Advertisement

ಸ್ಥಿರ ರಾಜಕೀಯ ವ್ಯವಸ್ಥೆ ಬೇಕು

02:26 AM Jul 08, 2019 | mahesh |

ರಾಜ್ಯದ ಸಮ್ಮಿಶ್ರ ಸರ್ಕಾರ ಇನ್ನೊಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ಈ ಬಾರಿಯ ಬಿಕ್ಕಟ್ಟು ಹಿಂದೆಂದೆಗಿಂತಲೂ ಹೆಚ್ಚು ತೀವ್ರವಾಗಿದೆ. ಜೆಡಿಎಸ್‌ನ ಮೂವರು ಸೇರಿ ಒಟ್ಟು 13 ಶಾಸಕರು ರಾಜೀನಾಮೆ ನೀಡಿದ್ದು, ಅದು ಅಂಗೀಕರಿಸಲ್ಪಟ್ಟರೆ ಸರ್ಕಾರ ಅಲ್ಪಮತಕ್ಕಿಳಿಯುತ್ತದೆ. ಇದು ಸಮ್ಮಿಶ್ರ ಸರ್ಕಾರದ ಅಳಿವು -ಉಳಿವಿನ ಸಂದರ್ಭ. ಇಷ್ಟರ ತನಕ ಕಾಂಗ್ರೆಸ್‌ ಶಾಸಕರು ಮಾತ್ರ ಬಂಡಾಯ ಎದ್ದು ರಾಜೀನಾಮೆ ಕೊಡಲು ಮುಂದಾಗುತ್ತಿದ್ದರು. ಇತ್ತೀಚೆಗಷ್ಟೇ ಜೆಡಿಎಸ್‌ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಿರುವ ಎಚ್. ವಿಶ್ವನಾಥ್‌ ಹಾಗೂ ಅವರ ಜೊತೆ ಇನ್ನಿಬ್ಬರು ಆ ಪಕ್ಷದ ಶಾಸಕರು ಸೇರಿಕೊಂಡಿರುವುದು ಈ ಸಲದ ವಿಶೇಷತೆ. ಇದರಿಂದ ಕಾಂಗ್ರೆಸ್‌ ಮಾತ್ರವಲ್ಲ ಜೆಡಿಎಸ್‌ನಲ್ಲೂ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಬಯಲಾಗಿದೆ.

