಕೃತಿಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಜತೆಗೆ ಸೇವೆಯನ್ನು ಗುರುತಿಸುವ ಮನಸ್ಥಿತಿ ನಮ್ಮಲ್ಲಿ ಬೆಳೆಯಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.
ಅವರು ನ.26 ರಂದು ಹೆಸ್ಕಾತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಅಂತರಾಷ್ಟ್ರೀಯ ಸ್ವಯಂ ಸೇವಕರ ಸಂಸ್ಕೃತಿ ವಿನಿಮಯ ಹಾಗೂ ಸಮುದಾಯ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಾ.ಪಂ.ಸದಸ್ಯೆ ಶೈಲಾಶ್ರೀ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ನಮ್ಮ ಧರ್ಮ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊರ್ಗಿ ಗ್ರಾ.ಪಂ.ಅಧ್ಯಕ್ಷೆ ಗಂಗೆ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯೆ ಲಲಿತಾ ಭಟ್, ಸಂಜೀವ ಕುಲಾಲ್, ಪಿಡಿಒ ಸುಧಾಕರ ಶೆಟ್ಟಿ ಗುಡ್ಡಾಮ್ಮಾಡಿ, ಎಸ್‌ಡಿಎಂಸಿ ಅಧ್ಯಕ್ಷ ವಿಠಲ್ ಕುಲಾಲ್, ಕುಂದಾಪುರ ರೋಟರಿಕ್ಲಬ್ ರಿವರ್ ಸೈಡ್‌ನ ಅಧ್ಯಕ್ಷ ರಾಜು ಪೂಜಾರಿ, ಹೆಸ್ಕಾತ್ತೂರು ಬಾಲ ವಿಕಾಸ ಕೇಂದ್ರದ ಅಧ್ಯಕ್ಷಡ ಗಾಯತ್ರಿ ಕೆದ್ಲಾಯ, ಹೆಸ್ಕಾತ್ತೂರು ಸ.ಹಿ.ಪ್ರಾಶಾಲೆಯ ಮುಖ್ಯ ಶಿಕ್ಷಕ ಶೇಖರ್ ಕುಮಾರ್, ಶಿರಿಯಾರ ಸ.ಹಿ.ಪ್ರಾಶಾಲೆಯ ಮುಖ್ಯ ಶಿಕ್ಷಕ ಸಾಧು ಶೇರೆಗಾರ್, ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಹಿರಿಯ ಕಾರ್ಯಕ್ರಮ ಪ್ರಬಂದಕ ವೆಂಕಟೇಶ್ ಎಂ. , ಜರ್ಮನ್ ಶàಕ್ಷಕರಾದ ಮಥಿಯಾಸ್, ಲೀನಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಭಾರತೀಯ ಸಂಸ್ಕೃತಿ ಹಾಗೂ ಜರ್ಮನ್ ಹಾಗೂ ಸ್ವೀಡನ್ ಶಿಕ್ಷಕರಿಂದ ಜರ್ಮನ್ ಸಂಸ್ಕೃತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು.
ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯ ಚೀಫ್ ಕೋ ಆರ್ಡಿನೇಟರ್ ದಿನೇಶ್ ಸ್ವಾಗತಿಸಿ, ಹಿರಿಯ ಕಾರ್ಯಕ್ರಮ ಪ್ರಬಂದಕ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕ ಅಶೋಕ್ ತೆಕ್ಕಟ್ಟೆ ನಿರೂಪಿಸಿ, ವಂದಿಸಿದರು.
ಜರ್ಮನ್ ಹಾಗೂ ಸ್ವೀಡನ್ ಶಿಕ್ಷಕರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ವಿದ್ಯಾರ್ಥಿಗಳು .
ಭಾರತೀಯ ಸಂಸ್ಕೃತಿಯ ಹಾಗೂ ಇಲ್ಲಿನ ಪರಂಪರೆಯ ಅಧ್ಯಯನಕ್ಕಾಗಿ ಭಾರತಕ್ಕೆ ಆಗಮಿಸಿದ ಜರ್ಮನ್ ಹಾಗೂ ಸ್ವೀಡನ್ ದೇಶದ ಸುಮಾರು 40ಕ್ಕೂ ಅಧಿಕ ವಿದೇಶಿ ಶಿಕ್ಷಕರು ಮೊದಲ ಬಾರಿಗೆ ಗ್ರಾಮೀಣ ಭಾಗದ ಹೆಸ್ಕಾತ್ತೂರು ಸರಕಾರಿ ಪ್ರಾಥಮಿಕ ಶಾಲೆಗೆ ಆಗಮಿಸುತ್ತಿದ್ದಂತೆ ಇಲ್ಲಿನ ವಿದ್ಯಾರ್ಥಿಗಳು ಪೂರ್ಣಕುಂಭದೊಂದಿದೆ ಚಂಡೆ ಹಾಗೂ ವಾದ್ಯವನ್ನು ಮೊಳಗಿಸುವ ಮೂಲಕ ವಿಶಿಷ್ಟ ಪರಿಕಲ್ಪನೆಯೊಂದಿಗೆ ಸಂಭ್ರಮದಿಂದ ಭರಮಾಡಿಕೊಂಡ ದೃಶ್ಯ ಗಮನ ಸೆಳೆಯಿತು.