Advertisement

ಕಾಂಗ್ರೆಸ್ಸಿಗರಿಂದ ಬುದ್ಧಿ ಕಲಿತಿದ್ದೇವೆ

01:41 PM May 14, 2019 | Team Udayavani |

ಮಾಗಡಿ: ಸೃಳೀಯ ಸಹಕಾರ ಸಂಘಗಳ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡುವಲ್ಲಿ ಕಾಂಗ್ರೆಸ್ಸಿಗರು ಜೆಡಿಎಸ್‌ಗೆ ಸಾಕಷ್ಟು ಬುದ್ಧಿ ಕಲಿಸಿದ್ದಾರೆ. ಮುಂದಿನ ನಡೆ ಕಾದು ನೋಡಿ ಎಂದು ಶಾಸಕ ಎ.ಮಂಜು ಕಾಂಗ್ರೆಸ್‌ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಎಲ್ಲಾ ಮುಖಂಡರು, ಕಾರ್ಯಕರ್ತರು ಡಿ.ಕೆ. ಸುರೇಶ್‌ ಗೆಲುವಿಗೆ ಶಕ್ತಿಮೀರಿ ಮತ ಹಾಕಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆದರೆ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ಮತ್ತು ಕುದೂರು ಕ್ಷೇತ್ರದಲ್ಲಿ ತಲಾ ಒಂದೊಂದು ನಿರ್ದೇಶಕ ಸ್ಥಾನವನ್ನು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪರವಾಗಿ ಬಿಟ್ಟುಕೊಡಬೇಕಿತ್ತು. ಮೈತ್ರಿ ಧರ್ಮ ಪಾಲನೆಗೆ ರಾಜ್ಯ ನಾಯಕರು ಎಚ್ಚರಿಕೆ ಕೊಡಬೇಕಿತ್ತು. ಆದರೆ ಅದನ್ನು ಮಾಡದೇ ನಿರ್ಲಕ್ಷ್ಯ ಧೋರಣೆಯಿಂದಾಗಿ ಸ್ಥಳೀಯ ಸಹಕಾರ ಸಂಘದ ಚುನಾವಣೆಯಲ್ಲಿ ಮೈತ್ರಿ ಮುರಿದಿದೆ. ಇದೇ ಡೇರಿ ನಿರ್ದೇಶಕ ಸ್ಥಾನ ಅಭ್ಯರ್ಥಿಗಳ ಸೋಲಿಗೆ ಮುಖ್ಯ ಕಾರಣ. ಲೋಕಸಭೆ ಚುನಾವಣೆ ಫ‌ಲಿತಾಂಶ ಹೊರಬಿದ್ದ ಕೂಡಲೇ ಮುಂದೆ ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ಹೇಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಶಾಸಕ ಎ.ಮಂಜು ಟಾಂಗ್‌ ನೀಡಿದ್ದಾರೆ.

ರಾಜ್ಯದ ಜೆಡಿಎಸ್‌ನ ನಾಯಕ ಎಚ್.ಡಿ.ಕುಮಾರಸ್ವಾಮಿ, ತಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್‌ ನಾಯಕರ ಮನೆಬಾಗಿಲಿಗೆ ಎಡತಾಕಲಿಲ್ಲ. ಕಾಂಗ್ರೆಸ ನಾಯಕರೇ ಜೆಡಿಎಸ್‌ ವರಿಷ್ಠರ ಮನೆಗೆ ಬಂದು ನಿಮ್ಮನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಗೊಗರೆದಿದ್ದರು. ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ 21 ಕ್ಷೇತ್ರ ಕಾಂಗ್ರೆಸ್‌ಗೆ ಮತ್ತು 7 ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಟ್ಟಿರು. ಕಾಂಗ್ರೆಸ್‌ ನಾಯಕರು ಪ್ರಾಮಾಣಿಕವಾಗಿ ಮೈತ್ರಿ ಧರ್ಮ ಪಾಲಿಸಿದ್ದರೆ ಉಭಯ ಪಕ್ಷದವರೆಲ್ಲರೂ ಗೆದ್ದಿದ್ದರೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗುತ್ತಿದ್ದರು. ಕಾಂಗ್ರೆಸ್‌ನ ಕೆಲವು ನಾಯಕರು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಕಾಂಗ್ರೆಸ್‌ ನಾಯಕರಿಂದಲೇ ರಾಹುಲ್ ಗಾಂಧಿ ಗದ್ದುಗೆಗೆ ತೊಂದರೆಯಾಗಿದೆ ಎಂದು ಎ.ಮಂಜು ಲೇವಡಿ ಮಾಡಿದರು.

ಮಾಗಡಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಂದ ಹಲವು ಬಾರಿ ನೋವನ್ನು ಅನುಭವಿಸಿ ದ್ದೇನೆ. ಈಗಲೂ ಸಹ ಮಾಗಡಿ ಮತ್ತು ಕುದೂರು ಕ್ಷೇತ್ರಕ್ಕೆ ನಡೆದ ಡೇರಿ ಚುನಾವಣೆಯಲ್ಲಿಯೂ ನೋವುಂಡಿದ್ದೇನೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಅವಧಿ ನಿಗಧಿಯಾಗಿತ್ತು. ಡೇರಿ ಚುನಾವಣೆಯಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಬಿಟ್ಟುಕೊಡಬೇಕೆಂದು ನಿಗದಿ ಮಾಡಲಾಗಿತ್ತು.

2 ಬಾರಿ ಸೋಲುಂಡಿದ್ದ ಬೋರ್‌ವೆಲ್ ನರಸಿಂಹ ಯ್ಯ ಅವರಿಗೆ ಈ ಬಾರಿ ಅವಕಾಶ ಮಾಡಿಕೊಟ್ಟಿದ್ದರೆ ಅನುಕಂಪದ ಅಲೆಯಲ್ಲಿ ಗೆಲ್ಲುತ್ತಿದ್ದರಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಎ.ಮಂಜು, ಅನು ಕಂಪ ಡೇರಿ ಚುನಾವಣೆಯಲ್ಲಿ ಕೆಲಸಕ್ಕೆ ಬಾರದು. ಏನಿದ್ದರೂ ಸಾಮಾನ್ಯ ಚುನಾವಣೆಯಲ್ಲಿ ಮಾತ್ರ ಅನುಕಂಪ ಕೆಲಸಕ್ಕೆ ಬರುತ್ತದೆ. ಈ ಡೇರಿ ಚುನಾವಣೆ ವಿಚಾರವಾಗಿ ಕ್ಷೇತ್ರದ ಆಗು ಹೋಗುಗಳೆಲ್ಲವನ್ನೂ ಸಹ ಗಮನಿಸುತ್ತಿದ್ದೇನೆ. ವಿರೋಧಿಗಳು ಹಣದ ಹೊಳೆ ಹರಿಸಿದ್ದು, ಜೆಡಿಎಸ್‌ ಅಭ್ಯರ್ಥಿಯ ಸೋಲಿಗೆ ಕಾರಣವಾಯಿತು. ನನ್ನ ಸಾಮರ್ಥ್ಯ ಏನೆಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಗೊತ್ತಾಗಿದೆ. ಈ ವಿಚಾರದಲ್ಲಿ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

Advertisement

ಅಲ್ಲದೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಸೋಲಿನ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಹಾಕಿದ ಡೇರಿ ಅಧ್ಯಕ್ಷರಿಗೆ ಪ್ರಾಮಾಣಿಕವಾಗಿ ಸಹಕರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಹೇಳಿದರು.

ತಾಪಂ ಸದಸ್ಯ ಶಂಕರ್‌, ಬೋರ್‌ವೆಲ್ ನರಸಿಂಹಯ್ಯ, ದಲಿತ ಮುಖಂಡ ಕಲ್ಕರೆ ಶಿವಣ್ಣ, ಗ್ರಾಪಂ ಸದಸ್ಯ ರಂಗಣ್ಣಿ, ಸಾಗರ್‌, ಉಮೇಶ್‌, ಶಿವರಾಮಯ್ಯ, ವೆಂಕಟೇಶ್‌ ಮತ್ತಿತರರು ಇದ್ದರು.

ಮುಂದಿನ ನಡೆ ನೋಡಿ:

ಬಮೂಲ್ ಚುನಾವಣೆಯಲ್ಲಿ ಜತೆಯಲ್ಲಿದ್ದುಕೊಂಡೆ ಮೋಸ ಮಾಡಿದ ಕಾಂಗ್ರೆಸ್‌ ವಿರುದ್ಧ ಶಾಸಕ ಎ. ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನವರು ನಮಗೆ ಬೆಂಬಲ ನೀಡಿದ್ದರೆ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುತ್ತಿದ್ದರು. ನಮ್ಮ ಮುಂದಿನ ನಡೆ ನೋಡಿ. ಅದರಲ್ಲಿ ನಾವು ಏನು ಎಂಬುದನ್ನು ಸಾಬೀತು ಪಡಿಸುತ್ತೇವೆ. ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next