Advertisement

ಮೀಸಲಿಗೆ ಕಾಯುವ ವ್ಯವಧಾನ ನಮಗಿಲ್ಲ

01:13 PM May 06, 2022 | Team Udayavani |

ರಾಮದುರ್ಗ: ಇಲ್ಲಿಯವರೆಗೆ ನಮ್ಮನ್ನಾಳಿದ ಎಲ್ಲ ಸರಕಾರಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡು ಬಂದಿವೆ. ಇನ್ನು ಕಾಯುವ ವ್ಯವಧಾನ ನಮಗಿಲ್ಲ. ಮುಖ್ಯಮಂತ್ರಿಗಳು ಮೀಸಲಾತಿ ಘೋಷಿಸದಿದ್ದರೆ ಎರಡು ತಿಂಗಳ ನಂತರ ಬೆಂಗಳೂರಲ್ಲಿ 25 ಲಕ್ಷ ಜನ ಸೇರಿಸಿ ಬೃಹತ್‌ ಪ್ರತಿಭಟನೆ ಮಾಡಿ ನಮ್ಮ ಮುಂದಿನ ನಡೆಯನ್ನು ತಿಳಿಸಬೇಕಾಗುತ್ತದೆ ಎಂದು ಕೇಂದ್ರ ಮಾಜಿ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತೇರ ಬಜಾರದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರದ 2ಎ ಮೀಸಲಾತಿ ಹಾಗೂ ಕೇಂದ್ರ ಸರಕಾರದ ಓಬಿಸಿ ಮೀಸಲಾತಿಗಾಗಿ ಒತ್ತಾಯಿಸಿ ಹಮ್ಮಿಕೊಂಡ ಮೀಸಲಾತಿ ಹಕ್ಕೋತ್ತಾಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

15 ತಿಂಗಳುಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸಿಎಂ ಬೊಮ್ಮಾಯಿ ಅವರ ಭರವಸೆಯಿಂದ ಈವರೆಗೆ ನಾವು ಸುಮ್ಮನಿದ್ದೇವೆ. ಆದರೆ ಕಾಲ ಬದಲಾಗಿದೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ ಭರವಸೆ ಈಡೇರಿಸಲಾಗದೆ ಸ್ಥಾನದಿಂದ ಇಳಿದರು. ಬೊಮ್ಮಾಯಿ ಅವರಿಗೆ ತಿಳಿಸಿದ್ದೇವೆ. ನೀವು ಭರವಸೆ ಈಡೇರಿಸದಿದ್ದರೆ ನೀವು ಇಳಿಯುತ್ತೀರಿ ಎಂದು ಹೇಳಿದರು.

ನಮ್ಮ ಸಮಾಜಕ್ಕಾಗಿ ಮಾತ್ರ ನಾವು ಹೋರಾಟ ಮಾಡಿಲ್ಲ. ಇಂದು ಹಾಲುಮತ ಸಮಾಜ ಎಸ್‌ಟಿ ಗಾಗಿ ಹೋರಾಟ ಮಾಡಿದ್ದಾರೆ. ವಾಲ್ಮೀಕಿ ಸಮಾಜ 3 ರಿಂದ ಶೇ. 7.5ಗೆ ಹೆಚ್ಚಿಸುವುದಕ್ಕಾಗಿ, ಆದಿ ಬಣಜಿಗ, ಕೂಡು ಒಕ್ಕಲಿಗ ಹಡಪದ ಸಮಾಜ ಹೀಗೆ ಹಲವು ಸಮಾಜಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಶೇ.70 ಕ್ಕಿಂತ ಅಧಿಕ ಶ್ರೀಮಂತರು ಇರುವ ಕೆಲ ಸಮಾಜದವರು 2ಎ ಮೀಸಲಾತಿಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ ಅವರ ಪ್ರಕಾರ ಮೀಸಲಾತಿಯನ್ನು ಕಾಲಕಾಲಕ್ಕೆ ಆಯಾ ಸಮಾಜದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ನೋಡಿಕೊಂಡು ನೀಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಆದರೇ ಕೆಲವು ರಾಜಕೀಯ ಮುಖಂಡರಿಗೆ ಒಂದು ಜಾತಿಯ ಬಗ್ಗೆ ಹೋರಾಟ ಮಾಡಿದರೆ ಅನ್ಯ ಸಮಾಜದವರ ಮತಗಳ ಬಗ್ಗೆ ಹೆದರಿಕೆ ಉಂಟಾಗುತ್ತದೆ ಎಂದು ದೂರವಿರುವ ನಾಯಕರ ಕ್ರಮದ ಬಗ್ಗೆ ಯತ್ನಾಳ ಕಿಡಿಕಾರಿದರು.

Advertisement

ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಬಡ ಮಕ್ಕಳ ಶೆ„ಕ್ಷಣಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಅಸ್ಮಿತೆಗಾಗಿ ರಾಜ್ಯಾದ್ಯಂತ ಹಮ್ಮಿಕೊಂಡ ಮೀಸಲಾತಿ ಹೋರಾಟ ರಾಮದುರ್ಗ ತಾಲೂಕಿನಿಂದ ಆರಂಭಿಸಿದ್ದೇವೆ. ಎಲ್ಲ ಸರಕಾರಗಳು ಕೇವಲ ಭರವಸೆಯ ಮಾತುಗಳನ್ನಾಡುತ್ತಿವೆ ವಿನಃ ಮೀಸಲಾತಿ ನೀಡುವ ಕೆಲಸ ಮಾಡುತ್ತಿಲ್ಲ. ಈಗಿನ ಮುಖ್ಯಮಂತ್ರಿಗಳು ಭರವಸೆ ಈಡೇರಿಸದಿದ್ದರೆ ಸಮುದಾಯದ ಮುಂದಿನ ನಿರ್ಧಾರಗಳನ್ನು ಎದುರಿಸಬೇಕಾಗುತ್ತದೆ ಎಂದು ಸಮಾವೇಶದ ಮೂಲಕ ಪರೋಕ್ಷ ಎಚ್ಚರಿಕೆ ನೀಡಿದರು.

ನ್ಯಾಯವಾದಿ ಪಿ.ಎಫ್‌. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರ್ಲಾಪೂರ ಢವಳೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷ ಮಾರುತಿ ಕೊಪ್ಪದ, ಬಿ.ಎಫ್‌. ಬಸಿಡೋಣಿ, ಸಿ.ಬಿ. ಪಾಟೀಲ, ಶ್ರೀದೇವಿ ಮಾದನ್ನವರ, ಡಾ| ಬಸವರಾಜ ಪಾಟೀಲ, ಲಕ್ಷ್ಮೀ ಆರಿಬೆಂಚಿ ಸೇರಿದಂತೆ ಹಲವರು ಇದ್ದರು. ಜಿ.ಬಿ. ಪಾಟೀಲ ಸ್ವಾಗತಿಸಿದರು. ಸುಮಂಗಲಾ ಕಳಸಪ್ಪನವರ ನಿರೂಪಿಸಿ, ವಂದಿಸಿದರು.

ಬೃಹತ್‌ ಪ್ರತಿಭಟನಾ ರ್ಯಾಲಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಇಂದು ತಾಲೂಕಿನ ಎಲ್ಲೆಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಹುತಾತ್ಮ ಚೌಕ್‌, ಹಳೇ ಬಸ್‌ನಿಲ್ದಾಣ ಮುಂಭಾಗದಿಂದ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next