Advertisement

ದೇಹ ಕೊಂಡೊಯ್ಯೋ ಆರ್ಥಿಕ ಬಲ ನಮಗಿಲ್ಲ!

12:26 PM Dec 11, 2018 | |

ಬೆಂಗಳೂರು: “ಬೆಂಗಳೂರಲ್ಲಿ ಅಸಹಜವಾಗಿ ಮೃತಪಟ್ಟ ನಮ್ಮ ಪುತ್ರಿ ಕರೆನ್‌ ಡ್ಯಾನಿಯಲ್‌ ದೇಹವನ್ನು ಕೊಲಂಬಿಯಾಗೆ ಕೊಂಡೊಯ್ಯುವಷ್ಟು ಆರ್ಥಿಕ ಸಧೃಡತೆ ನಮಗಿಲ್ಲ. ಹೀಗಾಗಿ ಕರೆನ್‌ಳ ಅಂತ್ಯ ಸಂಸ್ಕಾರ ನಡೆಸಲು ಆಕೆಯ ಸ್ನೇಹಿತೆ ನೌರಾಗೆ ಸಂಪೂರ್ಣ ಒಪ್ಪಿಗೆಯಿದೆ’.

Advertisement

ಭಾನುವಾರ ಮುಂಜಾನೆ ಹಳೇ ವಿಮಾನ ನಿಲ್ದಾಣ ರಸ್ತೆಯ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟ ಕೊಲಂಬಿಯಾ ಮೂಲದ ಕರೆನ್‌ ಪೋಷಕರು ಸೋಮವಾರ ನಗರ ಪೊಲೀಸರಿಗೆ ಕಳುಹಿಸಿಕೊಟ್ಟ ನಿರಾಕ್ಷೇಪಣಾ (ಎನ್‌ಒಸಿ) ಪತ್ರದ ಸಾರಾಂಶವಿದು.

ಅಪಾರ್ಟ್‌ಮೆಂಟ್‌ನಿಂದ ಬಿದ್ದು ಕರೆನ್‌ ಮೃತಪಟ್ಟ ಬಳಿಕ ಜೀವನ್‌ ಭೀಮಾನಗರ ಠಾಣೆ ಪೊಲೀಸರು, ಕೊಲಂಬಿಯಾ ರಾಯಭಾರ ಕಚೇರಿ ಹಾಗೂ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದರು. ಈ ವಿಷಯ ತಿಳಿದ ಪೋಷಕರು, ಮಗಳ ಮೃತದೇಹ ಕೊಂಡೊಯ್ಯುವಷ್ಟೂ ಆರ್ಥಿಕ ಸಾಮರ್ಥ್ಯ ತಮಗಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

“ಮಗಳ ಅಕಾಲಿಕ ಸಾವು ನಮ್ಮನ್ನು ಶೋಕದಲ್ಲಿ ಮುಳುಗಿಸಿದೆ. ಆಕೆ ಆತ್ಮಕ್ಕೆ ಶಾಂತಿ ಸಿಗಲಿ. ಆರ್ಥಿಕ ಸಂಕಷ್ಟ ಹಾಗೂ ಇನ್ನಿತರೆ ಕಾರಣಗಳಿಂದ ನಮಗೆ ಬೆಂಗಳೂರಿಗೆ ಬರಲು ಆಗುತ್ತಿಲ್ಲ. ಹೀಗಾಗಿ, ಡ್ಯಾನಿಯಲ್‌ ಸ್ನೇಹಿತೆ ನೌರಾ, ಅಂತಿಮ ಸಂಸ್ಕಾರವನ್ನು ಕ್ರಿಶ್ಚಿಯನ್‌ ಕ್ಯಾಥೋಲಿಕ್‌ ಧರ್ಮದ ವಿಧಿ ವಿಧಾನಗಳ ಅನ್ವಯ ನೆರವೇರಿಸಲು ನಾವು ಒಪ್ಪಿಗೆ ನೀಡುತ್ತಿದ್ದೇವೆ’ ಎಂದು ಸಹಿ ಮಾಡಿ ಎನ್‌ಒಸಿ ಕಳುಹಿಸಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಕರೆನ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ, ಅಂತ್ಯ ಸಂಸ್ಕಾರಕ್ಕಾಗಿ ನೌರಾ ಅವರ ವಶಕ್ಕೆ ಒಪ್ಪಿಸಲಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

ಕುಟುಂಬಕ್ಕೆ ಆಧಾರವಾಗಿದ್ದ ಕರೆನ್‌: ಸ್ಪಾನಿಷ್‌, ಅಮೆರಿಕನ್‌ ಇಂಗ್ಲಿಷ್‌ ಸೇರಿ ಹಲವು ಭಾಷೆಗಳಲ್ಲಿ ಪರಿಣತಳಾಗಿದ್ದ ಕರೆನ್‌, ನಗರದ ಹೋಟೆಲೊಂದರಲ್ಲಿ ಭಾಷಾಂತರಕಾರಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಾಸಿಕ ವೇತನದಲ್ಲಿ ಇಂತಿಷ್ಟು ಹಣವನ್ನು ಕೊಲಂಬಿಯಾದಲ್ಲಿದ್ದ ಪೋಷಕರಿಗೆ ಕಳಿಸುತ್ತಿದ್ದರು. ಸದ್ಯದಲ್ಲಿಯೇ ಸ್ವದೇಶಕ್ಕೆ ವಾಪಸಾಗಲು ಕರೆನ್‌ ನಿರ್ಧರಿಸಿದ್ದರು.

ಅಷ್ಟರಲ್ಲಿಯೇ ಈ ದುರಂತ ಸಂಭವಿಸಿದೆ ಎಂದು ಆಕೆಯ ಸ್ನೇಹಿತರು ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ಕರೆನ್‌ ಆಯತಪ್ಪಿ ಕೆಳಗೆ ಬಿದ್ದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಪ್ರಕರಣವನ್ನು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಮತ್ತಷ್ಟು ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next