Advertisement

ನಾವೂ ಚುನಾವಣಾ ಸಮೀಕ್ಷೆ ಮಾಡಿಸಿದ್ದೇವೆ

08:17 AM Dec 09, 2017 | Team Udayavani |

ಮೈಸೂರು: “ಮುಂಬರುವ ವಿಧಾನಸಭಾ ಚುನಾವಣೆ ನಂತರ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗುವುದಿಲ್ಲ, ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆಂದು’ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

Advertisement

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲ ಖಾಸಗಿ ಸುದ್ದಿ ವಾಹಿನಿಗಳು ಹಾಗೂ ಸಂಸ್ಥೆಗಳು ಸಮೀಕ್ಷಾ ವರದಿ ಪ್ರಕಟಿಸಿರುವಂತೆ ಫ‌ಲಿತಾಂಶ ಬರುವುದಿಲ್ಲ. ಚುನಾವಣಾ ಸಮೀಕ್ಷೆಗಳು ಸಂಪೂರ್ಣವಾಗಿ ನಂಬಲರ್ಹವಲ್ಲ. ನಾವೂ ಆಂತರಿಕವಾಗಿ ಸಮೀಕ್ಷೆ ಮಾಡಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಿತಿ ಹೇಗಿದೆ ಎಂಬುದು ನಮಗೂ ಗೊತ್ತಿದೆ. ಆದರೆ, ಈಗ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಜಾತ್ಯತೀತ ಪಕ್ಷವಾಗಿ ಕಾಂಗ್ರೆಸ್‌ ರಾಜ್ಯದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ರಾಜ್ಯದಲ್ಲಿ ಕೋಮುವಾದಿಗಳನ್ನು
ಮಟ್ಟಹಾಕಲು ಬೇರೆಯವರ ಸಹಾಯ ಪಡೆಯಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.

ಯಡಿಯೂರಪ್ಪಗೆ ಭ್ರಮೆ: ಚುನಾವಣೆ ನಂತರ ಸಿಎಂ ಸಿದ್ದರಾಮಯ್ಯ, ಗಂಟು-ಮೂಟೆ ಕಟ್ಟಿಕೊಂಡು ಮೈಸೂರಿಗೆ ಹೋಗುತ್ತಾರೆಂಬ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಂಬ ಭ್ರಮೆಯಲ್ಲಿದ್ದಾರೆ, ಆದರೆ ಅದು ಸಾಧ್ಯವಾಗುವುದಿಲ್ಲ. ಯಾವ ಕಾರಣಕ್ಕೂ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

ನಾಲಗೆಯೇ ಅವರ ಸಂಸ್ಕೃತಿ ಹೇಳುತ್ತದೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ,
ಅವರ ನಾಲಗೆಯೇ ಅವರ ಸಂಸ್ಕೃತಿ ಹೇಳುತ್ತದೆ, ನಾನು, ಮಹದೇವಪ್ಪ ಇಬ್ಬರೂ ಹಳ್ಳಿಯಿಂದ ಬಂದವರು. ನಮಗೂ ಅವರಿಗಿಂತ  ಕೆಟ್ಟದಾಗಿ ಬಯ್ಯಲು ಬರುತ್ತೆ. ಆದರೆ, ಅದು ಸಂಸ್ಕೃತಿಯಲ್ಲ. ಪ್ರಧಾನಿ ಮೋದಿ ಅವರನ್ನು ನೀಚ ಎಂದು ಕರೆದ ಮಣಿಶಂಕರ್‌ ಅಯ್ಯರ್‌ ಅವರನ್ನು  ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ. ಇದು ನಮ್ಮ ಪಕ್ಷದಲ್ಲಿರುವ ಶಿಸ್ತಿಗೆ ಸಾಕ್ಷಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಕತ್ತಿ ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ: ಪರಮೇಶ್ವರ್‌
ಬೆಂಗಳೂರು: “ಬಿಜೆಪಿ ನಾಯಕ ಉಮೇಶ್‌ ಕತ್ತಿ ಕಾಂಗ್ರೆಸ್‌ಗೆ ಸೇರುವುದಾದರೆ ಸ್ವಾಗತಿಸುವುದಾಗಿ’ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್‌ ಕತ್ತಿ ಕಾಂಗ್ರೆಸ್‌ ಸೇರುವ ಬಗ್ಗೆ ನನ್ನ ಹಂತದಲ್ಲಿ  ಯಾವುದೇ ಮಾತುಕತೆಯಾಗಿಲ್ಲ. ಸಿಎಂ ಜತೆ ಮಾತುಕತೆಯಾಗಿರುವ ಬಗ್ಗೆಯೂ ಮಾಹಿತಿಯಿಲ್ಲ. ಒಂದು
ವೇಳೆ ಕತ್ತಿಯವರು ಕಾಂಗ್ರೆಸ್‌ ಸೇರಲು ಒಲವು ತೋರಿದರೆ ಬೆಳಗಾವಿ ಜಿಲ್ಲಾ ಮುಖಂಡರ ಅಭಿಪ್ರಾಯ ಪಡೆದು ತೀರ್ಮಾನಿಸಲಾಗುವುದು ಎಂದರು. ಬಿಜೆಪಿಯ ಬಗ್ಗೆ ಉಮೇಶ್‌ ಕತ್ತಿ ಮಾತನಾಡಿರುವುದನ್ನು ನೋಡಿದರೆ, ಬಿಜೆಪಿಯಲ್ಲಿ ವಾಕ್‌ ಸ್ವಾತಂತ್ರ್ಯವಿಲ್ಲ ಎಂದು ಹೇಳಿರುವುದು ನಂಬಲೇಬೇಕು. ಬಿಜೆಪಿಯಲ್ಲಿ ಯಡಿಯೂರಪ್ಪ ಕೆಜೆಪಿ ಮತ್ತು ಬಿಜೆಪಿ ಎಂಬ ಎರಡು ಗುಂಪುಗಳಾಗಿವೆ. 

Advertisement

ಯಡಿಯೂರಪ್ಪ ಅವರನ್ನು ಚುನಾವಣೆಯಲ್ಲಿ ಬಳಸಿಕೊಂಡು ಅವರನ್ನು ಹಿಂದೆ ಹಾಕುವ ಲಕ್ಷಣಗಳು ಕಾಣುತ್ತಿವೆ ಎಂದು ಪರಮೇಶ್ವರ್‌ ಅನುಮಾನ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next