Advertisement

ಈಗ ಕಾಣಿಸಿಕೊಂಡಿರುವ ಬಿಕ್ಕಟ್ಟು ಕಾಂಗ್ರೆಸ್‌ ಪಾಲಿಗೆ ಅತ್ಯಂತ ಕೆಟ್ಟ ಸಮಯದಲ್ಲಿ ಬಂದಿದೆ. ಲೋಕಸಭೆ ಸೋಲಿನ ಬಳಿಕ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದು, ಹೊಸ ಅಧ್ಯಕ್ಷನ ಆಯ್ಕೆ ಇನ್ನೂ ಆಗಿಲ್ಲ. ಹೀಗಾಗಿ ಯಾರ ಬಳಿ ದೂರು-ದುಮ್ಮಾನಗಳನ್ನು ಹೇಳಿಕೊಳ್ಳಬೇಕೆಂದು ಸ್ವತಃ ಕಾಂಗ್ರೆಸ್‌ ನಾಯಕರಿಗೆ ಗೊತ್ತಿಲ್ಲ. ಜೊತೆಗೆ ರಾಜ್ಯದ ಕಾಂಗ್ರೆಸ್‌ ಕೂಡಾ ಹಲವು ಗುಂಪುಗಳಲ್ಲಿ ಹಂಚಿ ಹೋಗಿದೆ. ಪ್ರತಿಯೊಂದು ಬಣವೂ ತನ್ನ ಕೈಮೇಲಾಗಲು ಪಟ್ಟುಗಳನ್ನು ಹಾಕುತ್ತಿರುವುದರಿಂದ ಕಾಂಗ್ರೆಸ್‌ ಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಇಂಥ ಸಂದರ್ಭದಲ್ಲಿ ಕಾಣಿಸಿಕೊಂಡಿರುವ ಬಿಕ್ಕಟ್ಟನ್ನು ಬಗೆಹರಿಸುವುದೆಂತು ಎಂದು ನಾಯಕರು ದಿಕ್ಕುತೋಚದೆ ನಿಂತಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ಕಾಣಿಸಿಕೊಂಡಿರುವ ಈ ಸಮಸ್ಯೆ ಬಗೆಹರಿಯಲೂ ಬಹುದು ಅಥವಾ ಬಗೆಹರಿಯದಿರಬಹುದು. ಸರ್ಕಾರ ಉಳಿದೀತೆ ಅಥವಾ ಉರುಳೀತೆ ಎನ್ನುವುದಕ್ಕಿಂತಲೂ ಹೀಗೊಂದು ಸರ್ಕಾರ ನಮಗೆ ಬೇಕೆ ಎನ್ನುವುದು ಕೇಳ ಬೇಕಾದ ಪ್ರಶ್ನೆ. ಒಂದು ವರ್ಷ ಎರಡು ತಿಂಗಳು ಸವೆಸಿರುವ ಸರ್ಕಾರ ಎಂದಾದರೂ ಒಂದು ದಿನ ನೆಮ್ಮದಿಯಾಗಿ ಆಡಳಿತ ನಡೆಸುವ ಪರಿಸ್ಥಿತಿ ಇತ್ತೇ? ಯಾವ ಉದ್ದೇಶಕ್ಕಾಗಿ ಈ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂಬ ಪ್ರಶ್ನೆಯನ್ನು ಎರಡೂ ಪಕ್ಷಗಳ ನಾಯಕರು ತಮ್ಮಲ್ಲೇ ಕೇಳಿ ಕೊಳ್ಳಬೇಕಾದ ಅಗತ್ಯ ಇದೆ. ಇಲ್ಲಿರುವ ಪ್ರತಿಯೊಬ್ಬ ಶಾಸಕ , ಎಂಎಲ್ಸಿಗೆ ಅಧಿಕಾರ ಬೇಕೆಂಬ ಹಪಾಹಪಿ ಮಿತಿಮೀರಿದೆ. ಒಬ್ಬನಿಗೆ ಮಂತ್ರಿ ಪದವಿ ನೀಡಿದರೆ ಇನ್ನೊಬ್ಬನಿಗೆ ಅಸಮಾಧಾನವಾಗುತ್ತದೆ. ಮಂಡಳಿ, ನಿಗಮಗಳ ಅಧಿಕಾರದಿಂದಲೂ ತೃಪ್ತರಾಗುತ್ತಿಲ್ಲ. ಇರುವ ಅರವತ್ತು ಚಿಲ್ಲರೆ ಮಂತ್ರಿ ಪದವಿಗಳನ್ನು ಎಷ್ಟು ಮಂದಿಗೆಂದು ಹಂಚಬಹುದು?

ಹಾಗೇ ನೋಡಿದರೆ ಈ ಸಮ್ಮಿಶ್ರ ಸರ್ಕಾರಕ್ಕೆ ಸೈದ್ಧಾಂತಿಕ ಅಥವಾ ತಾತ್ವಿಕ ನೆಲೆಗಟ್ಟು ಎಂಬುದೇ ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದ ಕಾರಣ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಏಕೈಕ ಉದ್ದೇಶದಿಂದ ಮಾಡಿಕೊಂಡ ಅವಸರದ ಮೈತ್ರಿಯಿದು.ಒಂದು ವೇಳೆ ಈ ಮಾದರಿಯ ಮೈತ್ರಿ ರಚಿಸುವುದಾದರೂ ಹೆಚ್ಚು ಸ್ಥಾನಗಳನ್ನು ಹೊಂದಿರುವ ಪಕ್ಷ ಮುಖ್ಯಮಂತ್ರಿ ಪಟ್ಟ ಇಟ್ಟುಕೊಳ್ಳುವುದು ವಾಡಿಕೆ. ಆದರೆ ಕಾಂಗ್ರೆಸ್‌ ತನ್ನ ಅರ್ಧದಷ್ಟು ಸ್ಥಾನ ಗಳಿಸಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟ ನಿರ್ಧಾರದ ಹಿಂದಿನ ಉದ್ದೇಶ ಏನು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಈ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಯಾವ ಲಾಭವೂ ಆಗಿಲ್ಲ. ಹೀಗಿರುವಾಗ ಮೈತ್ರಿ ಸರಕಾರವನ್ನು ಮುಂದುವರಿಸಿಕೊಂಡು ಹೋಗಲೇ ಬೇಕೆಂಬ ಹಠ ಏಕೆ? ಸರ್ಕಾರ ರಚನೆಯಾದ ಮರುದಿನದಿಂದಲೇ ಅದಕ್ಕೆ ಬಂಡಾಯದ ಕಾಟ ಶುರುವಾಗಿತ್ತು. ವರ್ಷವಾದರೂ ಬಂಡಾಯ ಶಮನಗೊಳಿಸಲು ಉಭಯ ಪಕ್ಷದ ನಾಯಕರಿಂದ ಸಾಧ್ಯವಾಗಿಲ್ಲ.

