ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ ಜೀವಜಲ. ಅದನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ನೀರು ಪೋಲು ಮಾಡುವ ಕಾರಣದಿಂದಲೇ ಇಂದು ಅತಿಹೆಚ್ಚು ಮಳೆಯಾಗುವ ಪ್ರದೇಶ ದಲ್ಲೂ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ಹೇಳಿದರು.
ಬುಧವಾರ ಇಲ್ಲಿನ ಸೈಂಟ್ ಮೆರೀಸ್ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವಸ್ಪಂದನ, ಜೆಸಿಐ ಕುಂದಾಪುರ ಸಿಟಿ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನೀರಿನ ಸಂರಕ್ಷಣೆ ಕುರಿತು ನಡೆದ ಮಾಹಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನ ಮತ್ತು ನೀರು ಮಾರಾಟವಾಗುವ ಹಂತದಲ್ಲಿ ಕಲಿಯುಗದ ಅಂತ್ಯ ಆರಂಭ ಎಂಬ ಮಾತಿದೆ. ಈಗ ನೀರು ಮಾರುಕಟ್ಟೆಯ ಸರಕಾಗಿದೆ. ನೀರಿನ ಅತಿಯಾದ ಬಳಕೆಯೇ ನೀರಿನ ಸಮಸ್ಯೆಗೆ ಕಾರಣ. ನೀರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾದ ನಾವು ನೀರಿನ ಸಂರಕ್ಷಣೆ ಕಡೆಗೆ ಇನ್ನೂ ಮಹತ್ವ ನೀಡಿಲ್ಲ. ಈ ನಿಟ್ಟಿನಲ್ಲಿ ಅನೇಕ ಸಂಘ ಸಂಸ್ಥೆಗಳು ಮಾಹಿತಿ ನೀಡುವ ಶ್ಲಾಘನೀಯ ಕೆಲಸ ಮಾಡುತ್ತಿವೆ ಎಂದರು.
ಉದಯವಾಣಿಗೆ ಶ್ಲಾಘನೆ
ಉದಯವಾಣಿ ಪತ್ರಿಕೆಯಲ್ಲಿ ಜೀವ ಜಲ ಕ್ಷಾಮ ಎನ್ನುವ ಸರಣಿ ವರದಿಗಳ ಮೂಲಕ ಜನತೆಯ ಕುಡಿಯುವ ನೀರಿನ ಸಂಕಷ್ಟವನ್ನು ಎಳೆಎಳೆಯಾಗಿ ವಿವರಿಸಿ ನೀಡಲಾಗುತ್ತಿದೆ. ಈ ಮೂಲಕ ಕುಡಿಯುವ ನೀರಿನ ಸಮಸ್ಯೆ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಂಡು ನೀರು ಉಳಿಸಲು ಮುಂದಾಗಬೇಕು.
-ರಮೇಶ್ ಖಂಬದಕೋಣೆ, ಸಂಪನ್ಮೂಲ ವ್ಯಕ್ತಿ