ಮೈಸೂರು: ರಾಜ್ಯ ಸರಕಾರದ ಖಜಾನೆ ಖಾಲಿಯಾಗಿಲ್ಲ. ಗ್ಯಾರಂಟಿಗೂ ಹಣ ಕೊಟ್ಟಿದ್ದೇವೆ, ಅಭಿವೃದ್ಧಿಗೂ ಹಣ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿರುವ ತಮ್ಮ ನಿವಾಸದ ಬಳಿ ಖಾಲಿ ಚೊಂಬು ಜಾಹೀರಾತು ವಿಚಾರಕ್ಕೆ ಬಿಜೆಪಿ-ಜೆಡಿಎಸ್ ವ್ಯಂಗ್ಯ ಮಾಡಿರುವ ಕುರಿತು ಮಾತನಾಡಿದ ಸಿಎಂ, ಹಳ್ಳಿಗಳಲ್ಲಿ ಕೈಗೆ ಚೊಂಬು ಕೊಟ್ಟರು ಎನ್ನುವಂತೆ, ಬಿಜೆಪಿಯವರು 15 ಲಕ್ಷ ರೂ. ಕೊಡುತ್ತೇವೆ, ಉದ್ಯೋಗ ಕೊಡುತ್ತೇವೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದರೂ ಮಾಡಲಿಲ್ಲ. ಈ ವಿಚಾರಗಳನ್ನು ಇಟ್ಟುಕೊಂಡು ಖಾಲಿ ಚೊಂಬಿನ ಜಾಹೀರಾತು ಕೊಟ್ಟಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶ ಆಗಲಿದೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿ ಕ್ರಿ ಯಿಸಿ, ಜೆಡಿಎಸ್ ಅವರಿಗೆ ಕಾಂಗ್ರೆಸ್ ಕಂಡರೆ ಭಯ, ಈ ಕಾರಣಕ್ಕೆ ಸ್ವತಂತ್ರವಾಗಿ ಚುನಾವಣೆ ಎದುರಿಸಿಲ್ಲ. ಅವರಿಗೆ ಭಯ ಇರುವ ಕಾರಣಕ್ಕೆ ಮೈತ್ರಿ ಮಾಡಿಕೊಂಡು, ಬಿಜೆಪಿ ಜತೆಗೆ ಚುನಾವಣೆ ಎದುರಿಸುತ್ತಿದ್ದಾರೆ. ನಮಗೆ ಅವರನ್ನ ಕಂಡರೆ ಯಾವುದೇ ಭಯವಿಲ್ಲ. ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಬಿಜೆಪಿ ಜತೆಗೆ ಸೇರಿರುವ ಜೆಡಿಎಸ್‌ನವರು ಈಗ ಜಾತ್ಯತೀತ ಆಗಿ ಉಳಿದಿಲ್ಲ, ಹೀಗಾಗಿ ಅವರು “ಎಸ್’ ಅಕ್ಷರವನ್ನು ತೆಗೆದುಹಾಕಬೇಕು ಎಂದು ತಿರುಗೇಟು ನೀಡಿದರು.
ದೇಶದಲ್ಲಿ ಮೋದಿ ಅಲೆ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿಯನ್ನು ಅವಲಂಬಿಸಿದ್ದು, ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಐಎನ್‌ಡಿಐಎ ಪರವಾದ ಅಲೆ ಇದೆ. ಎಲ್ಲ ಕಡೆಗಳಲ್ಲಿ ಉತ್ತಮ ವಾತಾವರಣವಿದ್ದು, ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ.
– ಸಿದ್ದರಾಮಯ್ಯ, ಸಿಎಂ