Advertisement

ನೀರು ನೀಡದ ಪಂಚಾಯತ್‌ ಅಗತ್ಯ ನಮಗಿಲ್ಲ

03:01 PM Mar 29, 2019 | Team Udayavani |
ಚಿತ್ರದುರ್ಗ: ಕುಡಿಯುವ ನೀರು ಕೊಡಲು ಆಗದಿದ್ದರೆ ಪಂಚಾಯತ್‌ಗೆ ಕಾಯಂ ಆಗಿ ಬೀಗ ಹಾಕಿ ಬಿಡಿ. ನೀರು ನೀಡದ ಪಂಚಾಯತ್‌ ಅಗತ್ಯ ನಮಗಿಲ್ಲ ಎಂದು ಆರೋಪಿಸಿ ತಾಲೂಕಿನ ಹುಲ್ಲೂರು ಗ್ರಾಮಸ್ಥರು ಗುರುವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಅಲ್ಲದೆ ಗ್ರಾಮ ಪಂಚಾಯತ್‌ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಹುಲ್ಲೂರು ಗ್ರಾಮ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಆದರೂ ನೀರು ನೀಡುವ ಕೆಲಸ ಮಾಡಿಲ್ಲ. ಹಲವು ಬಾರಿ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಮನವಿ ಮಾಡಿ ನೀರು ಕೇಳಿದ್ದೇವೆ. ಕಳೆದ 2-3 ತಿಂಗಳಿನಿಂದ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಗ್ರಾಮದ ಕೊಳವೆಬಾವಿಗಳಲ್ಲಿ ಬರುತ್ತಿದ್ದ ಅಲ್ಪ ಸ್ವಲ್ಪ ನೀರಿನ ಜೊತೆಗೆ ಪಕ್ಕದ ಹಳ್ಳಿಗಳಾದ ಸಿಂಗಾಪುರ, ಬೆಟ್ಟದ ನಾಗೇನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಿಂದ ನೀರು ತರಬೇಕಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಈಗ ಎಲ್ಲೂ ನೀರು ಸಿಗುತ್ತಿಲ್ಲ ಎಂದು ಆರೋಪಿಸಿದರು.
ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಗ್ರಾಪಂಗೆ ಮುತ್ತಿಗೆ ಹಾಕಿದ್ದರು. ಕುಡಿಯುವ ನೀರು ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಟ್ಯಾಂಕರ್‌ ನೀರನ್ನಾದರೂ ಕೊಡಿ ಟ್ಯಾಂಕರ್‌ ನೀರನ್ನಾದರೂ ಕೊಡಿ
ಹುಲ್ಲೂರು ಗ್ರಾಮದಲ್ಲಿ ನೀರಿಗೆ ಇಷ್ಟೊಂದು ಸಮಸ್ಯೆ ಇದ್ದರೂ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿಲ್ಲ. ಜನರು
ಪಕ್ಕದ ಹಳ್ಳಿಯಿಂದ ನೀರು ತಂದು ಬೇಸತ್ತು ಹೋಗಿದ್ದಾರೆ. ಕೊಳವೆಬಾವಿಗಳು ಬತ್ತಿ ಹೋಗಿ ಸಮಸ್ಯೆ ಸೃಷ್ಟಿಯಾಗಿದೆ.
ಆದ್ದರಿಂದ ಕೂಡಲೇ ಟ್ಯಾಂಕರ್‌ ನೀರು ಸರಬರಾಜು ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಗ್ರಾಮಸ್ಥರಾದ ಕಲ್ಲೇಶ್‌, ಅಜ್ಜಪ್ಪ
ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ ಮಾತನಾಡಿ, ಕಳೆದ ಬಾರಿ ಟ್ಯಾಂಕರ್‌ ನೀರು ಪೂರೈಕೆ ಮಾಡಿದ ಹಣ ನೀಡಿಲ್ಲವಾದ್ದರಿಂದ ಯಾರು ಸಹ ನೀರು ಸರಬರಾಜು ಮಾಡುತ್ತಿಲ್ಲ. ಹಳೆ ಬಾಕಿ ಕೊಟ್ಟು ಯಾರ ಬಳಿಯಾದರೂ ನೀರು ತರಿಸಿಕೊಳ್ಳಿ ಎಂದು ಸ್ಥಳೀಯ ಟ್ಯಾಂಕರ್‌ ಮಾಲೀಕರು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಬಗ್ಗೆ ಮನವರಿಕೆ ಮಾಡುತ್ತೇವೆ. ಇಂದು ಸಂಜೆಯೊಳಗೆ  ಜನರಿಗೆ ನೀರು ನೀಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next