Advertisement

Siddaramaiah ನಿಮ್ಮ ಬೆನ್ನಿಗೆ ನಾವಿದ್ದೇವೆ; ಸಿಎಂಗೆ ಕಾಂಗ್ರೆಸ್‌ ಹೈಕಮಾಂಡ್‌ ಅಭಯ!

12:22 AM Aug 05, 2024 | Team Udayavani |

ಬೆಂಗಳೂರು: ರಾಜ್ಯಪಾಲರ ನೋಟಿಸ್‌ ಮತ್ತು ಮೈತ್ರಿಪಕ್ಷಗಳ ಪಾದಯಾತ್ರೆ ನಡುವೆಯೂ ಮುಡಾ ಹಗರಣದ ವಿಚಾರದಲ್ಲಿ ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗಿದ್ದೇವೆ ಎಂಬ ಸಂದೇಶ ವನ್ನು ಕಾಂಗ್ರೆಸ್‌ ಹೈಕಮಾಂಡ್‌ ರವಾನಿ ಸಿದೆ. ಜತೆಗೆ ಸಂಪುಟದ ಎಲ್ಲ ಸಚಿವರು ಕೂಡ ಸಿಎಂ ಬೆಂಬಲಕ್ಕೆ ನಿಲ್ಲಬೇಕು. ಎಲ್ಲರೂ ಸೇರಿ ಕಾನೂನು ಹೋರಾಟಕ್ಕೆ ಸಜ್ಜಾಗಬೇಕು ಎಂದು ಸೂಚನೆ ನೀಡಿದೆ.

Advertisement

ಮುಖ್ಯಮಂತ್ರಿಯವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ಸಂಪುಟದ ಎಲ್ಲ ಸಚಿವರು ಭಾಗವಹಿಸಿದ್ದರು.

ಈ ವೇಳೆ ಮುಡಾ ವಿಷಯದಲ್ಲಿ ಯಾವುದೇ ಹುರುಳಿಲ್ಲ. ಇದರ ಹೊರತಾಗಿಯೂ ವಿಪಕ್ಷಗಳು ಉದ್ದೇಶ ಪೂರ್ವಕವಾಗಿ ಸಿಎಂ ಗುರಿ ಮಾಡಲು ಹೊರ ಟಿವೆ. ಇದರ ವಿರುದ್ಧ ಕಾನೂನು ಹೋರಾಟ ಮಾಡೋಣ. ಎಲ್ಲರೂ ಸಿಎಂ ಬೆನ್ನಿಗೆ ನಿಲ್ಲಬೇಕು ಎಂದು ನಿರ್ದೇಶನ ನೀಡಿದರು ಎನ್ನಲಾಗಿದೆ.