ಇಡೀ ನಾಟಕದಲ್ಲಿ ಬಿಜೆಪಿ ಪಾತ್ರ ಇಲ್ಲ ಎಂದರೆ ಅದನ್ನು ನಂಬುವುದು ಕಷ್ಟವಾಗುತ್ತದೆ. ರಾಜ್ಯದ ಬಿಜೆಪಿ ನಾಯಕರು ನಾವು ತಟಸ್ಥರಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದರೂ ಇಷ್ಟರ ತನಕ ಆಗಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಇದೊಂದು ವ್ಯವಸ್ಥಿತ ಕಾರ್ಯಾಚರಣೆ ಎನ್ನುವುದು ಅರಿವಾಗುತ್ತದೆ. ಆದರೆ ಹೀಗೆ ಶಾಸಕರನ್ನು ರಾಜೀನಾಮೆ ಕೊಡಿಸಿ ಅಡ್ಡದಾರಿಯಿಂದ ಅಧಿಕಾರ ಹಿಡಿಯುವ ಅಗತ್ಯವಿದೆಯೇ ಎಂದು ಬಿಜೆಪಿ ನಾಯಕರು ಕೂಡಾ ತಮ್ಮಲ್ಲೇ ಕೇಳಿಕೊಳ್ಳಬೇಕು. ಒಂದು ವೇಳೆ ರಾಜೀನಾಮೆ ನೀಡಿದ ಶಾಸಕರು ಯಾವುದಾದರೊಂದು ದಾರಿಯ ಮೂಲಕ ಬಿಜೆಪಿಗೆ ಬಂದರೂ ಅವರು ನಿಷ್ಠರಾಗಿರುತ್ತಾರೆ ಎನ್ನುವುದಕ್ಕೆ ಯಾವ ಖಾತರಿಯಿದೆ? ಮಾತೃಪಕ್ಷಕ್ಕೆ ನಿಷ್ಠೆ ತೋರದವರು ಬಂದ ಪಕ್ಷಕ್ಕೆ ನಿಷ್ಠರಾಗಿರುತ್ತಾರಾ? ಇವರೆಲ್ಲ ಅವಕಾಶವಾದಿ ರಾಜಕಾರಣದಲ್ಲಿ ಪಾರಂಗತರಾದವರು.ಜನಹಿತಕ್ಕಿಂತಲೂ ಅವರಿಗೆ ಸ್ವಂತ ಹಿತಾಸಕ್ತಿಯೇ ಮುಖ್ಯ. ಹೀಗಾಗಿ ಅವರನ್ನು ನಂಬಿಕೊಂಡು ಸರಕಾರ ರಚಿಸುವುದು ಯಾವ ಕಾಲಕ್ಕಾದರೂ ಅಪಾಯಕಾರಿಯೇ. ಹೀಗಾಗಿ ಮೂರು ಪಕ್ಷಗಳು ಅವಕಾಶವಾದಿ ರಾಜಕಾರಣವನ್ನು ಬಿಟ್ಟು ಸ್ಥಿರ ರಾಜಕೀಯ ವಾತಾವರಣ ನಿರ್ಮಿಸುವತ್ತ ಗಮನಹರಿಸುವುದು ಈ ಸಂದರ್ಭದ ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next