ಸಭೆಯ ಬಳಿಕ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ. ವೇಣುಗೋಪಾಲ್‌, ಗ್ಯಾರಂಟಿಗಳ ಮೂಲಕ ಉತ್ತಮ ಆಡಳಿತ ನೀಡುತ್ತಿರುವ ಸರಕಾರವನ್ನು ಉರುಳಿಸುವ ಮತ್ತೂಂದು ಪ್ರಯತ್ನವನ್ನು ಬಿಜೆಪಿ-ಜೆಡಿಎಸ್‌ ಮಾಡುತ್ತಿವೆ. ಆ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ನಾವು ಜನರ ಬಳಿಗೆ ಹೋಗುತ್ತೇವೆ. ಅವರಿಗೆ ವಾಸ್ತವಾಂಶ ವಿವರಿಸುತ್ತೇವೆ. ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಅವಧಿಯ
ಹಗರಣಗಳ ತನಿಖೆ
“ರಾಜಭವನವನ್ನು ಬಳಸಿ ಕೊಂಡು ಬಹುಮತದ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ಹೊರಡಿಸಲಾಗಿರುವ ರಾಜ್ಯಪಾಲರ ನೋಟಿಸ್‌ ವಿರುದ್ಧ ಕಾನೂನು ಹೋರಾಟ ಮಾಡಬೇಕು. ಇದರ ಜತೆಯಲ್ಲೇ ಬಿಜೆಪಿ ಅವಧಿಯಲ್ಲೂ ಸಾಕಷ್ಟು ಹಗರಣಗಳು ನಡೆದಿವೆ. ಆ ತನಿಖೆಯನ್ನು ಚುರುಕುಗೊಳಿಸಬೇಕು. ಇದರೊಂದಿಗೆ ಮೈತ್ರಿಪಕ್ಷಗಳಿಗೆ ತಿರುಗೇಟು ನೀಡಬೇಕು. ಈ ಮೂಲಕ ಕಾಂಗ್ರೆಸ್‌ನಲ್ಲಿ ಒಡಕಿದೆ ಅಥವಾ ಬಣಗಳಲ್ಲಿ ಅಸಮಾಧಾನ ಇದೆ ಎಂಬ ಚರ್ಚೆಗಳಿಗೆ ತಡೆ ಹಾಕಬೇಕು’ ಎಂದು ಇಬ್ಬರೂ ನಾಯಕರು ಸಭೆಯಲ್ಲಿ ಸಚಿವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಜನಾಂದೋಲನ ಸಮಾರೋಪಕ್ಕೆ ಇಡೀ
ಸರಕಾರ ಮೈಸೂರಲ್ಲಿರಬೇಕು: ಕಾಂಗ್ರೆಸ್‌
ಸಿದ್ದರಾಮಯ್ಯ ಅವರನ್ನು ನಾವು ನೋಡುತ್ತಿರುವುದು ಈಗಲ್ಲ. ದಶಕಗಳಿಂದ ಅವರನ್ನು ನೋಡುತ್ತಿದ್ದೇವೆ. ವಿಪಕ್ಷಗಳ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ನಿಮಗೂ ಗೊತ್ತು. ಹಾಗಾಗಿ ಬರೀ ಹೇಳಿಕೆಗಳಿಗೆ ಸೀಮಿತವಾಗದೆ, ಆಕ್ರಮಣಕಾರಿಯಾಗಿ ತಿರುಗೇಟು ನೀ ಡುವ ಕೆಲಸ ಆಗಬೇಕು. ಒಗ್ಗಟ್ಟು ಪ್ರದರ್ಶನ ಮಾಡಬೇಕು. ಪಾದಯಾತ್ರೆಗೆ ಪ್ರತಿಯಾಗಿ ನಡೆಯುತ್ತಿರುವ ಜನಾಂದೋಲನ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಆ. 9ರಂದು ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನದ ಸಮಾರೋಪದಲ್ಲಿ ಇಡೀ ಸರಕಾರ ಭಾಗವಹಿಸಬೇಕು ಎಂದು ವರಿಷ್ಠರು ಸ್ಪಷ್ಟ ಸೂಚನೆಯನ್ನು ನೀಡಿರುವುದಾಗಿ ತಿಳಿದುಬಂದಿದೆ.

ಈಚೆಗೆ ಸಿಎಂ-ಡಿಸಿಎಂ ದಿಲ್ಲಿ ಭೇಟಿ ವೇಳೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಅಸಮಾಧಾನದ ನಡುವೆಯೂ ಹೈಕಮಾಂಡ್‌ ನೈತಿಕ ಬೆಂಬಲ ನೀಡಿತ್ತು. “ಎಲ್ಲರೂ ಒಟ್ಟಾಗಿ ಇದನ್ನು ಎದುರಿಸಬೇಕು. ಆ ಮೂಲಕ ಇದನ್ನು ಸರಿಪಡಿಸಿಕೊಂಡು ಮುನ್ನುಗ್ಗಬೇಕು’ ಎಂದು ಸೂಚಿಸಿತ್ತು. ಆ ಬೆಳವಣಿಗೆಯ ಅನಂತರ ಸಚಿವ ಸಂಪುಟ ಸಭೆ ನಡೆಸಿ, ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲ, ಬಳಿಕ ಎರಡೂ ಬಣಗಳಲ್ಲಿ ಗುರುತಿಸಿಕೊಂಡಿದ್ದ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಒಗ್ಗಟ್ಟಿನ ಪ್ರದರ್ಶನ ಮಾಡಿದ್ದರು. ಈಗ ಸ್ವತಃ ಹೈಕಮಾಂಡ್‌ ಸಿಎಂ ಬೆನ್ನಿಗೆ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next